ಜಡ್ಜ್ ಲೋಯಾ ಅನುಮಾನಸ್ಪದ ಸಾವಿನ ಪ್ರಕರಣದ ಮರುತನಿಖೆ?

LOYA
Published on

ಮುಂಬೈ: ಸಿಬಿಐ ವಿಶೇಷ ನ್ಯಾಯಾಲಯದ ಜಡ್ಜ್ ಆಗಿದ್ದ ಬಿ.ಎಚ್.ಲೋಯಾ ಅನುಮಾನಸ್ಪದ ಸಾವಿನ ಪ್ರಕರಣವನ್ನು ಸಾಕ್ಷ್ಯಾಧಾರ ಪರಿಶೀಲಿಸಿ ಮರುತನಿಖೆ ನಡೆಸಲು ನಿರ್ಧರಿಸಲಾಗುವುದು ಎಂದು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಹೇಳಿದ್ದಾರೆ. ಜಡ್ಜ್ ಲೋಯಾ ಶಂಕಾಸ್ಪದ ಸಾವಿನ ಬಗ್ಗೆ ಸೂಕ್ತ ಪುರಾವೆ ಸಹಿತ ದೂರು ಬಂದರೆ ಪ್ರಕರಣವನ್ನು ಮರುತನಿಖೆ ನಡೆಸುವ ಬಗ್ಗೆ ಸರ್ಕಾರ ಪರಿಶೀಲಿಸಲಿದೆ ಎಂದು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್​ಸಿಪಿ)ವಕ್ತಾರರೂ ಆಗಿರುವ ಮಲಿಕ್ ತಿಳಿಸಿದ್ದಾರೆ.

ಗುಜರಾತ್​ನ ಸೊಹ್ರಾಬುದ್ದೀನ್ ಶೇಖ್ ಮತ್ತು ಅವರ ಪತ್ನಿ ನಕಲಿ ಎನ್​ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ಬಿ.ಎಚ್.ಲೋಯಾ, ಸಹೋದ್ಯೋಗಿಯ ಮಗಳ ಮದುವೆಗೆಂದು ನಾಗಪುರಕ್ಕೆ ತೆರಳಿದ್ದಾಗ 2014ರ ಡಿ.1ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದು ಅಸಹಜ ಸಾವು ಎಂದು ದೂರಲಾದ ಕಾರಣ ಈ ಬಗ್ಗೆ ತನಿಖೆ ನಡೆಸಲಾಗಿತ್ತು.

ಜಡ್ಜ್ ಲೋಯಾ ಸಾವು ಸ್ವಾಭಾವಿಕ ಎಂದು ಸುಪ್ರೀಂಕೋರ್ಟ್ ಕೂಡ ಹೇಳಿದೆ. ಸೊಹ್ರಾಬುದ್ದೀನ್ ನಕಲಿ ಎನ್​ಕೌಂಟರ್ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ (ಆಗ ಗುಜರಾತ್​ನ ಸಚಿವ) ವಿರುದ್ಧವೂ ಆರೋಪ ಕೇಳಿ ಬಂದಿತ್ತು. ಬಳಿಕ ಅವರಿಗೆ ಕೋರ್ಟ್ ಕ್ಲೀನ್​ಚೀಟ್ ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net