

ಮುಂಬೈ: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಪತ್ರಕರ್ತ ಅರ್ನಬ್ ಗೋಸ್ವಾಮಿಗೆ ಶುಕ್ರವಾರವೂ ಜಾಮೀನು ಸಿಕ್ಕಿಲ್ಲ. ಈ ಕುರಿತ ಅರ್ಜಿಯ ವಿಚಾರಣೆಯನ್ನು ಶನಿವಾರ ನಡೆಸುವುದಾಗಿ ಕೋರ್ಟ್ ಹೇಳಿದೆ. ಹೀಗಾಗಿ ಅವರು ಇನ್ನೊಂದು ದಿನ ಜೈಲಿನಲ್ಲಿ ಕಳೆಯುವಂತಾಗಿದೆ.
ತಮ್ಮನ್ನು ಅಕ್ರಮವಾಗಿ ಬಂಧಿಸಿರುವುದು ಹಾಗೂ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಕೋರಿ ಅರ್ನಬ್ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಬುಧವಾರ ಅವರನ್ನು ಬಂಧಿಸಿದ್ದ ಪೊಲೀಸರು, ಆಲಿಬಾಗ್ನ ಕೋರ್ಟ್ಗೆ ಹಾಜರುಪಡಿಸಿದ್ದರು. ಕೋರ್ಟ್ ಅವರನ್ನು 14 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಿತ್ತು. ಇದನ್ನು ಪ್ರಶ್ನಿಸಿ ಅವರು ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಎರಡು ವರ್ಷದ ಹಿಂದೆ ವಿನ್ಯಾಸಕಾರ ಅನ್ವಯ್ ನಾಯಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಅರ್ನಬ್ ಗೋಸ್ವಾಮಿಯನ್ನು ಪೊಲೀಸರು ಬಂಧಿಸಿದ್ದರು.
ಗೋಸ್ವಾಮಿಗೆ ಎಚ್ಚರಿಕೆ: ಕೋರ್ಟ್ನಲ್ಲಿ ಘನತೆಯಿಂದ ವರ್ತಿಸುವಂತೆ ನ್ಯಾ. ಪಿಂಗಳೆ ಅವರು ಅರ್ನಬ್ಗೆ ಎಚ್ಚರಿಕೆ ನೀಡಿದರು. ಆರೋಪಿಯಂತೆ ವರ್ತಿಸಿ, ಕಲಾಪಗಳಿಗೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸಬೇಡಿ ಎಂದು ಅವರು ಎಚ್ಚರಿಕೆ ನೀಡಿದರು. ತನಗಾಗಿರುವ ಗಾಯವನ್ನು ತೋರಿಸಲು ಅರ್ನಾಬ್ ವೇದಿಕೆ ಮೇಲೆ ಹತ್ತಲು ಪ್ರಯತ್ನಿಸಿದಾಗ ಪಿಂಗಳೆ ಅದಕ್ಕೆ ಅವಕಾಶ ಕೊಡದೆ ಕೋರ್ಟ್ನಲ್ಲಿ ಸರಿಯಾಗಿ ನಡೆದುಕೊಳ್ಳುವಂತೆ ತಾಕೀತು ಮಾಡಿದರು.
ಬಂಧನಕ್ಕೆ ತಡೆ: ಮಹಾರಾಷ್ಟ್ರ ಸರ್ಕಾರದ ಹಕ್ಕುಚ್ಯುತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಬ್ ಗೋಸ್ವಾಮಿ ಬಂಧನಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ಪಡೆ ನೀಡಿದೆ. ಜತೆಗೆ ವಿಧಾನಸಭೆ ಕಾರ್ಯದರ್ಶಿ ವಿರುದ್ಧ ಅಸಮಾಧಾನ ಹೊರಹಾಕಿದೆ. ವಿಧಾನ ಮಂಡಳದ ವಿಚಾರ ಗೌಪ್ಯವಾಗಿದ್ದು, ಅದನ್ನು ಕೋರ್ಟ್ನಲ್ಲಿ ಪ್ರಸ್ತುತ ಪಡಿಸಬಾರದು ಎಂದು ವಿಧಾನಸಭೆ ಕಾರ್ಯದರ್ಶಿ ಅರ್ನಬ್ಗೆ ಪತ್ರ ಬರೆದು ಎಚ್ಚರಿಸಿದ್ದರು. ಇದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, ವಿಧಾನಸಭೆ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ.