ಪತ್ರಿಕೋದ್ಯಮ ಕೋರ್ಸ್​ ಬಂದ್​!

klr vv story
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ.
Published on

ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಹೊಸ ಕೋರ್ಸ್​ಗಳ ಪರಿಚಯ ಮಾಡುವ ಬದಲು ಇರುವ ಕೋರ್ಸ್​ಗಳನ್ನೇ ಮುಚ್ಚಿದ್ದು, ವಿವಿ ಬಡ ವಿದ್ಯಾರ್ಥಿಗಳಿಂದ ದೂರವಾಗುತ್ತಿರುವ ಆತಂಕ ಎದುರಾಗಿದೆ.

ವಿವಿಯಿಂದ 2025-26ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿಗೆ ವಿವಿಧ ವಿಭಾಗಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಇದಕ್ಕೂ ಮೊದಲೇ ವಿದ್ಯಾರ್ಥಿಗಳ ಕೊರತೆ ನೆಪವೊಡ್ಡಿ ಪತ್ರಿಕೋದ್ಯಮ ಹಾಗೂ ಸಂವಹನ ಮಾಧ್ಯಮ ಸ್ನಾತಕೋತ್ತರ ಕೋರ್ಸ್​ ಮುಚ್ಚಲಾಗಿದ್ದು, ಜತೆಗೆ ಇಂಗ್ಲಿಷ್​ ವಿಭಾಗವನ್ನೂ ಮುಚ್ಚಲಾಗುತ್ತಿದೆ ಎಂದು ಮಾತುಗಳು ಕೇಳಿ ಬಂದಿವೆ. ಈ ಎಲ್ಲದರಿಂದ ಪದವಿ ನಂತರ ಸ್ನಾತಕೋತ್ತರ ವ್ಯಾಸಂಗಕ್ಕೆ ಎಲ್ಲಿಗೆ ಹೋಗಬೇಕು ಎಂಬ ಚಿಂತೆ ಕಾಡುತ್ತಿದೆ.

ದಾಖಲಾತಿ ಕೊರತೆಯ ನೆಪವೊಡ್ಡಿ ಪತ್ರಿಕೋದ್ಯಮ ವಿಭಾಗ ಮುಚ್ಚಿದ್ದು ಈ ವಿಭಾಗಕ್ಕೆ ನೇಮಿಸಿಕೊಂಡಿರುವ ಅತಿಥಿ ಉಪನ್ಯಾಸಕರನ್ನು ಮುಂದುವರಿಸದಿರಲು ನಿರ್ಧರಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

* ಸಮಿತಿ ವರದಿ ಮೇಲೆ ಕ್ರಮ

ಪತ್ರಿಕೋದ್ಯಮ ವಿಭಾಗ ಹಾಗೂ ಇಂಗ್ಲಿಷ್​ ವಿಭಾಗಕ್ಕೆ ಕಡಿಮೆ ಅರ್ಜಿ ಬರುತ್ತಿರುವ ನಿಟ್ಟಿನಲ್ಲಿ ಎರಡು ವಿಭಾಗಗಳಿಗೆ ಅರ್ಜಿ ಆಹ್ವಾನಿಸಬೇಕೇ&ಬೇಡವೇ ಎಂಬುದರ ಬಗ್ಗೆ ತೀಮಾರ್ನಿಸಲು ಸ್ನಾತಕೋತ್ತರ ವಿಭಾಗದ ನಿರ್ದೇಶಕಿ ಪ್ರೊ.ಡಿ.ಕುಮುದಾ ಅಧ್ಯಕ್ಷತೆಯಲ್ಲಿ ಸಿಂಡಿಕೇಟ್​ ಸದಸ್ಯರಾದ ಜೈದೀಪ್​, ಸೀಸಂದ್ರ ಗೋಪಾಲಗೌಡ, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾದ ರಾಗೀತ ರಾಜೇಂದ್ರ, ಆರ್​.ಶೋಭಿತಾ ಶಾಂತಕುಮಾರಿ ಹಾಗೂ ಬೋಧಕೇತರ ಸಿಬ್ಬಂದಿ ಎಂ.ಸಿ.ಶಿವಕುಮಾರ್​ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿ ಸಮಿತಿ ರಚನೆ ಮಾಡಲಾಗಿತ್ತು. 2021ರಿಂದ 2024ರವರೆಗಿನ ಶೈಕ್ಷಣಿಕ ಸಾಲಿನ ಅಂಕಿ&ಅಂಶ ಪರಿಶೀಲಿಸಿ, ಎರಡೂ ವಿಭಾಗಗಳಿಗೆ ಕಡಿಮೆ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುತ್ತಿರುವ ಕಾರಣ, ಹೆಚ್ಚಿನ ಆರ್ಥಿಕ ಹೊರೆ ಉಂಟಾಗಿರುವ ಬಗ್ಗೆಯೂ ಚರ್ಚಿಸಿ ವರದಿ ಸಮಿತಿ ವರದಿ ಸಲ್ಲಿಸಿದ್ದರಿಂದ ಪತ್ರಿಕೋದ್ಯಮ ವಿಭಾಗ ಮುಚ್ಚಲಾಗಿದೆ.

* ಇಂಗ್ಲಿಷ್​ ವಿಭಾಗಕ್ಕೆ ಸಡಿಲಿಕೆ

2024&25ನೇ ಸಾಲಿನ ಪ್ರಕಾರ ಇಂಗ್ಲಿಷ್​ ವಿಭಾಗದ 4ನೇ ಸೆಮಿಸ್ಟರ್​ನಲ್ಲಿ 10 ವಿದ್ಯಾರ್ಥಿಗಳಿದ್ದು, 2ನೇ ಸೆಮಿಸ್ಟರ್​ನಲ್ಲಿ 8 ಮಂದಿ ಇದ್ದಾರೆ. ಪತ್ರಿಕೋದ್ಯಮ ವಿಭಾಗದ 4ನೇ ಸೆಮಿಸ್ಟರ್​ನಲ್ಲಿ ಕೇವಲ ಒಬ್ಬ ವಿದ್ಯಾರ್ಥಿ, 2ನೇ ಸೆಮಿಸ್ಟರ್​ನಲ್ಲಿ ಇಬ್ಬರು ಇದ್ದಾರೆ. ತೀರಾ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಇರುವ ಕಾರಣ 2025&26ನೇ ಸಾಲಿನಿಂದ ಯಾವುದೇ ಅರ್ಜಿ ಆಹ್ವಾನಿಸದೆ ಮುಚ್ಚುವುದು ಹಾಗೂ ಇಂಗ್ಲಿಷ್​ ವಿಭಾಗಕ್ಕೆ ಒಂದು ಬಾರಿ ಅರ್ಜಿ ಆಹ್ವಾನಿಸಲು ಸಮಿತಿ ರ್ನಿಣಯ ಕೈಗೊಂಡಿದೆ.

* ಬಾರವಾಯಿತೆ ವೆಚ್ಚ?

ಪತ್ರಿಕೋದ್ಯಮ ವಿಭಾಗದಲ್ಲಿ ವಿದ್ಯಾರ್ಥಿಗಳು ಕಡಿಮೆ ಇದ್ದು, ಐವರು ಅತಿಥಿ ಉಪನ್ಯಾಸಕರ ವೇತನ ಹಾಗೂ ನಿರ್ವಹಣೆಗೆ ವಾರ್ಷಿಕ 30 ಲಕ್ಷ ರೂ. ವೆಚ್ಚವಾಗುತ್ತದೆ. ಕನಿಷ್ಠ 10 ವಿದ್ಯಾರ್ಥಿಗಳು ಇಲ್ಲದಿದ್ದರೂ ಏಕೆ ತರಗತಿ ನಡೆಸುತ್ತಿದ್ದೀರಿ ಎಂಬ ಪ್ರಶ್ನೆಯನ್ನು ಲೆಕ್ಕಪರಿಶೋಧಕರು ಕೇಳುತ್ತಿದ್ದಾರೆ ಎಂದು ವಿವಿ ಅಧಿಕಾರಿಗಳ ಸಬೂಬು ಇದಾಗಿದೆ ಎಂದು ಅತಿಥಿ ಉಪನ್ಯಾಸರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಕೋಟ್​...

ಪತ್ರಿಕೋದ್ಯಮಕ್ಕೆ ಕನಿಷ್ಠ ದಾಖಲಾತಿಯೂ ಇಲ್ಲದಿರುವುದರಿಂದ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಕೋರ್ಸ್​ಗಳನ್ನು ಉಳಿಸಿಕೊಳ್ಳಲು ಆಯಾ ವಿಭಾಗದ ಉಪನ್ಯಾಸಕರು ವಿದ್ಯಾರ್ಥಿಗಳ ನೋಂದಣಿ ಹೆಚ್ಚಿಸಿಕೊಳ್ಳಬೇಕು.

> ಸೀಸಂದ್ರ ಗೋಪಾಲ್​, ವಿವಿ ಸಿಂಡಿಕೇಟ್​ ಸದಸ್ಯ

ಕೋಟ್​...

ಪತ್ರಿಕೋದ್ಯಮ ವಿಭಾಗಕ್ಕೆ ಕಳೆದ ಎರಡು ವರ್ಷಗಳಿಂದ ದಾಖಲಾತಿ ಕುಸಿದಿದೆ. ಈಗಾಗಲೇ ದಾಖಲಾಗಿರುವವರು ಸಹ ತರಗತಿಗಳಿಗೆ ಹಾಜರಾಗುತ್ತಿಲ್ಲ. ದಾಖಲಾತಿ ಕೊರತೆಯಿಂದ ವಿಭಾಗವನ್ನು ಮುಚ್ಚಲಾಗಿದೆ. ಉಳಿದ ವಿಭಾಗಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಮಕ್ಕಳ ದಾಖಲಾತಿ ಹೆಚ್ಚಿಸಲು ಆಯಾ ವಿಭಾಗದ ಅತಿಥಿ ಉಪನ್ಯಾಸಕರಿಗೆ ನಿರ್ದೇಶನ ನೀಡಲಾಗಿದೆ.

> ಶ್ರೀಧರ್​, ರಿಜಿಸ್ಟ್ರಾರ್​, ಬೆಂಗಳೂರು ಉತ್ತರ ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net