ಕಾರ್ಪೋರೇಟರ್‌ಗಳ ಜಾಲಿ ಟ್ರಿಪ್: ಇಂದೋರ್, ಉಜ್ಜಯಿನಿಯಲ್ಲಿ ಅಧ್ಯಯನ ಪ್ರವಾಸ ನೆಪ ಪಾಲಿಕೆಯಲ್ಲೇ ಗುಸುಗುಸು

ತುಮಕೂರು ಮಹಾನಗರ ಪಾಲಿಕೆ ಮಹಿಳಾ ಸದಸ್ಯರು, ಅಧಿಕಾರಿಗಳ ಜತೆ ಕುಟುಂಬದ ಸದಸ್ಯರ ಅಧ್ಯಯನ ಪ್ರವಾಸ.
ತುಮಕೂರು ಮಹಾನಗರ ಪಾಲಿಕೆ ಮಹಿಳಾ ಸದಸ್ಯರು, ಅಧಿಕಾರಿಗಳ ಜತೆ ಕುಟುಂಬದ ಸದಸ್ಯರ ಅಧ್ಯಯನ ಪ್ರವಾಸ.
Published on

ತುಮಕೂರು: ಅಧ್ಯಯನ ಪ್ರವಾಸ ಹೆಸರಲ್ಲಿ ಮಹಾನಗರ ಪಾಲಿಕೆ ಸದಸ್ಯರು ಕುಟುಂಬ ಸಮೇತ ಜಾಲಿಟ್ರಿಪ್ ತೆರಳಿದ್ದಾರೆ.

ಫೆ.2ರಿಂದ 5 ದಿನಗಳ ಅಧ್ಯಯನ ಯಾತ್ರೆ ಕೈಗೊಂಡಿರುವ ಕಾರ್ಪೋರೇಟರ್‌ಗಳು 6ರಂದು ನಗರಕ್ಕೆ ಮರಳಲಿದ್ದಾರೆ. ಮೇಯರ್ ಎಂ.ಪ್ರಭಾವತಿ ನೇತೃತ್ವದ 45 ಜನರ ತಂಡವು ಇಂದೋರ್ ಹಾಗೂ ಉಜ್ಜಯಿನಿ ಪ್ರವಾಸ ಆರಂಭಿಸಿದ್ದು ಈ ನಗರಗಳಲ್ಲಿನ ನೀರು, ಯುಜಿಡಿ ನಿರ್ವಹಣೆ ಹಾಗೂ ಇತರ ವಿಷಯಗಳ ಕುರಿತು ಅಧ್ಯಯನ ನಡೆಸಲು ಪೌರಾಡಳಿತ ನಿರ್ದೇಶನಾಲಯ ಅನುಮತಿ ನೀಡಿದೆ. ಈ ವೇಳೆ ವಿಧಿಸಿರುವ ಕೆಲವು ಷರತ್ತುಗಳನ್ನು ಉಲ್ಲಂಘಿಸಿ ಕಾರ್ಪೋರೇಟರ್‌ಗಳು ಕುಟುಂಬದ ಸದಸ್ಯರನ್ನು ಜತೆಗೆ ಕರೆದುಕೊಂಡು ಹೋಗಿರುವುದು ಪಾಲಿಕೆ ಪಡಸಾಲೆಯಲ್ಲಿ ಗುಸುಗುಸು ಚರ್ಚೆಗೆ ಗ್ರಾಸ ಒದಗಿಸಿದೆ.

ಟ್ರಿಪ್‌ನಲ್ಲಿ ಪತಿರಾಯರು: ಮಹಿಳಾ ಸದಸ್ಯರ ಜತೆ ಪತಿರಾಯರು ವಿಮಾನವೇರಿದ್ದಾರೆ. ಅಲ್ಲದೆ, ಕೆಲವು ಸದಸ್ಯರು ಗೈರಾಗಿದ್ದು, ಅವರ ಬದಲು ಪತ್ನಿಯರನ್ನು ಕಳುಹಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸದಸ್ಯರು ಪತ್ನಿಯರನ್ನು ಕರೆದುಕೊಂಡು ಗುರುವಾರ ಬೆಳಗಿನ ಜಾವ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಹತ್ತಿ ಇಂದೋರ್‌ಗೆ ತೆರಳಿದ್ದಾರೆೆ.

ಮೇಯರ್ ಕಪ್ ಕ್ರೀಡಾಕೂಟದ ಯಶಸ್ವಿ ಸಂಘಟನೆ ಬಳಿಕ ಕಾರ್ಪೋರೇಟರ್‌ಗಳ ಈ ಟ್ರಿಪ್ ಹೆಸರಿಗಷ್ಟೇ ಅಧ್ಯಯನ ಪ್ರವಾಸ. ಇಂದೋರ್ ಪಾಲಿಕೆಗೆ ನೆಪಕ್ಕೆ ಭೇಟಿ ನೀಡಿ ಇನ್ನುಳಿದಂತೆ ಕುಟುಂಬದ ಸದಸ್ಯರ ಜತೆ ಸುತ್ತಾಡಿದ್ದಾರೆ. ಶುಕ್ರವಾರ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ಕಾರಿಡಾರ್ ದರ್ಶನ ಮಾಡಲು ಕಾರ್ಪೋರೇಟರ್‌ಗಳ ತಂಡ ಉತ್ಸುಕವಾಗಿದೆ ಎನ್ನಲಾಗಿದೆ.

ಪರಿಸರ ಇಂಜಿನಿಯರ್ ನಿಖಿತಾ, ಆರೋಗ್ಯ ನಿರೀಕ್ಷಕಿ ಮಂಜುಳಾ, ಕೌನ್ಸಿಲ್ ಸೆಕ್ರೆಟರಿ ಶಬ್ಬೀರ್ ಸೇರಿ ಐವರು ಅಧಿಕಾರಿಗಳು ಅಧ್ಯಯನ ತಂಡದೊಂದಿಗೆ ಇರಲಿದ್ದು ಅವರಿಗೆ ಗೈಡ್ ಮಾಡಲಿದ್ದಾರೆ.

ಪತಿರಾಯರ ಸಂಭ್ರಮ: ಮಹಿಳಾ ಸದಸ್ಯರ ಜತೆ ಪತಿರಾಯರು ಅಧ್ಯಯನ ಪ್ರವಾಸ ಹೊರಟಿದ್ದು, ಅವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇದರ ಜತೆಗೆ ಸದಸ್ಯರು ಪತ್ನಿಯರ ಜತೆಗೆ ಫ್ಯಾಮಿಲಿ ಟ್ರಿಪ್‌ನಂತೆ ಭಾವಿಸಿ ಫೋಟೋಗಳಿಗೆ ನಗುಮೊಗದಲ್ಲಿ ಪೋಸ್ ಕೊಡುತ್ತಾ ಫೇಸ್‌ಬುಕ್‌ಗಳಲ್ಲಿ ಅಪ್‌ಲೋಡ್ ಮಾಡಿ ಸಡಗರ ಪಟ್ಟಿದ್ದಾರೆ.

ಷರತ್ತುಗಳು: ಅಧ್ಯಯನ ಪ್ರವಾಸಕ್ಕೆ ಹೊರಟಿರುವ ಕಾರ್ಪೋರೇಟರ್‌ಗಳು ಅನುಮತಿಸಿದ ಸ್ಥಳಗಳನ್ನು ಬಿಟ್ಟು ಬೇರೆ ಸ್ಥಳಗಳಿಗೆ ತೆರಳುವಂತಿಲ್ಲ. ಖರ್ಚು-ವೆಚ್ಚಗಳ ಮಾಹಿತಿಗಳ ದಾಖಲೆ, ರಸೀದಿ ಸಮೇತ ಪಾಲಿಕೆ ಲೆಕ್ಕ ಶಾಖೆಗೆ ಸಲ್ಲಿಸಬೇಕು. ಪ್ರವಾಸ ಕುರಿತು 15 ದಿನಗಳೊಳಗೆ ವಿವರವಾದ ವರದಿಯನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕಿದೆ. ಈ ಪ್ರತಿಯನ್ನು ಸರ್ಕಾರ, ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸುವಂತೆ ಷರತ್ತು ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net