ಭಾರಿ ಬೆಲೆ ತೆರಬೇಕಾದೀತು ಜೋಕೆ!

Modi 19 march 20
Published on

ಬಲಾಢ್ಯ ದೇಶಗಳನ್ನು ಕರೊನಾ ಜಝುರಿತಗೊಳಿಸಿದೆ. ಸೋಂಕು ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂದರೆ ಅಮೆರಿಕ, ಇಟಲಿಯಂಥ ದೇಶಗಳ ವೈದ್ಯಕೀಯ ತಯಾರಿಯನ್ನು ಧೂಳಿಪಟ ಮಾಡಿದೆ. ಮಹಾಮಾರಿಯನ್ನು ಎದುರಿಸಲು ಇಡೀ ವಿಶ್ವವೇ ಹೆಣಗಾಡುತ್ತಿದೆ. ಈ ಸಂದರ್ಭದಲ್ಲಿ ನಾವು ಕಠಿಣ ಕ್ರಮ, ಸಂಯಮ, ಸಹಕಾರ ತೋರದಿದ್ದರೆ ಭಾರತ ಭಾರಿ ಬೆಲೆ ತೆರಬೇಕಾಗುತ್ತದೆ. ಈ ಬೆಲೆ ಎಂಥದ್ದು ಎಂಬುದು ಊಹೆಗೂ ನಿಲುಕದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸೂಚನೆ ಪಾಲಿಸದಿದ್ದರೆ ದೇಶ 21 ವರ್ಷ ಹಿಂದಕ್ಕೆ

ವಿಶ್ವ ಆರೋಗ್ಯ ಸಂಸ್ಥೆ ಸೇರಿ ಆರೋಗ್ಯ ವಲಯದ ತಜ್ಞರು ಕರೊನಾ ಸೋಂಕು ಕಡಿವಾಣಕ್ಕೆ ಇರುವ ಏಕೈಕ ಮಾರ್ಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಎಂದು ಸುಸ್ಪಷ್ಟವಾಗಿ ಸೂಚಿಸಿದ್ದಾರೆ. 21 ದಿನದ ಈ ಅಂತರ ಕಾಯ್ದುಕೊಂಡರೆ ಕೊರೊನಾ ವೈರಸ್​ನ ಹರಡುವಿಕೆಯ ಸರಪಳಿ ತುಂಡರಿಸುತ್ತದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು. ಉದ್ಧಟತನ ತೋರಿದರೆ

ಭಾರತ 21 ವರ್ಷ ಹಿಂದಕ್ಕೆ ಹೋಗುತ್ತದೆ. ನಿಮ್ಮದೊಂದು ಬೇಜವಾಬ್ದಾರಿ ನಡೆ ಕರೊನಾ ಮಹಾಮಾರಿಯನ್ನು ಮನೆಗೆ ತರುತ್ತದೆ. ಕುಟುಂಬದವರನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಇದನ್ನು ನಾನು ಪ್ರಧಾನಿಯಾಗಿ ಹೇಳುತ್ತಿಲ್ಲ. ನಿಮ್ಮ ಮನೆಯ ಓರ್ವ ಸದಸ್ಯನಾಗಿ ಕರಜೋಡಿಸಿ ವಿನಂತಿ ಮಾಡಿಕೊಳ್ಳುವೆ ಎಂದು ಮೋದಿ ಹೇಳಿದರು.

ತುರ್ತು ಸೇವೆ ನಿರತರ ಶ್ಲಾಘನೆ

ಜನರ ಆರೋಗ್ಯಕ್ಕಾಗಿ ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸೇವೆ, ಆಸ್ಪತ್ರೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಪೊಲೀಸರು, ಮಾಧ್ಯಮದವರು 247 ಅವಿರತ ಶ್ರಮಿಸುತ್ತಿದ್ದಾರೆ. ಈ ನಿಸ್ವಾರ್ಥ ಸೇವಾನಿರತರಿಗೆ ಧನ್ಯವಾದ ಹೇಳುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಒಬ್ಬ ಸೋಂಕಿತ ಸಾವಿರಾರು ಜನರಿಗೆ ಹರಡಬಲ್ಲ

ಕರೊನಾ ವೈರಸ್ ಹೇಗೆ ಪಸರಿಸುತ್ತಿದೆ ಎಂಬುದನ್ನು ವಿವರಿಸಿದ ಪ್ರಧಾನಿ ಮೋದಿ, ಜಾಗತಿಕವಾಗಿ ಮೊದಲ ಒಂದು ಲಕ್ಷ ಜನರಿಗೆ ಸೋಂಕು ತಗುಲಲು 67 ದಿನ ತೆಗೆದುಕೊಂಡರೆ, ಇದು ದ್ವಿಗುಣವಾಗಲು ಬರಿ 11 ದಿನ ಸಾಕಾಯಿತು. ನಂತರ 4 ದಿನದಲ್ಲಿ 3 ಲಕ್ಷ ಜನರಿಗೆ ಈ ಮಹಾಮಾರಿ ತಟ್ಟಿದೆ ಎಂದರು. ಒಬ್ಬ ವ್ಯಕ್ತಿ ಹತ್ತಾರು ದಿನಗಳಲ್ಲಿ ಸಾವಿರಾರು ಜನರಿಗೆ ತಲುಪಿಸಬಲ್ಲ. ಹೀಗಾಗಿ ಜನರು ಈ ಸೋಂಕಿನ ಗಂಭೀರತೆಯನ್ನು ಅರಿತುಕೊಂಡು ಮನೆಯಲ್ಲೇ ಇರಿ ಎಂದರು.

ಏನಿರುತ್ತೆ?

ಆಸ್ಪತ್ರೆ, ಔಷಧ ಅಂಗಡಿಗಳು, ವೈದ್ಯಕೀಯ ಉಪಕರಣಗಳ ತಯಾರಿಕೆ ಘಟಕಗಳು, ಪ್ರಯೋಗಾಲಯಗಳು, ಆಂಬುಲೆನ್ಸ್ ಸೇವೆ. ದಿನಸಿ ಅಂಗಡಿಗಳು, ಹಣ್ಣು ಮತ್ತು ತರಕಾರಿ ಅಂಗಡಿ, ಡೈರಿ ಮತ್ತು ಹಾಲು ಘಟಕಗಳು, ಮಾಂಸ ಮತ್ತು ಮೀನು ಅಂಗಡಿ, ಪ್ರಾಣಿಗಳ ಆಹಾರ ಸೌಲಭ್ಯ. ಪರಿಸ್ಥಿತಿಗೆ ಅನುಗುಣವಾಗಿ ಜನರು ಗುಂಪು ಸೇರುವುದನ್ನು ತಪ್ಪಿಸಲು ಆಯಾ ಜಿಲ್ಲಾಡಳಿತ ಅವಶ್ಯಕ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಬಹುದು. ಬ್ಯಾಂಕ್​ಗಳು, ವಿಮಾ ಕಚೇರಿಗಳು, ಎಟಿಎಂ ಸೌಲಭ್ಯ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು. ಟೆಲಿಕಾಂ ಸೇವೆ, ಇಂಟರ್​ನೆಟ್, ಕೇಬಲ್ ಸೇವೆ. ಸೇನೆ ಸೇರಿ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಇನ್ನಿತರ ಸೇವೆಗಳು. ಅಗ್ನಿಶಾಮಕ ದಳ, ಕಾನೂನು ವ್ಯವಸ್ಥೆ ಹಾಗೂ ತುರ್ತು ಸೇವೆಗಳು.

ಹೋಟೆಲ್, ಹೋಮ್್ಟೇ, ಲಾಡ್ಜ್​ಗಳು. ಅಂತ್ಯಸಂಸ್ಕಾರ ಕಾರ್ಯಗಳಲ್ಲಿ 20ಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳುವಂತಿಲ್ಲ. ಜಲಮಂಡಳಿ, ವಿದ್ಯುತ್, ನೈರ್ಮಲ್ಯ ಮಂಡಳಿ. ಕೋಲ್ಡ್ ಸ್ಟೋರೆಜ್ ಮತ್ತು ಉಗ್ರಾಣ ಸೇವೆ. ಖಾಸಗಿ ಭದ್ರತಾ ಸೇವೆಗಳು. ಆಹಾರ ಉತ್ಪನ್ನಗಳು ಹಾಗೂ ಸಿದ್ಧ ಆಹಾರ, ವೈದ್ಯಕೀಯಕ್ಕೆ ಸಂಬಂಧಪಟ್ಟ ವಸ್ತುಗಳ ಆನ್​ಲೈನ್ ಹೋಮ್ ಡೆಲೆವರಿ ಸೌಲಭ್ಯ.

ಪೆಟ್ರೋಲ್ ಬಂಕ್​ಗಳು, ಎಲ್​ಪಿಜಿ ಸೇವೆ. ಸೆಕ್ಯೂರಿಟಿ ಆಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ ಅನುಮತಿಸಿದ ಸಾಲ ಮಾರುಕಟ್ಟೆ ಸೇವೆಗಳು. ದಿನಬಳಕೆ ಅವಶ್ಯಕ ಪದಾರ್ಥಗಳು ಮತ್ತು ವಸ್ತುಗಳ ಉತ್ಪಾದನಾ ಘಟಕಗಳು. ನಿರಂತರ ಉತ್ಪಾದನೆ ಅಗತ್ಯವಿರುವ ಘಟಕಗಳು ಆಯಾ ರಾಜ್ಯ ಸರ್ಕಾರದ ಅನುಮತಿ ಮೇರೆಗೆ ಕಾರ್ಯನಿರ್ವಹಿಸಬಹುದು. ಸರ್ಕಾರ ಕಾರ್ಯನಿರ್ವಹಿಸಲು ಅನುಮತಿ ನೀಡಿರುವ ಸಂಸ್ಥೆಗಳು, ಸಂಘಟನೆಗಳು ಹಾಗೂ ಉದ್ಯೋಗಿಗಳು ಕರೊನಾ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಂಡು ಕೆಲಸ ನಿರ್ವಹಿಸಬೇಕು . ಸರ್ಕಾರ ವಿಧಿಸಿರುವ ಎಲ್ಲ ನಿರ್ಬಂಧಗಳು ಅತ್ಯಾವಶ್ಯಕ ಸೇವೆಗಳಿಗೆ ಅನ್ವಯಿಸುವುದಿಲ್ಲ.

ಏನಿರಲ್ಲ?

ಕೇಂದ್ರ ಸರ್ಕಾರದ ಅತ್ಯಗತ್ಯ ಸೇವೆ ಹೊರತು ಪಡಿಸಿದ ಎಲ್ಲ ಕಚೇರಿಗಳು, ಸಾರ್ವಜನಿಕ ವಲಯದ ಕಂಪನಿಗಳು ರಜೆ. ರಾಜ್ಯ/ಕೇಂದ್ರಾಡಳಿತ ಪ್ರದೇಶದ ಅತ್ಯಾವಶ್ಯಕ ಸೇವೆ ಹೊರತಾದ ಎಲ್ಲ ಇಲಾಖೆಗಳಿಗೆ ರಜೆ.

ಎಲ್ಲ ಖಾಸಗಿ ಮತ್ತು ವಾಣಿಜ್ಯ ವಲಯದ ಎಲ್ಲ ಉದ್ದಿಮೆ ಸ್ಥಗಿತ. ಎಲ್ಲ ವಿವಿಧ ಕೈಗಾರಿಕ ಘಟಕ ಬಂದ್. ರಸ್ತೆ, ರೈಲು, ವಾಯು, ಜಲ ಸಾರಿಗೆ ಸೇವೆ ಸ್ಥಗಿತ. ಪ್ರವಾಸ್ಯೋದ್ಯಮ ಮತ್ತು ಆತಿಥ್ಯ ಸೇವೆ ಬಂದ್. ಎಲ್ಲ ಬಗೆಯ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ.

ಸಾರ್ವಜನಿಕ ಸ್ಥಳದಲ್ಲಿನ ಎಲ್ಲ ಬಗ್ಗೆಯ ಕಾರ್ಯಕ್ರಮ, ಕಾರ್ಯಾಗಾರ, ಧಾರ್ವಿುಕ ಉತ್ಸವ, ಮೆರವಣಿಗೆ ಅನುಮತಿ ಇಲ್ಲ. ಎಲ್ಲ ರೀತಿಯ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ ಸಾಂಸ್ಕೃತಿಕ, ಧಾರ್ವಿುಕ ಆಚರಣೆಗಳು ಬಂದ್.

ಉಲ್ಲಂಘನೆಗೆ ಶಿಕ್ಷೆ

ಫೆ. 15ರ ನಂತರ ವಿದೇಶಗಳಿಂದ ಭಾರತಕ್ಕೆ ಬಂದವರು ಮತ್ತು ಕಡ್ಡಾಯವಾಗಿ ಕ್ವಾರಂಟೈನ್​ಗೆ ಶಿಫಾರಸು ಮಾಡಲಾದ ವ್ಯಕ್ತಿಗಳು ಎಷ್ಟು ದಿನ ಪ್ರತ್ಯೇಕವಾಸಕ್ಕೆ ಸೂಚಿಸಲಾಗಿದೆಯೋ ಅಷ್ಟು ದಿನ ಅದನ್ನು ಪಾಲಿಸಿಬೇಕು. ಉಲ್ಲಂಘಿಸಿದರೆ ಐಪಿಸಿ 188ನೇ ಕಲಂ ಅನ್ವಯ ಕಡ್ಡಾಯವಾಗಿ ಕ್ರಮ. ಸಲಹೆ- ಸೂಚನೆಗಳ ಅನುಷ್ಠಾನ, ಉಲ್ಲಂಘನೆ ಪ್ರಕರಣಗಳಲ್ಲಿ ವಿಚಾರಣೆ, ಜಿಲ್ಲೆಯ ಸಮಸ್ತ ಆಗುಹೋಗುಗಳ ಹೊಣೆ ಜಿಲ್ಲಾಧಿಕಾರಿಯದ್ದು. ಅವರು ಜಿಲ್ಲೆಯ ಇನ್ಸಿಡೆಂಟ್ ಕಮಾಂಡರ್ ಆಗಿರುತ್ತಾರೆ. ಕಟ್ಟಳೆಗಳನ್ನು ಭಂಗ ಮಾಡಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯ 51ರಿಂದ 60ನೇ ಸೆಕ್ಷನ್ ಅನ್ವಯ ಕ್ರಮ. ಜತೆಗೆ ಐಪಿಸಿ 188ನೇ ಕಲಂ ಅನ್ವಯ ಕಾನೂನು ಕ್ರಮ ಕೂಡ ಜಾರಿ.

ಈ ಎಲ್ಲ ನಿರ್ಬಂಧಗಳು ಬುಧವಾರದಿಂದ 21 ದಿನಗಳವರೆಗೆ (ಏ. 14) ಜಾರಿಯಲ್ಲಿರುತ್ತದೆ.

ಪ್ರತಿಯೊಬ್ಬರು 21 ದಿನ ಮನೆಯಿಂದ ಹೊರಗೆ ಬರುವುದಿಲ್ಲವೆಂದು ಸ್ವಯಂ ಪ್ರೇರಿತವಾಗಿ ಲಕ್ಷ್ಮಣ ರೇಖೆ ಹಾಕಿಕೊಳ್ಳಿ. ನೀವು ಸುರಕ್ಷಿತವಾಗಿರಿ, ಕುಟುಂಬದವರನ್ನು ಸುರಕ್ಷತೆಯಿಂದ ಇರಿಸಿ. ದೇಶವನ್ನು ಸ್ವಾಸ್ಥ್ಯವಾಗಿ ಇಡಲು ಸಹಕರಿಸಿ. | ನರೇಂದ್ರ ಮೋದಿ ಪ್ರಧಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net