

ನಂಜನಗೂಡು: ಜನಸಾಮಾನ್ಯರಿಗೆ ಮದುವೆ ದುಬಾರಿಯಾಗುತ್ತಿರುವುದನ್ನು ತಡೆಗಟ್ಟಲು ರಾಜ್ಯದ ಎ ಶ್ರೇಣಿಯ ದೇವಾಲಯಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದ್ದು, ಅದರ ಯಶಸ್ಸಿಗೆ ಪ್ರತಿಯೊಬ್ಬರೂ ಕೈಜೋಡಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾಗಬೇಕು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು.
ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ದಾಸೋಹ ಭವನ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮದುವೆಗಾಗಿ ಹಣಕಾಸು ಹೊಂದಿಸಲಾಗದೆ ಪರಿತಪಿಸುವ ಕಡು ಬಡವರ್ಗದ ಜನರಿಗೆ ಆಶ್ರಯವಾಗಲು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಎ ಶ್ರೇಣಿಯ 100 ದೇವಾಲಯಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ ಎಂದರು.
ಮದುವೆಗಾಗಿ ಸಾಲದ ಶೂಲಕ್ಕೆ ಸಿಲುಕಿ ಪರಿತಪಿಸುವ ಬಡ ಜನರಿಗೆ ಆಸರೆಯಾಗಬೇಕು, ಜನಸಾಮಾನ್ಯರ ಬದುಕು ಸುಸ್ಥಿರಗೊಳಿಸುವುದು ಈ ಯೋಜನೆ ಉದ್ದೇಶವಾಗಿದೆ. ಮೊದಲ ಪ್ರಯತ್ನವಾಗಿ ಏಪ್ರಿಲ್ 26 ಮತ್ತು ಮೇ 24ರಂದು ಎರಡು ಹಂತದಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ. ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಈ ಎರಡು ದಿನಗಳಲ್ಲಿ ಯಾವಾಗ ಎಂಬುದನ್ನು ಸ್ಪಲ್ಪ ದಿನಗಳಲ್ಲೇ ಅಂತಿಮಗೊಳಿಸಲಾಗುವುದು. ಪಟ್ಟಣ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ವ್ಯಾಪಕವಾಗಿ ಪ್ರಚಾರ ಮಾಡಲು ಕರಪತ್ರ ವಿತರಣೆ ಹಾಗೂ ಫ್ಲೆಕ್ಸ್ ಅಳವಡಿಸಿ ಜಾಗೃತಿ ಮೂಡಿಸಬೇಕು. ಜತೆಗೆ ಸಂಘ ಸಂಸ್ಥೆಗಳ ಸಹಕಾರವನ್ನು ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಧುವಿಗೆ 10 ಸಾವಿರ ರೂ., ವರನಿಗೆ 5 ಸಾವಿರ ರೂ.ಆರ್ಥಿಕ ನೆರವು ನೀಡಲಾಗುವುದು. ವಧುವಿಗೆ 40 ಸಾವಿರ ರೂ.ಮೌಲ್ಯದ ಅಂದಾಜು 8 ಗ್ರಾಂ ಚಿನ್ನದ ಮಾಂಗಲ್ಯದ ಜತೆಗೆ ಅಗತ್ಯ ಬಟ್ಟೆ, ಧರಿಸು ಉಚಿತವಾಗಿ ನೀಡಲಾಗುವುದು. ಪ್ರತಿ ಜೋಡಿಗೆ ಕನಿಷ್ಠ 50 ಸಾವಿರ ರೂ.ವಿನಿಯೋಗ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದರು.
ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಚುನಾವಣಾ ನೀತಿ ಸಂಹಿತೆಯ ಬಿಸಿ ಇಂತಹ ಮಹತ್ವದ ಯೋಜನೆಗೆ ಅಡ್ಡಿಯಾಗದಂತೆ ನಿಗಾವಹಿಸಬೇಕಿದೆ. ಸಾಮೂಹಿಕ ವಿವಾಹ ಯೋಜನೆ ಯಶಸ್ವಿಗಾಗಿ ಜಿಲ್ಲಾ ಹಂತದ ನೋಡಲ್ ಅಧಿಕಾರಿಯೊಬ್ಬರನ್ನು ನಿಯೋಜಿಸಿ ಎಲ್ಲ ಇಲಾಖೆಗಳ ಅಧಿಕಾರಿಗಳ ಸಹಭಾಗಿತ್ವದಲ್ಲಿ ಮುನ್ನಡೆಯುವ ನಿಟ್ಟಿನಲ್ಲಿ ಕ್ರಮವಹಿಸಬೇಕಿದೆ ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು. ಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಇರಬೇಕು ಎಂದರು.
ತಹಸೀಲ್ದಾರ್ ಕೆ.ಎಂ.ಮಹೇಶ್‌ಕುಮಾರ್, ದೇವಾಲಯದ ಇಒ ಶಿವಕುಮಾರಯ್ಯ, ದೇಗುಲದ ಆಗಮಿಕ ಜೆ.ನಾಗಚಂದ್ರ ದೀಕ್ಷಿತ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎನ್.ಟಿ.ಗಿರೀಶ್, ಆರ್.ಇಂದನ್ ಬಾಬು, ಶ್ರೀಧರ್, ಪುಟ್ಟನಿಂಗಶೆಟ್ಟಿ, ಶಶಿರೇಖಾ, ಬಿಜೆಪಿ ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ, ಬಾಲಚಂದ್ರು, ನಗರಸಭೆ ಸದಸ್ಯರಾದ ಕಪಿಲೇಶ್, ಮಹದೇವಪ್ರಸಾದ್ ಉಪಸ್ಥಿತರಿದ್ದರು.
ಆಡಳಿತ ಪಾರದರ್ಶಕ್ಕಾಗಿ ಗಣಕೀಕೃತ ವ್ಯವಸ್ಥೆ ಜಾರಿ
ನಂಜನಗೂಡು: ರಾಜ್ಯದ ಎ ಶ್ರೇಣಿಯ ದೇವಾಲಯಗಳಲ್ಲಿ ಆಡಳಿತ ಸುಧಾರಣೆ ಹಾಗೂ ಹಣಕಾಸು ವ್ಯವಹಾರ ಸುಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಗಣಕೀಕೃತ ವ್ಯವಸ್ಥೆ ಜಾರಿಗೊಳಿಸುವ ಚಿಂತನೆ ನಡೆದಿದ್ದು ಕಾರ್ಯಗತಗೊಳಿಸಲು ಕ್ರಮವಹಿಸುವುದಾಗಿ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ನಡೆಯುತ್ತಿದ್ದ ಹಣಕಾಸು ಅವ್ಯವಹಾರ ಸೇರಿದಂತೆ ಭಕ್ತರಿಗೆ ಕಿರಿಕಿರಿ ತಪ್ಪಿಸುವ ನಿಟ್ಟಿನಲ್ಲಿ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಡಿ.ರಂದೀಪ್ 12 ಸುಧಾರಿತ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದ್ದರು. ಆದರೆ ಅವುಗಳ ಅನುಷ್ಠಾನಕ್ಕೆ ಮುಂದಾಗದೆ ತಡೆಹಿಡಿದಿರುವ ಬಗ್ಗೆ ಪತ್ರಕರ್ತರು ಸಚಿವರ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು, ಸೇವೆ, ಪಾರ್ಕಿಂಗ್ ಇತರ ಯಾವುದೇ ಹಣಕಾಸು ವ್ಯವಹಾರಗಳಿಗೆ ಗಣಕೀಕೃತ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆದಿದೆ. ಇದು ಜಾರಿಯಾದರೆ ಎಲ್ಲ ಅವ್ಯವಹಾರಗಳಿಗೂ ಅಂಕುಶ ಬೀಳಲಿದೆ. ದೇವಾಲಯದ ಆಡಳಿತ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.
ದೇವಾಲಯದ ತಸ್ತೀಕ್, ವರ್ಷಾಸನ ನೀಡುವಿಕೆ, ಅರ್ಚಕರು ಮತ್ತು ಕಲಾವಿದರ ಬೇಡಿಕೆಗಳ ಕುರಿತು ಸರ್ಕಾರ ಕಿವಿಕೊಟ್ಟಿದೆ. ದೇವಾಲಯಗಳಲ್ಲಿ ಭಕ್ತರಿಗೆ ಉತ್ತಮ ಸೌಲಭ್ಯ ಸಿಗುವಂತೆ ಮಾಡಲು ರಾಸಾಯನಿಕ ಮುಕ್ತ ಕುಂಕುಮ ಹಾಗೂ ಗಂಧ ನೀಡಿಕೆ ಸೇರಿದಂತೆ ಹಲವು ಬದಲಾವಣೆಗಳನ್ನು ತರಲಾಗಿದೆ ಎಂದರು.
ಗರ್ಭಗುಡಿ ದರ್ಶನ: ಶ್ರೀಕಂಠೇಶ್ವರಸ್ವಾಮಿ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸಿದ ಸಚಿವ ಕೋಟ ಶ್ರೀನಿವಾಸ ಪ್ರಜಾರಿ, ಎಲ್ಲ ಗುಡಿಗಳಲ್ಲೂ ಪ್ರದಕ್ಷಿಣೆ ಹಾಕಿದರು. ನಂತರ ದೇವಾಲಯದ ವತಿಯಿಂದ ಫಲಪುಷ್ಪ, ಶ್ವೇತವಸ್ತ್ರ, ಪ್ರಸಾದ ನೀಡಿ ಸತ್ಕರಿಸಲಾಯಿತು.
ಈಡಿಗರ ಸಂಘದಿಂದ ಮನವಿ:
ನಗರದ ಬೈಪಾಸ್ ರಸ್ತೆಯಲ್ಲಿ ಈಡಿಗರ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಶ್ರೀರೇಣುಕಾಂಬ ಈಡಿಗರ ಸಂಘದ ವತಿಯಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಬಿ.ಹರ್ಷವರ್ಧನ್ ಅವರಿಗೆ ಮನವಿ ಮಾಡಲಾಯಿತು. ಈ ಬಗ್ಗೆ ಪರಿಶೀಲಿಸಿ ನೆರವು ನೀಡುವುದಾಗಿ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು. ಸಂಘದ ಜಿ.ಕೆ.ಮಂಜುನಾಥ್, ಎನ್.ಟಿ.ಗಿರೀಶ್ ಹಾಜರಿದ್ದರು.