

ಕೋಲಾರ: ದೇಶವನ್ನು ಕ್ಷಯಮುಕ್ತಗೊಳಿಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವಿಣ್ ಪಿ.ಬಾಗೇವಾಡಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ, ವಿಶ್ವ ಕ್ಷಯ ರೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ 2025ರಲ್ಲಿ ದೇಶವನ್ನು ಸಂಪೂರ್ಣ ಕ್ಷಯ ರೋಗ ಮುಕ್ತವಾಗಿಸುವ ಘೋಷಣೆ ಮಾಡಿದ್ದು, ಈ ದಿಸೆಯಲ್ಲಿ ಕಾರ್ಯ ಚಟುವಟಿಕೆಗಳೂ ಪರಿಣಾಮಕಾರಿಯಾಗಿ ನಡೆಯಬೇಕಿದೆ. ಕ್ಷಯ ರೋಗ ನಿಮೂರ್ಲನೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜತೆಗೆ ಸ್ಥಳಿಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿಯ ಪಾತ್ರವೂ ಬಹಳ ಮುಖ್ಯ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ಕ್ಷಯ ರೋಗ ನಿಯಂತ್ರಣದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು.
ಸದ್ಯಕ್ಕೆ ಹ್ಯಾಂಡ್ ಹೆಲ್ಡ್ ಕ್ಷ-ಕಿರಣ ಯಂತ್ರದೊಂದಿಗೆ ರೋಗಿಗಳು ಇರುವ ಗ್ರಾಮ, ಸಂತೆ, ಜಾತ್ರೆ, ಉತ್ಸವ ಮೊದಲಾದ ಕಡೆಗೆ ಕ್ಷಯ ರೋಗ ತಪಾಸಣೆ ಮಾಡಲಾಗುತ್ತಿದೆ. ರೋಗ ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಪೌಷ್ಟಿಕ ಆಹಾರಕ್ಕಾಗಿ ಕಡು ಬಡ ರೋಗಿಗಳ ಖಾತೆಗೆ ಹಣ ಸಹ ಜಮೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕ್ಷಯ ರೋಗ ನಿವಾರಣಾಧಿಕಾರಿ ಡಾ.ಜಿ.ಪ್ರಸನ್ನಕುಮಾರ್, ಡಾ.ಚಂದನ್, ಡಾ.ರವಿಕುಮಾರ್, ಡಾ.ರಮೇಶ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ ಇದ್ದರು.
* 37 ಪಂಚಾಯಿತಿಗಳು ಮುಕ್ತ
ಕೋಲಾರ ತಾಲೂಕಿನ ಅಮ್ಮನಲ್ಲೂರು, ಅರಾಭಿಕೊತ್ತನೂರು, ಅರಹಳ್ಳಿ, ಬೆಗ್ಲಿಹೊಸಹಳ್ಳಿ, ಬೆಳಮಾರನಹಳ್ಳಿ, ಚನ್ನಸಂದ್ರ, ಚೌಡದೇನಹಳ್ಳಿ, ಹರಟಿ, ಹೋಳೂರು, ಕ್ಯಾಲನೂರು, ಮಾರ್ಜೇನಹಳ್ಳಿ, ಸುಗಟೂರು, ಸೂಲೂರು, ತೊರದೇವಂಡಹಳ್ಳಿ. ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ, ದೊಲಪಲ್ಲಿ, ಗುಮ್ಮಕಲ್ಲು, ಎಚ್.ಗೊಲ್ಲಹಳ್ಳಿ, ಕೊಪ್ಪಲಮಡುಗು, ಮೊತ್ತಕಪಲ್ಲಿ, ಮುಡಿಗೆರೆ, ರಾಜೇಂದ್ರಹಳ್ಳಿ, ಉತ್ತನೂರು. ಬಂಗಾರಪೇಟೆ ತಾಲೂಕಿನ ಎ.ಜೋತೆನಹಳ್ಳಿ, ದೊಡ್ಡೂರು, ಗುಲ್ಲಹಳ್ಳಿ, ಮಾಗೊಂದಿ. ಕೆ.ಜಿ.ಎಫ್ ತಾಲೂಕು ಕಮ್ಮಸಂದ್ರ ಮತ್ತು ಕಂಗಂಡ್ಲಹಳ್ಳಿ.
ಮಾಲೂರು ತಾಲೂಕಿನ ಅಬ್ಬೇನಹಳ್ಳಿ, ಬಾಳಿಗಾನಹಳ್ಳಿ, ಬನಹಳ್ಳಿ, ದಾದಿನಾಯಕನದೊಡ್ಡಿ, ಮಡಿವಾಳ. ಶ್ರೀನಿವಾಸಪುರ ತಾಲೂಕಿನ ಅರಿಕುಂಟೆ, ಬೈರಗಾನಹಳ್ಳಿ ಮತ್ತು ಕೊಳತೂರು ಸೇರಿ 37 ಗ್ರಾಮ ಪಂಚಾಯಿತಿಗಳನ್ನು ಕ್ಷಯ ರೋಗ ಮುಕ್ತ ಗ್ರಾಮ ಪಂಚಾಯಿತಿಗಳೆಂದು ಘೋಷಿಸಲಾಗಿದೆ ಎಂದು ಡಾ.ಶ್ರೀನಿವಾಸ್ ಹೇಳಿದರು.