ಕನ್ನಡ ನಾಡು-ನುಡಿ ಉಳಿವಿಗೆ ಕೈಜೋಡಿಸಿ

Published on

ಲಿಂಗಸುಗೂರು: ಸರ್ಕಾರಿ ಶಾಲೆಗಳು ಶಿಕ್ಷಣ ನೀಡುವುದರ ಜತೆಗೆ ಭಾರತೀಯ ಸನಾತನ ಪರಂಪರೆ, ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಬಿಇಒ ಹುಂಬಣ್ಣ ರಾಠೋಡ್ ಹೇಳಿದರು.

ತಾಲೂಕಿನ ಹೊನ್ನಹಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ), ಶಿಕ್ಷಣ ಇಲಾಖೆ, ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಸಹಯೋಗದಲ್ಲಿ ಕರವೇಯಿಂದ ಶಾಲಾ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯುವ ಕಾರ್ಯಕ್ರಮ ಮತ್ತು ಸರ್ಕಾರಿ ಶಾಲೆ ಉಳಿಸೋಣ ಬನ್ನಿ, ಮಕ್ಕಳ ಹಕ್ಕುಗಳ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ನಾಡು-ನುಡಿ, ನೆಲ-ಜಲದ ಉಳಿವಿಗೆ ಹೋರಾಟ ನಡೆಸುವ ಜತೆಗೆ ಸರ್ಕಾರಿ ಶಾಲಾ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ವಕೀಲ ಹುಲಗಪ್ಪ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳನ್ನು ವಿದೇಶಕ್ಕೆ ರಫ್ತು ಮಾಡುವಂತಹ ಕಾನೂನು ಬಾಹಿರ ಕೃತ್ಯಗಳು ನಡೆಯುತ್ತಿರುವುದು ಅಪಾಯಕಾರಿ. ಪಾಲಕರು ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡಿ ಜವಾಬ್ದಾರಿ ಮೆರೆಯಬೇಕು ಎಂದರು. ಕರವೇ ಜಿಲ್ಲಾಧ್ಯಕ್ಷ ಅಶೋಕ ಜೈನ್ ಮಾತನಾಡಿ, ಕನ್ನಡ ನಾಡು-ನುಡಿ, ಭಾಷೆ ವಿಷಯದಲ್ಲಿ ಕನ್ನಡ ಪರ ಸಂಘಟನೆಗಳು ಯಾವುದೇ ರೀತಿ ಹೊಂದಾಣಿಕೆ ಇಲ್ಲದೆ ಜೀವದ ಹಂಗು ತೊರೆದು ಹೋರಾಟಕ್ಕೆ ಸಿದ್ಧವಾಗಿವೆ ಎಂದರು.

ಕರವೇ ಪ್ರಧಾನ ಕಾರ್ಯದರ್ಶಿ ಶರಣಬಸವ ಈಚನಾಳ, ಮುಖಂಡರಾದ ಮುತ್ತಣ್ಣ ಗುಡಿಹಾಳ, ರಾಜೇಶ ಮಾಣಿಕ, ಮಹಾಂತೇಶ ಹೂಗಾರ, ರಾಜು ರಡ್ಡಿ, ಅಮರೇಶ ಶಿಳ್ಳಿ, ನಂದೇಶ ಪೇರಿ ಇತರರದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net