

ನ್ಯೂಯಾರ್ಕ್: ಭಾರತವನ್ನು 2029ರ ಹೊತ್ತಿಗೆ ಜಗತ್ತಿನ ಮೂರನೇ ಅತಿ ದೊಡ್ಡ ಪ್ರಬಲ ಆರ್ಥಿಕತೆಯ ದೇಶವನ್ನಾಗಿಸಲು ಸರ್ವಪ್ರಯತ್ನ ನಡೆಸಲಾಗುತ್ತಿದ್ದು, ಈ ಕಾರ್ಯದಲ್ಲಿ ನೀವೂ ಭಾಗಿಯಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಪ್ರಮುಖ ತಂತ್ರಜ್ಞಾನ ಕಂಪನಿಗಳಿಗೆ ಕರೆ ನೀಡಿದ್ದಾರೆ.
ಸೋಮವಾರ ಲೊಟ್ಟೆ ನ್ಯೂಯಾರ್ಕ್ ಪ್ಯಾಲೇಸ್ ಹೋಟೆಲ್ನಲ್ಲಿ ಅಮೆರಿಕದ ದಿಗ್ಗಜ ತಂತ್ರಜ್ಞಾನ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ)ಗಳ ಜತೆ ನಡೆದ ಸಭೆಯಲ್ಲಿ ಮೋದಿ ಈ ವಿಷಯ ಪ್ರಸ್ತಾಪಿಸಿದರು. ಕೃತಕ ಬುದ್ಧಿಮತ್ತೆ, ಕ್ವಾಂಟಂ ಕಂಪ್ಯೂಟಿಂಗ್, ಸೆಮಿಕಂಡಕ್ಟರ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಕಾರ್ಯನಿರ್ವಹಿಸುವ ಅಮೆರಿಕ ಮೂಲದ 15 ಪ್ರಮುಖ ಕಂಪನಿಗಳ ಸಿಇಒಗಳು ಸಭೆಯಲ್ಲಿ ಭಾಗಿಯಾಗಿದ್ದರು.
3.9 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಭಾರತ ಸದ್ಯ ಅಮೆರಿಕ, ಚೀನಾ, ಜರ್ಮನಿ ಮತ್ತು ಜಪಾನ್ ನಂತರದ ಸ್ಥಾನಕ್ಕೆ ತಲುಪಿ ಜಗತ್ತಿನ ಐದನೇ ಅತಿದೊಡ್ಡ ಪ್ರಬಲ ಆರ್ಥಿಕತೆಯ ರಾಷ್ಟ್ರ ಎನಿಸಿಕೊಂಡಿದೆ. ಸತತ ಮೂರು ವರ್ಷಗಳಿಂದ ಭಾರತದ ಜಿಡಿಪಿ ಶೇ. 7 ಪ್ರಗತಿ ದರ ಹೊಂದಿದ್ದು, ಜಗತ್ತಿನಲ್ಲಿ ಕ್ಷಿಪ್ರವಾಗಿ ಬೆಳೆಯುತ್ತಿರುವ ಬೃಹತ್ ಆರ್ಥಿಕತೆಯ ದೇಶಗಳಲ್ಲಿ ನಮ್ಮ ದೇಶವೂ ಒಂದಾಗಿದೆ ಎಂದು ಪ್ರಧಾನಿ ಹೇಳಿದರು.
ಜಗತ್ತಿಗಾಗಿ ಭಾರತದಲ್ಲಿನ ತಾಂತ್ರಿಕ- ಆರ್ಥಿಕ ಬೆಳವಣಿಗೆಯ ಅವಕಾಶಗಳನ್ನು ಬಳಸಿಕೊಂಡು ಅಭಿವೃದ್ಧಿ, ವಿನ್ಯಾಸ, ಉತ್ಪಾದನೆಯಲ್ಲಿ ಜೊತೆಯಾಗುವ ಮೂಲಕ ಕಂಪನಿಗಳು ಭಾರತದ ಪ್ರಗತಿ ಕಥನದ ಪ್ರಯೋಜನ ಪಡೆದುಕೊಳ್ಳಬೇಕೆಂದು ಮೋದಿ ಕರೆ ಕೊಟ್ಟರು. ಬೌದ್ಧಿಕ ಆಸ್ತಿಯ ರಕ್ಷಣೆ ಹಾಗೂ ತಂತ್ರಜ್ಞಾನದ ಆವಿಷ್ಕಾರ ಉತ್ತೇಜಿಸುವಲ್ಲಿ ಭಾರತದ ಬದ್ಧತೆಯನ್ನು ಉದ್ಯಮದ ನಾಯಕರಿಗೆ ಮೋದಿ ಖಚಿತಪಡಿಸಿದರು. ದೇಶದಲ್ಲಿ ಆರ್ಥಿಕ ಸುಧಾರಣೆ, ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ಗಳ ಉತ್ಪಾದನೆಯಲ್ಲಿ ಸುಧಾರಣೆ ಆಗುತ್ತಿದೆ ಎಂದು ಪ್ರತಿಪಾದಿಸಿದರು.
ಭಾರತದಲ್ಲಿ ಎನ್ವಿಡಿಯಾ-ಗೂಗಲ್ ಹೂಡಿಕೆ: ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿಗಳಾದ ಎನ್ವಿಡಿಯಾ ಮತ್ತು ಗೂಗಲ್ನಿಂದ ಭಾರತದಲ್ಲಿ ಇನ್ನಷ್ಟು ಹೂಡಿಕೆ ಆಗಲಿದೆ. ಬಹುಕೋಟಿ ರೂ.ಗಳ ಬಂಡವಾಳ ಹೂಡುವ ತೀರ್ಮಾನ ಹೊರಬಿದ್ದಿದೆ. ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟು ಈ ಹೂಡಿಕೆ ನಡೆಯಲಿದೆ ಎಂದು ಪ್ರಧಾನಿ ಮೋದಿಯವರ ಜತೆ ಮಾತುಕತೆ ಬಳಿಕ ಈ ಕಂಪನಿಗಳ ಉನ್ನತ ಮೂಲಗಳು ತಿಳಿಸಿವೆ.
ಪ್ರಧಾನಿ ಜತೆ ನಾನು ಹಲವು ಸಭೆಗಳಲ್ಲಿ ಭಾಗಿ ಆಗಿದ್ದೇನೆ. ಪ್ರತಿ ಭೇಟಿಯಲ್ಲೂ ಅವರು ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಭಾರತದಲ್ಲಿ ಅವುಗಳ ಸಾಮರ್ಥ್ಯ- ಅವಕಾಶ ಹಾಗೂ ಭಾರತದ ಸಮಾಜ- ಉದ್ಯಮದ ಮೇಲೆ ಅವುಗಳ ಪರಿಣಾಮ ಇತ್ಯಾದಿ ಕುರಿತು ತಿಳಿದುಕೊಳ್ಳಲು ಬಯಸುತ್ತಿರುತ್ತಾರೆ, ಅವರು ಅದ್ಭುತ ವಿದ್ಯಾರ್ಥಿ ಎಂದು ಎನ್ವಿಡಿಯಾದ ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್ (ಜಿಪಿಯು) ಸಿಇಒ ಜೆನ್ಸೆನ್ ಹುಯಾಂಗ್ ಹೇಳಿದ್ದಾರೆ. ಜಿಪಿಯು ಕ್ಷೇತ್ರದಲ್ಲಿ ಎನ್ವಿಡಿಯಾ ಶೇ. 88 ಮಾರುಕಟ್ಟೆ ಪಾಲು ಹೊಂದಿದೆ ಎಂದು ಅಂದಾಜಿಸಲಾಗಿದೆ. ಎಐ ಕ್ಷೇತ್ರದಲ್ಲಿ ಜಿಪಿಯುಗೆ ವಿಶ್ವಾದ್ಯಂತ ಬೇಡಿಕೆ ಇದೆ. ಎಐ ಕೂಡ ಹೊಸ ಉತ್ಪಾದನಾ ಉದ್ಯಮವಾಗಿದ್ದು, ಇದರಲ್ಲಿ ಭಾರತದೊಂದಿಗೆ ಗಾಢವಾಗಿ ಪಾಲ್ಗೊಳ್ಳಲು ನಾವು ಎದುರು ನೋಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಆರೋಗ್ಯ ಕಾಳಜಿ, ಶಿಕ್ಷಣ, ಕೃಷಿ ಕ್ಷೇತ್ರದಲ್ಲಿನ ಅನ್ವಯಗಳ ಕುರಿತು ಚಿಂತಿಸುವ ಸವಾಲನ್ನು ಪ್ರಧಾನಿ ಮೋದಿ ನಮಗೆ ನೀಡಿದ್ದು, ಭಾರತದ ಮೂಲಸೌಕರ್ಯದ ಬಗ್ಗೆಯೂ ಯೋಚಿಸುವಂತೆ ಮಾಡಿದ್ದಾರೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ. ಎಐ ಸೃಷ್ಟಿಸುವ ಅವಕಾಶದಲ್ಲಿ ಪ್ರಧಾನಿ ಸ್ಪಷ್ಟ ದೃಷ್ಟಿಕೋನ ಹೊಂದಿದ್ದು, ಎಐನಿಂದ ಜನರಿಗೆ ಪ್ರಯೋಜನ ಇದೆ ಎಂಬ ಕಲ್ಪನೆ ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ ಗೂಗಲ್ ಹೆಚ್ಚಿನದನ್ನು ಮಾಡುವಂತೆ ಪ್ರಧಾನಿ ಆಶಿಸಿದ್ದಾರೆ ಎಂದು ಪಿಚೈ ಹೇಳಿದ್ದಾರೆ.
ವಿಶ್ವಸಂಸ್ಥೆ: ಮಾನವೀಯತೆಯ ಯಶಸ್ಸು ಸಾಮೂಹಿಕ ಶಕ್ತಿ ಯಲ್ಲಿದೆಯೇ ಹೊರತು ಯುದ್ಧ ಭೂಮಿಯಲ್ಲಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಪ್ರತಿಪಾದಿಸಿದರು. ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡುವು ದರ ಜತೆಗೆ ಮಾನವ ಕಲ್ಯಾಣ, ಆಹಾರ, ಆರೋಗ್ಯ ಭದ್ರತೆಯನ್ನು ಖಚಿತಪಡಿಸಿ ಕೊಳ್ಳಬೇಕೆಂದು ನಮೋ ವಿಶ್ವರಾಷ್ಟ್ರಗಳಿಗೆ ಒತ್ತಿ ಹೇಳಿದರು. ಭಾರತದಲ್ಲಿ 250 ಮಿಲಿಯನ್ ಜನರನ್ನು ಬಡತನದಿಂದ ಮೇಲೆತ್ತುವ ಮೂಲಕ ಸುಸ್ಥಿರ ಅಭಿವೃದ್ಧಿ ಯಶಸ್ಸು ಹೇಗೆ ಸಾಧ್ಯ ಎಂಬುದನ್ನು ನಾವು ನಿರೂಪಿಸಿದ್ದೇವೆ. ಸಾಧ್ಯವಿಲ್ಲ ಎಂಬುದು ಯಾವುದೂ ಇಲ್ಲ ಎಂದು ಭಾರತದ ಸಾಧನೆಯನ್ನು ಜಗದ ಮುಂದಿಟ್ಟರು.
ಉಗ್ರವಾದ ಜಗತ್ತಿಗೆ ಬೆದರಿಕೆ: ಭಯೋತ್ಪಾದನೆ ಜಾಗತಿಕ ಶಾಂತಿ, ಭದ್ರತೆಗೆ ಗಂಭೀರ ಬೆದರಿಕೆ ಎಂದು ವ್ಯಾಖ್ಯಾನಿಸಿದ ಮೋದಿ, ಸೈಬರ್, ಬಾಹ್ಯಾಕಾಶ ಸಂಘರ್ಷದ ಹೊಸ ರಂಗಭೂಮಿಯಾಗಿ ಮಾರ್ಪಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
‘