

| ಜಗನ್ನಾಥ್ ಕಾಳೇನಹಳ್ಳಿ ತುಮಕೂರು
ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆಯುತ್ತಿರುವ ಚುನಾವಣೆ ರಂಗೇರಿದೆ. ಬಿಜೆಪಿ ಭದ್ರಕೋಟೆ ಎನಿಸಿರುವ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಲಕ್ಕೆ ಕಾಂಗ್ರೆಸ್ ತೀವ್ರ ಸವಾಲು ಒಡ್ಡಿದ್ದು, ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.
ಕ್ಷೇತ್ರದಿಂದ ಸತತ 4ನೇ ಬಾರಿ ಮೇಲ್ಮನೆ ಪ್ರವೇಶಿಸಲು ಸಜ್ಜಾಗಿರುವ ಹಾಲಿ ಸದಸ್ಯ, ಬಿಜೆಪಿ-ಜೆಡಿಎಸ್ ಬೆಂಬಲಿತ ವೈ.ಎ.ನಾರಾಯಣಸ್ವಾಮಿ (ವೈಎಎನ್) ಗೆಲುವಿನ ಓಟಕ್ಕೆ ಕಾಂಗ್ರೆಸ್ ಬೆಂಬಲಿತ ಡಿ.ಟಿ.ಶ್ರೀನಿವಾಸ್ (ಡಿಟಿಎಸ್) ಸ್ಪೀಡ್ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಪಕ್ಷೇತರರಾಗಿ ಕಣಕ್ಕಿಳಿದಿರುವ ಲೋಕೇಶ್ ತಾಳಿಕಟ್ಟೆ, ವಿನೋದ್ ಶಿವರಾಜ್ ಸಹ ಸದ್ದು ಮಾಡುತ್ತಿದ್ದಾರೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ದಾವಣಗೆರೆ (3 ತಾಲೂಕು) ಜಿಲ್ಲೆಗಳನ್ನೊಳಗೊಂಡ ಶಿಕ್ಷಕರ ಕ್ಷೇತ್ರದಲ್ಲಿ 25,308 ಮತದಾರರಿದ್ದಾರೆ. 9489 ಮಹಿಳಾ ಹಾಗೂ 15819 ಪುರುಷ ಮತದಾರರು ಹಕ್ಕು ಹೊಂದಿದ್ದಾರೆ. ಸುಶಿಕ್ಷಿತ ಮತದಾರರ ಚುನಾವಣೆಯಲ್ಲಿ ಕುರುಡು ಕಾಂಚಾಣದ ಸದ್ದು ಜೋರಾಗಿದೆ. ಅಲ್ಲದೆ, ಜಾತಿಬಲ, ಹಣಬಲದ ಲೆಕ್ಕಾಚಾರವೂ ಇದೆ.
ವೈಎಎನ್ಗೆ ಕಠಿಣ ಹಾದಿ: ಕ್ಷೇತ್ರದಲ್ಲಿ 2006ರಿಂದ ಪ್ರಾಬಲ್ಯ ಸಾಧಿಸಿರುವ ವೈ.ಎ.ನಾರಾಯಣಸ್ವಾಮಿಗೆ ಮೇಲ್ಮನೆ ಹಾದಿ ಈ ಬಾರಿ ಕಠಿಣ ಎನಿಸಿದೆ. ದಿ. ಮಾಜಿ ಸಚಿವ ಎ.ಕೃಷ್ಣಪ್ಪ ಅಳಿಯ, ಹಿರಿಯೂರು ಕ್ಷೇತ್ರದ ಮಾಜಿ ಶಾಸಕಿ ಕೆ.ಪೂರ್ಣಿಮಾ ಪತಿ ಡಿ.ಟಿ. ಶ್ರೀನಿವಾಸ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದು, ತೀವ್ರ ಪೈಪೋಟಿ ಒಡ್ಡಿದ್ದಾರೆ. ಅಹಿಂದ ಮತಗಳ ಮೇಲೆ ಕಣ್ಣಿಟ್ಟು ಗೆಲುವಿಗಾಗಿ ಕಸರತ್ತು ನಡೆಸಿರುವ ಡಿಟಿಎಸ್, ಕಾಂಗ್ರೆಸ್ ಗ್ಯಾರಂಟಿಗಳ ಬಲ ನಂಬಿಕೊಂಡಿದ್ದಾರೆ. ವೈಎಎನ್, ಡಿಟಿಎಸ್, ಕರ್ನಾಟಕ ರಾಷ್ಟ್ರ ಸಮಿತಿಯ ಎಂ.ಜಿ.ಕಿಶನ್ ಸೇರಿ 19 ಪಕ್ಷೇತರ ಅಭ್ಯರ್ಥಿಗಳು ಕಣ ದಲ್ಲಿದ್ದಾರೆ. ಕಾಂಗ್ರೆಸ್ನಿಂದ ಸ್ಪರ್ಧೆಗಿಳಿಯಲು ಕ್ಷೇತ್ರ ದಾದ್ಯಂತ ಸಂಚರಿಸಿದ್ದ ರೂಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ವಿನೋದ್ ಶಿವರಾಜ್ಗೆ ಟಿಕೆಟ್ ಕೈತಪ್ಪಿದ್ದ ರಿಂದ ಬಂಡಾಯದ ಬಾವುಟ ಹಾರಿಸಿದ್ದಾರೆ. ಇದು ಕಾಂಗ್ರೆಸ್ಗೆ ಬಿಸಿತುಪ್ಪವಾಗಿದೆ.
ಎಲೆಕ್ಷನ್ ಮ್ಯಾನೇಜ್ಮೆಂಟ್ ಚತುರ ವೈಎಎನ್!: ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ 34 ವಿಧಾನಸಭಾ ಕ್ಷೇತ್ರ ಬರಲಿವೆ. 2006ರಿಂದ ಕ್ಷೇತ್ರದಲ್ಲಿ ಸತತ ಗೆಲುವು ಸಾಧಿಸುತ್ತಾ ಬಂದಿರುವ ಕೋಲಾರ ಜಿಲ್ಲೆ ಯಚ್ಚನಹಳ್ಳಿಯ ಒಕ್ಕಲಿಗ ಸಮುದಾಯದ ವೈ.ಎ.ನಾರಾಯಣಸ್ವಾಮಿ ‘ಎಲೆಕ್ಷನ್ ಮ್ಯಾನೇಜ್ಮೆಂಟ್’ ಚತುರನೆನಿಸಿದ್ದಾರೆ. ಪ್ರತಿ ಬಾರಿ ಕಾಂಗ್ರೆಸ್, ಜೆಡಿಎಸ್ ಹೊಸಮುಖವನ್ನು ಕಣಕ್ಕಿಳಿಸುತ್ತಿವೆ. ವೈಎಎನ್ ವರ್ಚಸ್ಸು ವೃದ್ಧಿಗೆ ಇದು ಪ್ರಮುಖ ಕಾರಣ. ಶಿಕ್ಷಕರ, ಮುಖ್ಯಶಿಕ್ಷಕರ, ಉಪನ್ಯಾಸಕರ, ಪ್ರಾಚಾರ್ಯ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳ ಜತೆ ಉತ್ತಮ ಒಡನಾಟ ಹೊಂದಿರುವುದು ವೈಎಎನ್ಗೆ ಪ್ಲಸ್ ಪಾಯಿಂಟ್
ಹೊಸಬನಾದರೂ ಡಿಟಿಎಸ್ ಪ್ರಭಾವಿ: ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ತೀವ್ರ ಪೈಪೋಟಿ ಒಡ್ಡಿದ್ದ ಡಿ.ಟಿ.ಶ್ರೀನಿವಾಸ್ ಶಿಕ್ಷಕರ ಕ್ಷೇತ್ರಕ್ಕೆ ಹೊಸಮುಖ ಎನಿಸಿದರೂ ಪತ್ನಿ ಮಾಜಿ ಶಾಸಕಿ ಕೆ.ಪೂರ್ಣಿಮಾ ಹಿರಿಯೂರು ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದು, ಚಿತ್ರದುರ್ಗ-ದಾವಣಗೆರೆ (3 ತಾಲೂಕು) ಜಿಲ್ಲೆಗಳಲ್ಲಿ ಶಕ್ತಿಶಾಲಿ ಎನಿಸಿದ್ದಾರೆ. ಗೊಲ್ಲ ಸಮುದಾಯದ ಡಿಟಿಎಸ್ಗೆ ಕಾಂಗ್ರೆಸ್ನಿಂದ ಉಚ್ಚಾಟನೆಗೊಂಡಿರುವ ಪಕ್ಷೇತರ ಅಭ್ಯರ್ಥಿಗಳಾದ ಕುರುಬ ಸಮುದಾಯದ ಲೋಕೇಶ್ ತಾಳಿಕಟ್ಟೆ, ವಿನೋದ್ ಶಿವರಾಜ್ ಅಹಿಂದ ಮತಬುಟ್ಟಿಗೆ ಕೈಯಿಟ್ಟಿರುವುದು ಕಾಂಗ್ರೆಸ್ಗೆ ತಲೆನೋವಾಗಿದೆ.