

ನವದೆಹಲಿ: ಸುಂದರ ತ್ವಚೆ ಬೇಕೇ- ಇದನ್ನು ಬಳಸಿ, ಗೌರ ವರ್ಣ ಬೇಕೇ- ಈ ಕ್ರೀಮ್ ಹಚ್ಚಿ, ಹುಡುಗರು ನಿಮ್ಮತ್ತ ಆಕರ್ಷಿತರಾಗಬೇಕೆ- ಹಾಗಿದ್ದರೆ ಇದನ್ನು ಬಳಸಿ ಎಂದೆಲ್ಲಾ ಟೊಳ್ಳು ಭರವಸೆ ನೀಡುವ ಮೂಲಕ ಜನರನ್ನು ಮರಳು ಮಾಡುವ ಫೇರ್ನೆಸ್ ಕ್ರೀಂಗಳ ವಿರುದ್ಧ ಇದೀಗ ದೊಡ್ಡ ಅಭಿಯಾನವೇ ಶುರುವಾಗಿದೆ. ಫೇರ್ನೆಸ್ ಕ್ರೀಂಗಳ ಜಾಹೀರಾತಿಗೆ ಸರ್ಕಾರ ನಿರ್ಬಂಧ ವಿಧಿಸಿದೆ.
ಈಗ ಅದರ ಬೆನ್ನಲ್ಲೇ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ ತಾನು ಇಂಥ ಬರಹಗಳುಳ್ಳ ಉತ್ಪನ್ನಗಳನ್ನು ಇನ್ನು ಮುಂದೆ ಮಾರಾಟ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದೆ.
ಇಂಥ ಕ್ರೀಂಗಳು ವರ್ಣಭೇದ ನೀತಿಯನ್ನು ಬಿಂಬಿಸುತ್ತಿರುವುದಾಗಿ ಟೀಕೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ, ಈಗ ತನ್ನ ತಪ್ಪನ್ನು ಒಪ್ಪಿಕೊಂಡಿರುವ ಕಂಪನಿ, ಈ ಹೇಳಿಕೆ ನೀಡಿದೆ.
ಈ ಬರಹಗಳುಳ್ಳ ಕ್ರೀಮ್ಗಳನ್ನು ಅಮೆರಿಕ ಯಾವಾಗಲೋ ನಿಷೇಧಿಸಿದ್ದು, ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಇವುಗಳ ಮಾರಾಟ ನಡೆಯುತ್ತಿತ್ತು. ಆದರೆ ಈಗ ಭಾರತ ಸರ್ಕಾರ ಕೂಡ ಕಠಿಣ ನಿಯಮ ರೂಪಿಸಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಹೇಳಿಕೆಯನ್ನು ಕಂಪನಿ ನೀಡಿದೆ.
ತನ್ನ ಅನೇಕ ಪ್ರಾಡಕ್ಟ್ಗಳಲ್ಲಿ ಇದೇ ಲೈನ್ಗಳು ಇವೆ. ವೆಬ್ಸೈಟ್ನಲ್ಲಿ ಕೂಡ ಈ ಬಗ್ಗೆ ಉಲ್ಲೇಖವಿದೆ. ಆದ್ದರಿಂದ ವೆಬ್ಸೈಟ್ ಕೂಡ ಅಪ್ಡೇಟ್ ಮಾಡಲಾಗುವುದು ಎಂದು ಕಂಪನಿ ಹೇಳಿದೆ.
ಈ ನಡುವೆ, ಫೇರ್ ಆ್ಯಂಡ್ ಲವ್ಲಿ ಮಾರಾಟವನ್ನುನಿಲ್ಲಿಸುವಂತೆ ಕೆಲವು ಕಡೆಗಳಲ್ಲಿ ಲಕ್ಷಾಂತರ ಮಂದಿ ಸಹಿ ಹಾಕಿದ್ದಾರೆ. ಕಪ್ಪು ಚರ್ಮದ ಮಹಿಳೆಯರಿಗೆ ಭೇದಭಾವ ಮಾಡಲಾಗುತ್ತಿದೆ. ಆದ್ದರಿಂದ ಇದನ್ನು ನಿಷೇಧಿಸಬೇಕು ಎಂದು ಕೋರಲಾಗಿದೆ.
ಅಮೆರಿಕದಲ್ಲಿ ಕಪ್ಪುವರ್ಣೀಯ ಜಾರ್ಜ್ ಫ್ಲ್ಯಾಡ್ ಹತ್ಯೆಯ ನಂತರ ಕಪ್ಪು ವರ್ಣದ ಬಗ್ಗೆ ಈಗಾಗಲೇ ದೊಡ್ಡ ಆಂದೋಲನ ನಡೆದಿದೆ. ಅದರ ಆಧಾರದ ಮೇಲೆಯೇ ಈ ಲೋಷನ್ ಹಾಗೂ ಕ್ರೀಂಗಳನ್ನೂ ಬಂದ್ ಮಾಡಬೇಕು ಎಂಬ ಕೂಗು ಕೇಳಿಬಂದಿದೆ. (ಏಜೆನ್ಸೀಸ್)