

ಕಾರ್ಗಲ್: ಜೋಗ ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಹಾಗೂ ಪ್ರವಾಸಿ ವಾಹನಗಳ ಪ್ರವೇಶದ್ವಾರದ ಶುಲ್ಕ ಪರಿಷ್ಕರಣೆ ಮಾಡಲಾಗಿದೆ. ನೂತನ ದರ ಗುರುವಾದಿಂದಲೇ ಜಾರಿಯಾಗಲಿದೆ ಎಂದು ಜೋಗ್ ನಿರ್ವಹಣಾ ಪ್ರಾಧಿಕಾರ (ಜೆಎಂಎ)ತಿಳಿಸಿದೆ.
ಜೋಗ ಜಲಪಾತದ ಮುಖ್ಯದ್ವಾರದಲ್ಲಿ ಬುಧವಾರ ಹೊಸ ನಾಮಫಲಕವನ್ನು ಅಳವಡಿಸುವ ವೇಳೆ ಮಾಹಿತಿ ನೀಡಿದ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಧರ್ಮಪ್ಪ, ಈ ಹೊಸ ದರದ ಪರಿಷ್ಕರಣಾ ಪಟ್ಟಿಯು ಗುರುವಾರದಿಂದಲೇ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.
ಜೋಗ ಜಲಪಾತ ಪ್ರದೇಶವನ್ನು ನಿರ್ವಹಿಸಲು ಆದಾಯ ಸರಿದೂಗಿಸಿಕೊಳ್ಳುವ ನಿಟ್ಟಿನಲ್ಲಿ ಪ್ರವೇಶ ಶುಲ್ಕದ ನೂತನ ದರಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ. ಪ್ರಸ್ತುತ ಪ್ರವಾಸಿಗರ ಪ್ರವೇಶ ಹಾಗೂ ಪ್ರವಾಸಿ ವಾಹನಗಳ ಶುಲ್ಕದಿಂದ ಜೋಗ ನಿರ್ವಹಣಾ ಪ್ರಾಧಿಕಾರಕ್ಕೆ ಸಿಗುತ್ತಿರುವ ಆದಾಯಕ್ಕಿಂತ ಸಿಬ್ಬಂದಿ ವೇತನ ಸೇರಿ ಜೆಎಂಎಗೆ ನಿರ್ವಹಣಾ ವೆಚ್ಚವೇ ಜಾಸ್ತಿಯಾಗಿದೆ. ಆದ್ದರಿಂದ ಶುಲ್ಕ ಜಾಸ್ತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜೋಗ ಜಲಪಾತದ ನಿರ್ವಹಣೆಗೆ ಜೆಎಂಎ ಅಡಿ ಒಟ್ಟು 19 ಮಂದಿ ಖಾಸಗಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಅವರಿಗೆ ವೇತನ ನೀಡುವ ಜತೆಗೆ ವಾರ್ಷಿಕ ನಿರ್ವಹಣೆ ಮಾಡಬೇಕು. ಪ್ರವೇಶ ಶುಲ್ಕದ ವಸೂಲಿಯನ್ನು ಕೆಎಸ್‌ಟಿಡಿಸಿ ಸಿಬ್ಬಂದಿ ಅಡಿಯಲ್ಲಿ ಮಾಡಿ ಅವರು ಬ್ಯಾಂಕ್‌ಗೆ ಜಮಾ ಮಾಡುತ್ತಾರೆ. ಅದರಲ್ಲಿ ಶೇ.20ರಷ್ಟು ಹಣ ಅವರಿಗೆ ಸಂದಾಯವಾಗುತ್ತದೆ. ಜತೆಗೆ ವಸೂಲಿಯಾದ ಹಣದ ಪೈಕಿ ಶೇ.18ರಷ್ಟು ಜಿಎಸ್‌ಟಿ ಕಟ್ಟಬೇಕು. ಆದ್ದರಿಂದ ಆದಾಯಕ್ಕಿಂತ ಖರ್ಚೇ ಜಾಸ್ತಿ ಇದೆ. ಇದನ್ನು ಸರಿದೂಗಿಸಿಕೊಳ್ಳುವ ನಿಟ್ಟಿನಲ್ಲಿ ದರ ಏರಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ದರ ಹೆಚ್ಚಳ ಅವೈಜ್ಞಾನಿಕ: ಜೋಗ ಜಲಪಾತದಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಜೆಎಂಎ ಪ್ರವೇಶ ದರ ಜಾಸ್ತಿ ಮಾಡಿರುವುದು ಖಂಡನೀಯ ಎಂದು ಪಪಂ ಮಾಜಿ ಅಧ್ಯಕ್ಷ ಎಸ್.ಎಲ್.ರಾಜ್‌ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಕೃತಿ ನಿರ್ಮಿತ ಜೋಗ ಜಲಪಾತದ ದರ್ಶನ ಪಡೆಯಲು ಒಂದು ಕಾಲದಲ್ಲಿ ಉಚಿತ ಇತ್ತು, ನಂತರ ಪ್ರವೇಶ ಶುಲ್ಕವನ್ನು ಪಡೆಯಲಾಯಿತು. ಇದೀಗ ಪ್ರವಾಸಿಗರಿಗೆ ಶೌಚಗೃಹ, ಕುಡಿಯುವ ನೀರು, ಮಳೆ ಬಂದರೆ ನಿಲ್ಲಲು ಯಾವುದೇ ಮೂಲ ಸೌಕರ್ಯಗಳು ಇಲ್ಲದಿರುವಾಗ ಪ್ರವೇಶ ದರ ಜಾಸ್ತಿ ಮಾಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ. ಜತೆಗೆ ಒಳಹೋಗುವ ಪ್ರವಾಸಿಗರು ಕೇವಲ 2 ತಾಸಿನಲ್ಲಿ ಹೊರಗೆ ಬರಬೇಕು ಎಂದು ನಾಮಫಲಕ ಅಳವಡಿಸಿರುವುದು ಅತ್ಯಂತ ಅವೈಜ್ಞಾನಿಕ. ಒಂದೊಂದು ಸಮಯದಲ್ಲಿ ಮಂಜು ತುಂಬಿದ ಹೊತ್ತಿನಲ್ಲಿ ದಿನವಿಡೀ ಜಲಪಾತದ ದರ್ಶನ ಸಿಗುವುದಿಲ್ಲ. ಆದ್ದರಿಂದ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಹೊಸ ದರ ಪಟ್ಟಿಯನ್ನು ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.