

ಕಾರ್ಗಲ್: ಹೈಟೆಕ್ ಪ್ರವಾಸಿ ತಾಣವಾಗಿಸಲು 185 ಕೋಟಿ ರೂ. ವೆಚ್ಚದಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಅಭಿವೃದ್ಧಿ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಜೋಗ ಜಲಪಾತಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಜತೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿ, ಪ್ರವಾಸಿಗರು ವರ್ಷಪೂರ್ತಿ ಆಗಮಿಸಿ ಜಲಪಾತದ ವೀಕ್ಷಣೆ ಜತೆಗೆ ಯುವಪೀಳಿಗೆಗೆ ಆಕರ್ಷಿಸುವ ವಿನೂತನ ಕಾಮಗಾರಿ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.
ಜೋಗ ಜಲಪಾತದಲ್ಲಿ 185 ಕೋಟಿ ರೂ. ವೆಚ್ಚದ ಕಾಮಗಾರಿ ಪೈಕಿ ಹಿಂದಿನ ಸರ್ಕಾರ 20 ಕೋಟಿ ರೂ. ನೀಡಿತ್ತು. ರಾಜ್ಯ ಸರ್ಕಾರ ಈಗಾಗಲೇ 75 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಒಟ್ಟು 95 ಕೋಟಿ ರೂ. ಹಣ ನೀಡಲಾಗಿದೆ. ಗುತ್ತಿಗೆ ಕಂಪನಿಗೆ 99 ಕೋಟಿ ರೂ. ಬಾಕಿ ನೀಡಬೇಕಿರುತ್ತದೆ ಎಂದರು.
ಜೋಗ ಜಲಪಾತ ಮುಖ್ಯದ್ವಾರಕ್ಕೆ ಹೊಂದಿಕೊಂಡಂತೆ ದ್ವಿಪಥ ಕಾಂಕ್ರೀಟ್ ರಸ್ತೆ ಮಾಡಬೇಕಿದೆ. ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಮಾಡಲಾಗುವುದು. ಈ ಹಿಂದೆ ನಿರ್ಮಾಣ ಮಾಡಲಾದ ಜಿಪ್‌ಲೈನ್ ಇದ್ದು, ಸರಿಪಡಿಸಿ ಸೇವೆಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಗ್ಲಾಸ್‌ಹೌಸ್ ಸೇರಿಸಲು ಚಿಂತನೆ: ಜೋಗಕ್ಕೆ ಆಗಮಿಸುವ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಅಗತ್ಯವಿರುವ ವಸತಿ ಸಮುಚ್ಚಯ, ಹೈಟೆಕ್ ಹೋಟೆಲ್, 22ಕ್ಕೂ ಹೆಚ್ಚು ಆಧುನಿಕ ಶಾಪಿಂಗ್ ಕಾಂಪ್ಲೆಕ್ಸ್‌ಗಳ ವ್ಯವಸ್ಥೆ, ಅತ್ಯಾಧುನಿಕ ಪಾರ್ಕ್ ನಿರ್ಮಾಣ, ವಾಟರ್ ಮ್ಯೂಸಿಕ್, ಲೇಸರ್ ಶೋ ಸೇರಿ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಟ್ರೆಂಡ್ ಆಗಿರುವ ರೈನ್ ಡಾನ್ಸ್, ಗ್ಲಾಸ್‌ಹೌಸ್ ಸೇರಿಸುವ ನಿಟ್ಟಿನಲ್ಲಿ ಚಿಂತಿಸಲಾಗುವುದು. ಜತೆಗೆ ಶಿರೂರು ಕೆರೆ ಸಮೀಪ ಜೋಗ್ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 20 ಎಕರೆ ಜಾಗವಿದ್ದು, ಪ್ರವಾಸಿಗರ ಅನುಕೂಲಕ್ಕೆ ಏನು ಮಾಡಬಹುದು ಎನ್ನುವುದನ್ನು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ತಳಕಳಲೆ ಹಿನ್ನೀರಿನ ದಡದಲ್ಲಿ ಪ್ರವಾಸಿಗರಿಗೆ ಬೋಟಿಂಗ್ ವ್ಯವಸ್ಥೆ ಮಾಡುವುದು ಕಾಮಗಾರಿ ಪ್ಯಾಕೇಜ್‌ನಲ್ಲಿದೆ. ಜೋಗದಲ್ಲಿ ಕೆಲಸಕ್ಕೆ ಸ್ಥಳೀಯರಿಗೆ ಮೊದಲ ಅವಕಾಶ ನೀಡಲಾಗುವುದು. ಆದರೆ ಎಷ್ಟು ಮಂದಿ ಬೇಕು ಎನ್ನುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದರು. ಹಿಂದಿನ ಬಿಜೆಪಿ ಸರ್ಕಾರ ಕೆಲಸಕ್ಕೆ ಆದೇಶ ಮಾಡಿತ್ತಾದರೂ ಹಣ ಬಿಡುಗಡೆ ಮಾಡಿರಲಿಲ್ಲ. ಇದರಿಂದ ಕಾಮಗಾರಿಗಳನ್ನು ಮುಗಿಸಲು ವಿಳಂಬವಾಗಿದೆ. ಇದೀಗ ತ್ವರಿತಗತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಹಂತ ಹಂತವಾಗಿ ಕಾಮಗಾರಿ ಮುಗಿಸಲಾಗುವುದು ಎಂದು ತಿಳಿಸಿದರು.
ಜಲಪಾತದ ಗುಂಡಿ ಇಳಿಯಲು ನಿಷೇಧ: ಶನಿವಾರ, ಭಾನುವಾರ ಮತ್ತು ರಜೆ ದಿನಗಳಲ್ಲಿ ಜಲಪಾತಕ್ಕೆ ಲಿಂಗನಮಕ್ಕಿಯಿಂದ ನೀರು ಹೊರಹರಿಸುವ ಬಗ್ಗೆ ಮತ್ತು ವಿದ್ಯುತ್ ಉತ್ಪಾದನೆಗೆ ನೀರಿನ ಕೊರತೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಸದ್ಯಕ್ಕೆ ಯಾವುದೇ ತೀರ್ಮಾನವಿಲ್ಲ. ಬದಲಿಗೆ ನೀರನ್ನು ಜಲಪಾತದಲ್ಲಿ ರೀ ಸೈಕ್ಲಿಂಗ್ ಆಫ್ ವಾಟರ್ ಯೋಜನೆ ಕಾರ್ಯರೂಪಕ್ಕೆ ಬಂದಾಗ ಯೋಚಿಸಬೇಕಿದೆ. ಜಲಪಾತದ ಗುಂಡಿಗೆ ಇಳಿದು ಜಲಪಾತ ಕಣ್ತುಂಬಿಕೊಳ್ಳಲು ಕರೊನಾ ಸಮಯದಿಂದ ನಿಷೇಧಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಸದ್ಯಕ್ಕೆ ನಿಷೇಧ ತೆರವು ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಪಪಂ ಅಧ್ಯಕ್ಷ ಎಂ.ರಾಜು, ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ಪಿ.ಮಂಜುನಾಥ್, ಸುಜಾತಾ ಜೈನ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಧರ್ಮಪ್ಪ, ಸಾಗರ ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಪ್ರಮುಖರಾದ ಕಲಸೆ ಚಂದ್ರಪ್ಪ, ವಿ.ಸಂತೋಷ್‌ಕುಮಾರ್, ಸಂದೀಪ್, ರವಿ ಲಿಂಗನಮಕ್ಕಿ, ಶ್ರೀಧರ್ ಲಿಂಗನಮಕ್ಕಿ, ಸತೀಶ್ ಮಹಾಲೆ, ವಿಜಯ್ ಕುಮಾರ್, ಸಣ್ಣಪ್ಪ ಇತರರಿದ್ದರು.