

ಜೋ ಬೈಡೆನ್ ಅವರ ದೂರದ ಸಂಬಂಧಿಕರು ಈಗಲೂ ಭಾರತದಲ್ಲಿ ವಾಸವಾಗಿದ್ದಾರೆಯೇ ಎಂಬ ವಿಷಯ ಅವರು ಅಧ್ಯಕ್ಷರಾದ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂದಿದೆ. ಆದಾಗ್ಯೂ ಭಾರತದಲ್ಲಿ ಯಾರೊಬ್ಬರೂ ತಾವು ಬೈಡೆನ್ ಸಂಬಂಧಿಗಳು ಎಂದು ಈಗ ಹೇಳಿಕೊಂಡಿಲ್ಲ. 2013ರಲ್ಲಿ ಉಪಾಧ್ಯಕ್ಷರಾಗಿದ್ದ ಬೈಡೆನ್ ಮುಂಬೈಗೆ ಭೇಟಿ ನೀಡಿದ್ದರು. ಆಗ ಆಶ್ಚರ್ಯಕರ ಮಾಹಿತಿ ಬಿಚ್ಚಿಟ್ಟಿದ್ದ ಬೈಡೆನ್, ತಾವು 29 ವರ್ಷದವರಾಗಿದ್ದಾಗ 1972ರಲ್ಲಿ ಮೊದಲ ಬಾರಿ ಅಮೆರಿಕದ ಸೆನೆಟ್ಗೆ ಆಯ್ಕೆಯಾದ ವೇಳೆ ಭಾರತದಿಂದ ಬೈಡೆನ್ ಎಂಬ ಹೆಸರಿನವರಿಂದ ಬಂದಿದ್ದ ಪತ್ರವೊಂದರ ಬಗ್ಗೆ ಹೇಳಿದ್ದರು.
ಪತ್ರದಲ್ಲಿ ‘ಜೋ ಬೈಡೆನ್ ದೊಡ್ಡ ಅಜ್ಜ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಅವರು ಇಲ್ಲಿನ ಮಹಿಳೆಯನ್ನು ಮದುವೆಯಾಗಿ ಭಾರತದಲ್ಲೇ ನೆಲೆಸಿದ್ದರು ಎನ್ನಲಾಗಿದೆ. ಹೀಗಾಗಿ ಜೋ ಬೈಡೆನ್ಗೂ ನಮಗೂ ಸಂಬಂಧವಿರಬಹುದು ಎಂದು ಬರೆಯಲಾಗಿತ್ತು’. ಆದರೆ ಆ ಪತ್ರದ ಬಗ್ಗೆ ತಾವು ಹೆಚ್ಚು ಆಸಕ್ತಿಯನ್ನು ವಹಿಸಲಿಲ್ಲ. ತಮಗೆ ತಿಳಿದಿರುವ ಮಾಹಿತಿಯ ಪ್ರಕಾರ ಮುಂಬೈನಲ್ಲಿ 5 ಮಂದಿ ಬೈಡೆನ್ ಹೆಸರಿನವರಿದ್ದಾರೆ. ಬಹುಶಃ ಯಾರಾದರೂ ಈ ವಿಷಯದ ಬೆನ್ನು ಹತ್ತಬಹುದು ಎಂದು ಜೋ ಬೈಡೆನ್ ಹೇಳಿದ್ದರು. ಈ ಕುರಿತು 2015ರಲ್ಲಿ ವಾಷಿಂಗ್ಟನ್ನಲ್ಲೂ ಮಾತನಾಡಿದ್ದ ಬೈಡೆನ್, ತಮ್ಮ ದೊಡ್ಡ ಅಜ್ಜ ಜಾರ್ಜ್ ಬೈಡೆನ್ ಈಸ್ಟ್ ಇಂಡಿಯಾ ಟ್ರೇಡಿಂಗ್ ಕಂಪನಿಯಲ್ಲಿ ಕ್ಯಾಪ್ಟನ್ ಆಗಿದ್ದರು ಹಾಗೂ ಅವರು ಅಲ್ಲೇ ಮದುವೆಯಾಗಿ ನೆಲೆಸಿದ್ದರು ಎಂದು ಹೇಳಿದ್ದರು.
ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಅವರ ಆಡಳಿತದಲ್ಲಿ ಅಮೆರಿಕ ಮತ್ತು ಭಾರತ ಮೊದಲಿನಂತೆಯೇ ಒಟ್ಟಾಗಿ ಕೆಲಸ ಮುಂದುವರಿಸುತ್ತವೆ ಎಂಬ ವಿಶ್ವಾಸವಿದೆ. ನಿಮ್ಮ ಗೆಲುವು ಅಮೆರಿಕ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಉದಾತ್ತ ಮೌಲ್ಯಗಳ ವಿಜಯವಾಗಿದೆ. | ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆ
ಬೆಂಬಲಿಗರಿಂದ ಸಂಭ್ರಮಾಚರಣೆ
ಅಮೆರಿಕದಲ್ಲಿ ಡೆಮಾಕ್ರಟರ ಸಂಭ್ರಮ ಎಲ್ಲೆಲ್ಲೂ ಕಾಣುತ್ತಿದೆ. ರಸ್ತೆಗಳಲ್ಲಿ ಅಮೆರಿಕದ ಧ್ವಜಗಳ ಹಾರಾಟ, ಬೆಂಬಲಿಗರ ನೃತ್ಯ, ಮೆಕ್ಸಿಕನ್ ವೇವ್ಗಳ ಸಂಭ್ರಮಾಚರಣೆಗಳು ನಡೆಯುತ್ತಿವೆ. ಟ್ರಂಪ್ ಬೆಂಬಲಿಗರಿಂದ ಆಕ್ರೋಶ ಮತ್ತು ಫಲಿತಾಂಶವನ್ನು ಒಪ್ಪಿಕೊಳ್ಳುವ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತಗಳ ಆಡಿಟ್ ಆಗಬೇಕು, ಕೋರ್ಟ್ನಲ್ಲಿ ನಾವು ಜಯಗಳಿಸುತ್ತೇವೆ ಎಂದು ಹಲವರು ಹೇಳಿದ್ದಾರೆ. ಆದರೆ, ಎಲ್ಲೂ ದೊಡ್ಡ ಮಟ್ಟದ ಪ್ರತಿಭಟನೆ ವ್ಯಕ್ತವಾಗಿಲ್ಲ.
ಭಾರತ-ಅಮೆರಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ನೂತನ ಅಧ್ಯಕ್ಷ ಜೋ ಬೈಡೆನ್ ಕೊಡುಗೆ ಅಮೂಲ್ಯವಾದುದು. ಈ ಮೈತ್ರಿಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಅವರೊಟ್ಟಿಗೆ ಶ್ರಮಿಸಲು ಎದುರು ನೋಡುತ್ತೇನೆ. ಕಮಲಾ ಹ್ಯಾರಿಸ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಯಶಸ್ಸು, ಎಲ್ಲ ಭಾರತೀಯ ಅಮೆರಿಕನ್ರಿಗೆ ಹೆಮ್ಮೆಯ ವಿಷಯವಾಗಿದೆ. ನಿಮ್ಮ ಬೆಂಬಲ ಮತ್ತು ನಾಯಕತ್ವದೊಂದಿಗೆ ಭಾರತ-ಅಮೆರಿಕ ಸಂಬಂಧ ಇನ್ನಷ್ಟು ಬಲಗೊಳ್ಳಲಿದೆ ಎಂಬ ವಿಶ್ವಾಸವಿದೆ. | ನರೇಂದ್ರ ಮೋದಿ ಪ್ರಧಾನಮಂತ್ರಿ
ವಿಶ್ವ ನಾಯಕರಿಂದ ಅಭಿನಂದನೆ
ಜೋ ಬೈಡೆನ್ಗೆ ವಿಶ್ವ ನಾಯಕರಿಂದ ಅಭಿನಂದನೆಯ ಮಹಾಪೂರವೇ ಹರಿದುಬಂದಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಕೆನಾಡದ ಪ್ರಧಾನಿ ಜಸ್ಟಿನ್ ಟ್ರುಡೊ, ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಇನ್ನಿತರರು ಶುಭಕೋರಿದ್ದಾರೆ.
ಬೈಡೆನ್ ಟೀಂಗೆ ಮಂಡ್ಯ ವೈದ್ಯ?
ಮಂಡ್ಯ: ಅಮೆರಿಕ ಅಧ್ಯಕ್ಷೀಯ ಚುನಾವಣೆ ಯಲ್ಲಿ ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಪರ ಸಕ್ರಿಯವಾಗಿ
ಹಲ್ಲೆಗೆರೆ ಗ್ರಾಮದ ಡಾ.ಎಚ್.ಎನ್.ಲಕ್ಷ್ಮೀನರಸಿಂಹಮೂರ್ತಿ ಮತ್ತು ಮೈತ್ರೇಯಿ ದಂಪತಿಯ ಮಗ ವಿವೇಕ್, ಲಂಡನ್ನಲ್ಲಿ ಜನಿಸಿದರು. ನಂತರ ಬೆಳೆದಿದ್ದು ಅಮೆರಿಕದಲ್ಲಿ. ಡಾಕ್ಟರ್ ಫಾರ್ ಅಮೆರಿಕ ಸಂಘಟನೆಯ ಸಂಸ್ಥಾಪಕರಾಗಿ, ಬರಾಕ್ ಒಬಾಮ ಹೆಲ್ತ್ಕೇರ್ ಮುಖ್ಯಸ್ಥ ಹಾಗೂ ವೈದ್ಯಕೀಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ವಿವೇಕ್ ಆಶಯದಂತೆ ಹಲ್ಲೆಗೆರೆ ಗ್ರಾಮದಲ್ಲಿ ಸರ್ವಧರ್ಮದ ಪ್ರತೀಕವಾಗಿ ಪ್ರಪಂಚದ 36 ಮಹಾನ್ ಮಾನವತಾವಾದಿಗಳ ಪ್ರತಿಮೆ ನಿರ್ವಣಕ್ಕೆ ಸಿದ್ಧತೆ ನಡೆದಿದೆ.
ಕರೊನಾ ಟಾಸ್ಕ್ಫೋರ್ಸ್ಗೆ ವಿವೇಕ್ ನೇತೃತ್ವ
ದೇಶದಲ್ಲಿ ಕಾಡುತ್ತಿರುವ ಕರೊನಾ ಜಾಡ್ಯವನ್ನು ಹತೋಟಿಗೆ ತರಲು ವಿಜ್ಞಾನಿಗಳು ಮತ್ತು ತಜ್ಞರನ್ನು ಒಳಗೊಂಡ ಟಾಸ್ಕ್ಫೋರ್ಸ್ ಅನ್ನು ಸೋಮವಾರ ರಚಿಸುವುದಾಗಿ ಬೈಡೆನ್ ಹೇಳಿದರು. ಈ ಟಾಸ್ಕ್ಫೋರ್ಸ್ನ ಯೋಜನೆಗಳು ವಿಜ್ಞಾನಿಗಳ ಅಭಿಪ್ರಾಯದಂತೆ ರೂಪಿತವಾಗುತ್ತವೆ ಮತ್ತು ಈ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ಇರುವುದಿಲ್ಲ ಎಂದರು. ಈ ಟಾಸ್ಕ್ಫೋರ್ಸ್ನ ಸಹಅಧ್ಯಕ್ಷರಾಗಿ ಒಬಾಮಾ ಅವಧಿಯಲ್ಲಿ 19ನೇ ಜನರಲ್ ಸರ್ಜನ್ ಆಗಿದ್ದ ಮಂಡ್ಯದ ಹಲ್ಲೆಗೆರೆ ಮೂಲದ ಡಾ. ವಿವೇಕ್ ಮೂರ್ತಿ ಮತ್ತು ಆಹಾರ ಹಾಗೂ ಔಷಧ ನಿಯಂತ್ರಣದ ಮಾಜಿ ಆಯುಕ್ತ ಡೇವಿಡ್ ಕೆಸ್ಲರ್ ಇರಲಿದ್ದಾರೆ.
ವಿವೇಕ್ ಮೂರ್ತಿ ಶ್ರಮಜೀವಿ. ಅವರು ರಾಜಕೀಯ ಕ್ಷೇತ್ರಕ್ಕೆ ಬರುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಅದರಲ್ಲಿಯೂ ಅಮೆರಿಕ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆಂದು ತಿಳಿದಿರಲಿಲ್ಲ. ಅವರ ಅಜ್ಜ ರಾಜಕಾರಣಿಯಾಗಿದ್ದರು. ಬಹುಶಃ ಅವರಿಂದಲೇ ರಾಜಕೀಯದ ಗುಣ ಬಂದಿರಬಹುದು. |ಎಚ್.ಕೆ.ವಸಂತ್ಕುಮಾರ್ ಡಾ.ವಿವೇಕ್ವುೂರ್ತಿ ಸಂಬಂಧಿ