

ಜೈಪುರ: ಪತ್ನಿಯನ್ನು ಕೊಲೆ ಮಾಡಿದ ಬಳಿಕ ಅತ್ತೆ ಮನೆಗೆ ಮತ್ತು ಪೊಲೀಸರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಅವರು ಬರುವವರೆಗೂ ಮೃತದೇಹದ ಮುಂದೆ ಪತಿ ಮಹಾಶಯನೊಬ್ಬ ವಿಡಿಯೋ ಗೇಮ್ ಆಡುತ್ತಾ ಕುಳಿತಿದ್ದ ಆತಂಕಕಾರಿ ಘಟನೆ ರಾಜಸ್ಥಾನದ ಜೋಧ್ಪುರ ಬಿಜಿಎಸ್ ಕಾಲನಿಯಲ್ಲಿ ನಡೆದಿದೆ.
ಆರೋಪಿ ವಿಕ್ರಮ್ ಸಿಂಗ್ ಭಾನುವಾರ ರಾತ್ರಿ ಪತ್ನಿ ಶಿವ ಕನ್ವಾರ್ಳನ್ನು ಹತ್ಯೆ ಮಾಡಿದ ಬಳಿಕ ಅತ್ತೆ ಮನೆಗೆ ಕರೆ ಮಾಡಿ ನಿಮ್ಮ ಮಗಳನ್ನು ಕೊಂದಿದ್ದೇನೆಂದು ಹೇಳಿದ್ದಾನೆ. ಅಲ್ಲದೆ, ಪೊಲೀಸರಿಗೂ ಸಹ ಕರೆ ಮಾಡಿ ಪತ್ನಿಯನ್ನು ಹತ್ಯೆ ಮಾಡಿರುವ ಮಾಹಿತಿ ತಿಳಿಸಿದ್ದಾನೆ. ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದಾಗ ಆರೋಪಿ ಸಿಂಗ್ ಏನೂ ನಡೆದಿಲ್ಲವೆಂಬಂತೆ ಪತ್ನಿಯ ಮೃತದೇಹದ ಮುಂದೆ ಕುಳಿತು ವಿಡಿಯೋ ಗೇಮ್ ಆಡುತ್ತಿದ್ದ ಎಂದು ವರದಿಯಾಗಿದೆ.
ಸಿಂಗ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕತ್ತರಿಯಿಂದ ಕೊಲೆ ಮಾಡಿರುವುದಾಗಿ ಸಿಂಗ್ ತಪ್ಪೊಪ್ಪಿಕೊಂಡಿದ್ದಾನೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿಯನ್ನು ಏಕೆ ಕೊಲೆ ಮಾಡಿದೆ ಎಂಬುದು ಸಿಂಗ್ಗೂ ಕೂಡ ಅರಿವಿಲ್ಲವಂತೆ. ಇದ್ದಕ್ಕಿದ್ದಂತೆ ಯಾರೋ ದಾಳಿ ಮಾಡುವ ಭಯದಿಂದ ಅಥವಾ ಫಿಟ್ಸ್ ಬಂದಾಂತಾಗಿ ಹೆಂಡತಿಯನ್ನು ಕೊಲೆ ಮಾಡಿದ್ದಾಗಿ ಸಿಂಗ್ ಹೇಳಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ನಿರುದ್ಯೋಗದಿಂದ ಸಿಂಗ್ ತುಂಬಾ ಹತಾಶನಾಗಿದ್ದ ಎಂದು ತಿಳಿದುಬಂದಿದೆ. ಸಿಂಗ್ ಪತ್ನಿ ಮನೆಯಲ್ಲಿ ಟೈಲರ್ ಆಗಿದ್ದಳು ಮತ್ತು ನಂತರದ ದಿನಗಳಲ್ಲಿ ಕೋಆಪರೇಟಿವ್ ಸ್ಟೋರ್ನಲ್ಲಿ ಕೆಲಸ ಮಾಡಲು ಆರಂಭಿಸಿದ್ದಳು. ಇತ್ತ ಸಿಂಗ್ ಬಹುದಿನಗಳವರೆಗೆ ನಿರುದ್ಯೋಗಿ ಆಗಿಯೇ ಉಳಿದಿದ್ದ. ಅಲ್ಲದೆ, ಪತ್ನಿಯ ಕೆಲಸದಿಂದ ಅಸಂತೋಷಗೊಂಡಿದ್ದ ಎಂದು ಡಿಸಿಪಿ ಧರ್ಮೇಂಧ್ರ ಸಿಂಗ್ ಯಾದವ್ ಹೇಳಿದ್ದಾರೆ.
ಶಿವ ಕನ್ವಾರ್ ಮೃತದೇಹವನ್ನು ಶವಪರೀಕ್ಷೆಯ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಕನ್ವಾರ್ ತಂದೆ ಮನೋಹರ್ ಸಿಂಗ್ ಆರೋಪಿ ವಿಕ್ರಮ್ ಸಿಂಗ್ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. (ಏಜೆನ್ಸೀಸ್)