ಕೆಲಸಕ್ಕೆ ಕತ್ತರಿ; ಕೈ ಹಿಡಿದ ಉದ್ಯೋಗ ಖಾತ್ರಿ

Page 9 -1
Published on

ಕೂಲಿಕಾರರ ಆಸಕ್ತಿ ಮೇಲೆ ಖಾತರಿ ಯೋಜನೆಯ ಪ್ರಯೋಜನ ಅವಲಂಬಿಸಿರುತ್ತದೆ ಎನ್ನುವುದಕ್ಕೆ ಏಪ್ರಿಲ್-ಮೇ ತಿಂಗಳ ಏರಿಳಿತ ನಿದರ್ಶನ. ರಾಜ್ಯದಲ್ಲಿ ಏ.28ಕ್ಕೆ 3.77 ಲಕ್ಷ ಹಾಗೂ ಮೇ 29ರಂದು 10.39 ಲಕ್ಷ ಮಾನವ ದಿನಗಳು ಸೃಜನೆಯಾಗಿದ್ದರೆ, ಇನ್ನುಳಿದ ದಿನಗಳಲ್ಲಿ 2 ಲಕ್ಷ ಆಸುಪಾಸಿನಲ್ಲಿದೆ. ಈ ಕೆಲಸಕ್ಕೆ ಒಮ್ಮೆ ಹಾಜರಾದ ವ್ಯಕ್ತಿ ಮರುದಿನವೂ ಹಾಜರಾಗುವುದು ಸಾಮಾನ್ಯ. ಹೀಗಾಗಿ ಉದ್ಯೋಗಗಳು ಎನ್ನುವ ಬದಲಿಗೆ ವ್ಯಕ್ತಿ/ಮಾನವ ದಿನಗಳು ಎಂದು ಕರೆಯಲಾಗುತ್ತದೆ.

ಮಹಾಮಾರಿ ಕರೊನಾ ಆರ್ಭಟಕ್ಕೆ ಇಡೀ ಜಗತ್ತು ತಲ್ಲಣಗೊಂಡಿದೆ. ಸಾಕಷ್ಟು ಕಾರ್ವಿುಕರು, ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಆದರೆ ಚಳಿ, ಮಳೆ, ಗಾಳಿ, ಬಿಸಿಲಿಗೆ ಬೆಚ್ಚದ ಕಾಯಕ ಯೋಗಿಗಳು ಕರೊನಾತಂಕ ಮೆಟ್ಟಿ ನಿಂತು ಎಂದಿನಂತೆ ಬೆವರಿಳಿಸಿ ದುಡಿದಿದ್ದಾರೆ. ಭೂ ಅಭಿವೃದ್ಧಿ, ಹೊಲಗಾಲುವೆ, ಕೃಷಿ ಹೊಂಡಗಳ ನಿರ್ವಣ, ಕೆರೆಕಟ್ಟೆ, ಬಾವಿ ತೋಡುವುದು, ಅರಣ್ಯ ಮತ್ತು ಜಲಸಂರಕ್ಷಣೆ, ಸವಳು-ಜವಳು ಭೂಮಿ ಮರುಪೂರಣ ಮುಂತಾದ ಚಟುವಟಿಕೆಗಳಿಗೆ ಲಾಕ್​ಡೌನ್ ಅಡ್ಡಿಯಾಗಿಲ್ಲ ಎಂದು ‘ಅಧಿಕೃತ ಪ್ರಗತಿ’ ವರದಿ ಹೇಳುತ್ತದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಎಂ-ನರೇಗಾ) ಯೋಜನೆಯಲ್ಲಿ ಫದವೀಧರರಾದಿಯಾಗಿ ಲಕ್ಷಾಂತರ ಮಂದಿ ಕೆಲಸ ಗಿಟ್ಟಿಸಿಕೊಂಡಿದ್ದು, ನಿರ್ಬಂಧಗಳಿಂದ ನೀಡಿದ ವಿನಾಯಿತಿ ಪ್ರಯೋಜನ ಪಡೆದಿದ್ದಾರೆ. ಜತೆಗೆ ಬಯಸಿದವರ ಕೈಗೆ ಕೆಲಸ ನೀಡುವುದಕ್ಕೆ ಅಧಿಕಾರಿ ವರ್ಗ ಮಾಡಿಕೊಂಡ ಸಿದ್ಧತೆಯೂ ಫಲಪ್ರದವಾಗಿದೆ.

ಮಾನವ ದಿನಗಳ ಸೃಜನೆ ದಾಖಲೆ: ಪ್ರಸಕ್ತ ಆರ್ಥಿಕ ವರ್ಷದ ಮೊದಲ 2 ತಿಂಗಳಲ್ಲಿ (ಏಪ್ರಿಲ್ ಹಾಗೂ ಮೇ 30ರವರೆಗೆ) 1,80,62,201 ಮಾನವ ದಿನಗಳು ಸೃಷ್ಟಿಯಾಗಿದ್ದು, ಶುಕ್ರವಾರ (ಮೇ 30) ಒಂದೇ ದಿನ 10,39,197 ಮಾನವ ದಿನಗಳು ಸೃಜನೆ ಆಗಿರುವುದು ಹೊಸ ದಾಖಲೆಯಾಗಿದೆ.

ಉತ್ತಮ ಸ್ಪಂದನೆ: ದೈಹಿಕ ಅಂತರ ಕಾಯ್ದುಕೊಳ್ಳಲೆಂದು ವೈಯಕ್ತಿಕ ಹಾಗೂ 5 ಜನರಿಗೆ ಸೀಮಿತ ಕಾಮಗಾರಿಗಳಿಗೆ ಒತ್ತು ನೀಡಲು ತಿಳಿಸಿ ಆಯಾ ಜಿಪಂ-ಸಿಇಒಗಳಿಗೆ ಮಾರ್ಗಸೂಚಿ ನೀಡಲಾಗಿತ್ತು.ಇದರಿಂದಾಗಿ ತ್ವರಿತಗತಿಯಲ್ಲಿ ಕಾಮಗಾರಿಗಳ ಗುರುತಿಸುವಿಕೆ, ಕ್ರಿಯಾಯೋಜನೆ ರೂಪಿಸಲು ನೆರವಾಯಿತು. ಅಲ್ಲದೆ, ಕೇಂದ್ರ ಬಿಡುಗಡೆ ಮಾಡಿದ -1,861 ಕೋಟಿ ರೂ. ನಲ್ಲಿ ಬಾಕಿ ಕೂಲಿ ವೆಚ್ಚ -1,039 ಕೋಟಿ ರೂ. ಪಾವತಿಸಲಾಯಿತು. ಇದು ಕೂಡ ಕೂಲಿಕಾರರ ಸ್ಪಂದನೆಗೆ ಮತ್ತೊಂದು ಪ್ರಬಲ ಕಾರಣ. ಈ ಹಿಂದೆ ಕೂಲಿ ಹಣಕ್ಕಾಗಿ ಕಾದು ಸುಸ್ತಾದವರಲ್ಲಿ ಭರವಸೆ ಮೂಡಿಸಿತು ಎನ್ನುತ್ತವೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಗಳು.

ಕಾಲಕಾಲಕ್ಕೆ ಕೂಲಿ ಪಾವತಿ: ಖಾತರಿ ಯೋಜನೆಯಲ್ಲಿ ಕೂಲಿ ಪಾವತಿಗೆ ಹಣದ ಕೊರತೆ ಇಲ್ಲ. ನಿಯಮಾನುಸಾರ ಕೂಲಿಕಾರರ ಬ್ಯಾಂಕ್ ಖಾತೆಗೆ ಕಾಲಕಾಲಕ್ಕೆ ಮೊತ್ತ ಜಮೆಯಾಗುತ್ತದೆ. ಏಪ್ರಿಲ್​ನಲ್ಲಿ 83.82 ಕೋಟಿ ರೂ. ಕೂಲಿ ವೆಚ್ಚ ಭರಿಸಲಾಗಿದೆ. ಕೂಲಿ ದರ 249ರಿಂದ 275 ರೂ.ಗೆ ಏರಿದ್ದು, ದುಡಿವ ಜನರಲ್ಲಿ ಹುರುಪು ತುಂಬಿದೆ. ಸಂಕಷ್ಟದಲ್ಲಿ ಉದ್ಯೋಗ ಖಾತರಿ ಆಶಾದಾಯಕ ಬೆಳವಣಿಗೆಯಾಗಿ ಕಂಡಿದ್ದರೂ ಸಮರ್ಪಕ, ಪರಿಣಾಮಕಾರಿ ಅನುಷ್ಠಾನವಾಗುತ್ತಿಲ್ಲ ಎಂದು ಹಲವು ಸಂಘಟನೆಗಳು ಬೇಸರ ವ್ಯಕ್ತಪಡಿಸಿದ್ದು, ಕೆಲಸದ ಒತ್ತಡ ಹಾಗೂ ಭಾರ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಬಹಳಷ್ಟು ತಳಮಟ್ಟದ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿವೆ.

ನರೇಗಾ ನೆರಳಲ್ಲಿ ಪದವೀಧರರು: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಚಿಕ್ಕಹರಳಹಳ್ಳಿ ಗ್ರಾಮದ ಬಿಎ-ಬಿ.ಇಡಿ ಪದವೀಧರೆ ಲಾಲವ್ವ ಲಮಾಣಿ, ಎಂಎ ಪದವೀಧರ ಹಾಗೂ ಅತಿಥಿ ಉಪನ್ಯಾಸಕ ಫಕೀರೇಶ ಕತ್ತೆಬೆನ್ನೂರ, ಬಿಎ ಪದವೀಧರ ಹನುಮಂತಪ್ಪ ಬನ್ನಿಮಟ್ಟಿ ಅವರು ಕೆಲವು ದಿನಗಳಿಂದ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಹರಿಹರದ ಶ್ರೀಶೈಲ ಶಿಕ್ಷಣ ಮಹಾವಿದ್ಯಾಲಯದಲ್ಲಿ 3 ತಿಂಗಳ ಹಿಂದಷ್ಟೇ ಲಾಲವ್ವ ಲಮಾಣಿ ಬಿ.ಇಡಿ ಪದವಿ ಪಡೆದಿದ್ದು, ಯಾವುದಾದರೂ ಶಾಲೆಯಲ್ಲಿ ಶಿಕ್ಷಕಿಯಾಗುವ ಬಯಕೆ ಹೊಂದಿದ್ದರು. ಅಷ್ಟರೊಳಗೆ ಕರೊನಾ ವಕ್ಕರಿಸಿ ಲಾಕ್​ಡೌನ್ ಘೊಷಣೆಯಾದ್ದರಿಂದ ಎಲ್ಲಿಗೂ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಜಲಾಮೃತ ಜಲಾನಯನ ಕಾಮಗಾರಿಯಲ್ಲಿ ಲಾಲವ್ವ ಕೂಲಿ ಮಾಡುತ್ತಿದ್ದಾರೆ. ಹನುಮಂತಪ್ಪ ಬನ್ನಿಮಟ್ಟಿ ತಾವು ಉದ್ಯೋಗದಲ್ಲಿದ್ದ ಖಾಸಗಿ ಕಂಪನಿ ತಾತ್ಕಾಲಿಕವಾಗಿ ಬಂದ್ ಆಗಿದ್ದರಿಂದ, ಅತಿಥಿ ಉಪನ್ಯಾಸಕರಾಗಿದ್ದ ಫಕೀರೇಶ ಕತ್ತೆಬೆನ್ನೂರ ಕಾಲೇಜ್ ಬಂದ್ ಆಗಿದ್ದರಿಂದ ಕೂಲಿ ಕೆಲಸಕ್ಕೆ ಮುಂದಾಗಿದ್ದಾರೆ.

ಖಾತರಿ ಪ್ರಯೋಜನಕ್ಕೆ ಪೈಪೋಟಿ: ಯೋಜನೆಯ ಪ್ರಯೋಜನ ಪಡೆಯುವಲ್ಲಿ ಹಲವು ಜಿಲ್ಲೆಗಳ ಮಧ್ಯೆ ಪೈಪೋಟಿ ಏರ್ಪಟ್ಟಿರುವುದು ಗಮನಾರ್ಹ. ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳ ಸಾಧನೆ ಏಪ್ರಿಲ್​ನಲ್ಲಿ ಮಂದವಾಗಿದ್ದರೂ ಮೇ ನಲ್ಲಿ ಚೇತರಿಸಿಕೊಂಡು ಕೊರತೆ ಸರಿದೂಗಿಸಿಕೊಂಡಿವೆ. ಏಪ್ರಿಲ್​ನಿಂದ ಮೇ 30ರವರೆಗಿನ ಅಧಿಕೃತ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿರುವ ಬಳ್ಳಾರಿ ಜಿಲ್ಲೆಯಲ್ಲಿ 21,40,492 ಮಾನವ ದಿನಗಳು ಸೃಜನೆಯಾಗಿವೆ. ನಂತರದ ಸ್ಥಾನಗಳಲ್ಲಿರುವ ರಾಯಚೂರು-16,10,403, ಬೆಳಗಾವಿ-13,69,644, ಕೊನೆಯ ಸ್ಥಾನದ ಬೆಂಗಳೂರು ನಗರ ಜಿಲ್ಲೆಯಲ್ಲಿ 12,601 ಮಾನವ ದಿನಗಳು ಸೃಷ್ಟಿಯಾಗಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತವರು ಶಿವಮೊಗ್ಗ ಜಿಲ್ಲೆಯಲ್ಲಿ 10,31,028 ಹಾಗೂ ಕರೊನಾದಿಂದ ಬಸವಳಿದ ಕಲಬುರಗಿ ಜಿಲ್ಲೆ 10,55,113 ಮಾನವ ದಿನಗಳನ್ನು ಸೃಷ್ಟಿಸಿ ಗಮನಾರ್ಹ ಸಾಧನೆ ಮಾಡಿವೆ.

ಬೆಳಗಾವಿ ಜಿಪಂ ಹೊಸ ದಾಖಲೆ: ನರೇಗಾ ಯೋಜನೆಯಲ್ಲಿ ಬೆಳಗಾವಿ ಜಿಲ್ಲೆಯ 506 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿತ್ಯವೂ 1 ಲಕ್ಷಕ್ಕೂ ಹೆಚ್ಚು ಕಾರ್ವಿುಕರು ಕೆಲಸ ಮಾಡುತ್ತಿದ್ದು, ಇದರಲ್ಲಿ 23 ಸಾವಿರಕ್ಕೂ ಹೆಚ್ಚು ಜನ ಪದವೀಧರರು ಎಂಬುದು ವಿಶೇಷ. ಬೆಳಗಾವಿ ಜಿಲ್ಲೆಯಲ್ಲಿ ನಿತ್ಯ 1,09,089 ಕಾರ್ವಿುಕರು ಕೆಲಸ ಮಾಡುತ್ತಿದ್ದಾರೆ. ಇದು ಬೆಳಗಾವಿ ಜಿಪಂ ಇತಿಹಾಸದಲ್ಲೇ ಹೊಸ ದಾಖಲೆ ಎಂದು ನರೇಗಾ ಯೋಜನೆಯ ನೋಡಲ್ ಅಧಿಕಾರಿಗಳು ತಿಳಿಸಿದ್ದಾರೆ.

ಕೂಲಿ ಕೆಲಸದಲ್ಲೂ ಸದಾನಂದ: ಬಡತನದಲ್ಲೇ ಇಂಜಿನಿಯರಿಂಗ್ ಮುಗಿಸಿ ಉದ್ಯೋಗದ ಕನಸಿನೊಂದಿಗೆ ಬೆಂಗಳೂರಿಗೆ ಹೋಗಿದ್ದ ಗದಗ ಜಿಲ್ಲೆ ಕದಡಿ ಗ್ರಾಮದ ಸದಾನಂದ ಕುರುಗೋಡಪ್ಪ ಮುಕ್ಕಣ್ಣವರ, ಈಗ ಲಾಕ್​ಡೌನ್​ನಿಂದಾಗಿ ಕೆಲಸ ಕಳೆದುಕೊಂಡು ಊರಿಗೆ ಮರಳಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಸದಾನಂದಗೆ ತಂದೆ-ತಾಯಿ ಮತ್ತು ಒಬ್ಬ ಸಹೋದರ ಇದ್ದಾರೆ. ಸಹೋದರ ಕೂಡ ಬಿಇ ಪದವೀಧರ. ಐದು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮೇಂಟೆನೆನ್ಸ್ ಇಂಜಿನಿಯರ್ ಆಗಿದ್ದ ಕಂಪನಿ ಲಾಕ್​ಡೌನ್​ನಿಂದಾಗಿ ಬಾಗಿಲು ಮುಚ್ಚಿದೆ. ಹೀಗಾಗಿ 2 ತಿಂಗಳ ಹಿಂದೆ ಊರಿಗೆ ಬಂದಿರುವ ಇವರು ನರೇಗಾದಲ್ಲಿ ಕೂಲಿ ಮಾಡುತ್ತಿದ್ದಾರೆ.

ಎಂಕಾಂ ಓದಿದವಳು ಕೂಲಿಯಾಳು: ಮೈಸೂರು ಜಿಲ್ಲೆ ತಲಕಾಡು ಹೋಬಳಿ ಟಿ.ದೊಡ್ಡಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 8 ಹಳ್ಳಿಗಳ ಐದು ಕೆರೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಟಿ.ದೊಡ್ಡಪುರ ಗ್ರಾಮದ ಎಂಕಾಂ ಪದವೀಧರೆ ಗೀತಾ ನರೇಗಾದಡಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಶೇ.80 ಅಂಕಗಳಿಂದ ಎಂ.ಕಾಂ. ಮುಗಿಸಿರುವ ಗೀತಾ, ಉದ್ಯೋಗಕ್ಕಾಗಿ 2 ವರ್ಷದಿಂದ ಅಲೆದರೂ ಪ್ರಯೋಜನವಾಗಿಲ್ಲ. ಜತೆಗೆ ಮಾನಸಿಕ ಅಸ್ವಸ್ಥ ತಂಗಿ ಸರಸ್ವತಿ (20), ವೃದ್ಧೆ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಗೀತಾಗಿದೆ. ತಾಯಿ ಕೂಡ ನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗೀತಾ ಕೆಎಎಸ್ ಪರೀಕ್ಷೆಗೆ ಬೆಂಗಳೂರಿನ ಕೋರಮಂಗಲದ ಕೋಚಿಂಗ್ ಸೆಂಟರ್​ನಲ್ಲಿ 3 ತಿಂಗಳು ತರಬೇತಿ ಪಡೆದಿದ್ದು, ಲಾಕ್​ಡೌನ್ ಕಾರಣ ಊರಿಗೆ ಮರಳಿದ್ದರು. ತಾಯಿ ಕೂಲಿ ಮಾಡುವುದನ್ನು ನೋಡಲಾಗದೆ ತಾವೂ ಕೆಲಸ ಮಾಡುತ್ತಿದ್ದಾರೆ.

ಲಾಕ್​ಡೌನ್ ನಡುವೆಯೂ ಉದ್ಯೋಗ ಖಾತರಿ ಯೋಜನೆಗೆ ಕೂಲಿಕಾರರು ಉತ್ತಮವಾಗಿ ಸ್ಪಂದಿಸಿದ್ದು, ಏಪ್ರಿಲ್ 1 ರಿಂದ ಮೇ 30ರವರೆಗೆ 1.8 ಕೋಟಿ ವ್ಯಕ್ತಿ ದಿನಗಳು ಸೃಜನೆಯಾಗಿದ್ದು, ಕೂಲಿ ಹಣವನ್ನು ಕಾಲಕಾಲಕ್ಕೆ ಪಾವತಿಸಿ, ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ಕ್ರಮವಹಿಸಲಾಗಿದೆ. | ಎಲ್.ಕೆ.ಅತೀಕ್ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net