'ಸಾರ್.. ಕೆಲಸವಿದ್ದರೆ ಮಾತ್ರ ನನ್ನ ಲವರ್ ಮದುವೆಗೆ ಒಪ್ಪಿಕೊಳ್ತಾಳೆ'.. ಮ್ಯಾನೇಜರ್​ಗೆ ವಿಚಿತ್ರ ವಿನಂತಿ!

job
Published on

ಬೆಂಗಳೂರು: ಸ್ಪರ್ಧಾತ್ಮಕ ಯುಗದಲ್ಲಿ ಕೆಲಸ ಸಿಗುವುದು ಸುಲಭವಲ್ಲ. ಉನ್ನ ಶಿಕ್ಷಣ, ಕೌಶಲ್ಯ ಹೊಂದಿರಬೇಕಾಗುತ್ತದೆ. ರೆಸ್ಯೂಮ್‌ನಲ್ಲಿ ಉದ್ಯೋಗ ಕೊಡುವವರಿಗೆ ತೃಪ್ತಿಯಾಗುವಂತಹ ಅಂಶಗಳಿರಬೇಕಾಗುತ್ತದೆ. ಆದರೆ ಬೆಂಗಳೂರಿನ ಕಂಪನಿಯೊಂದರಲ್ಲಿ ಉದ್ಯೋಗ ಅರಸಿದ್ದ ಯುವಕ 'ತನ್ನ ಪ್ರೇಯಸಿಗಾಗಿ' ಈ ಉದ್ಯೋಗ ನೀವು ನೀಡಲೇಬೇಕು ಎಂದು ರೆಸ್ಯೂಮ್‌ನಲ್ಲಿ ಬರೆದು ಕಳೂಹಿಸಿದ್ದಾನೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಬೆಂಗಳೂರು ಮೂಲದ ಅರ್ವಾ ಹೆಲ್ತ್ ಕಂಪನಿ ಇತ್ತೀಚೆಗೆ ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿತ್ತು. ಅನೇಕ ಜನರು ಕಂಪನಿಗೆ ರೆಸ್ಯೂಮ್ ಕಳುಹಿಸಿದ್ದಾರೆ. ಒಬ್ಬ ಅಭ್ಯರ್ಥಿಯ ರೆಸ್ಯೂಮ್ ನೋಡಿ ಕಂಪನಿಯ ಮಾನವ ಸಂಪನ್ಮೂಲ ಸಿಬ್ಬಂದಿ ಆಶ್ಚರ್ಯಚಕಿತರಾಗಿದ್ದರು.

ಅಭ್ಯರ್ಥಿಯ ರೆಸ್ಯೂಮ್‌ನಲ್ಲಿ, ಅವರು ತಮ್ಮ ವಿದ್ಯಾರ್ಹತೆ ಮತ್ತು ಉದ್ಯೋಗದ ಅಗತ್ಯವನ್ನು ವಿವರಿಸಿದ್ದಾರೆ. `ಸರ್, ಈ ಕೆಲಸ ಸಿಗದಿದ್ದರೆ ನನ್ನ ಬಾಲ್ಯದ ಗೆಳತಿ ನನ್ನಿಂದ ದೂರವಾಗುತ್ತಾಳೆ. ನಾನು ಅವಳನ್ನು ಮದುವೆಯಾಗಲಾರೆ' ಎಂದು ಬೇಡಿಕೊಂಡಿದ್ದಾನೆ. ಇದನ್ನು ನೋಡಿ ಆ ಕಂಪನಿಯ ಸಿಇಒ ಕೂಡ ಅಚ್ಚರಿಗೊಂಡಿದ್ದರು.

ತನಗೆ ಕೆಲಸವಿದ್ದರೆ ಮಾತ್ರ ಮದುವೆಗೆ ಒಪ್ಪುತ್ತೇನೆ ಎಂದು ಗೆಳತಿಯ ತಂದೆ ಕಂಡೀಷನ್ ಹಾಕಿದ್ದರು ಎಂದು ಯುವಕ ತಿಳಿಸಿದ್ದಾನೆ. ಆ ರೆಸ್ಯೂಮ್ ನೋಡಿದ ನಂತರ ಕಂಪನಿಯ ಎಚ್‌ಆರ್ ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹಾಕಿದ್ದಾರೆ. ಈ ತಮಾಷೆಯ ಪೋಸ್ಟ್ ಅನ್ನು ಇಲ್ಲಿಯವರೆಗೆ 2.2 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಆ ಅಭ್ಯರ್ಥಿಗೆ ಕೆಲಸ ನೀಡಬೇಕು ಎಂದು ಹಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net