ಉದ್ಯೋಗ ಕ್ರಾಂತಿಗೆ ಹೊಸ ಮುನ್ನುಡಿ; ಐಟಿಐ, ಡಿಪ್ಲೊಮೊ ಪೂರ್ಣಗೊಳಿಸಿದವರಿಗೆ ವಿದೇಶದಲ್ಲಿ ಉದ್ಯೋಗ

Sharanprakash Patil
Published on

ಬೆಂಗಳೂರು: ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮವು ರಾಜ್ಯದ ಯುವಕರಿಗೆ ಹೊರದೇಶಗಳಲ್ಲಿ ಉದ್ಯೋಗ ಒದಗಿಸುವ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಿದೆ.

ಇದರ ಭಾಗವಾಗಿ ಸ್ಲೊವಾಕಿಯಾ ರಾಷ್ಟ್ರದಲ್ಲಿ ಬಿಇ, ಡಿಪ್ಲೊಮೊ, ಐಟಿಐ ಮತ್ತಿತರ ವೃತ್ತಿಪರ ಕೋರ್ಸ್‌ಗಳನ್ನು ಮುಗಿಸಿದ 94 ಯುವಕರಿಗೆ ಉದ್ಯೋಗ ನೀಡುವಲ್ಲಿ ಕೌಶಲ್ಯಾಭಿವೃದ್ಧಿ ನಿಗಮ ಯಶಸ್ವಿಯಾಗಿದೆ.

ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ರಾದ ಡಾ.ಶರಣಪ್ರಕಾಶ ಪಾಟೀಲ್ ಅವರು ತೆಗೆದುಕೊಂಡ ದಿಟ್ಟನಿರ್ಧಾರದಿಂದಾಗಿ ಉದ್ಯೋಗವಿಲ್ಲದೆ ಕೆಲಸ ಅರಸುತ್ತಿದ್ದ ಯುವಕರು ಇದೀಗ ವಿದೇಶದಲ್ಲಿ ಕೈತುಂಬ ಸಂಬಳ ಪಡೆಯುತ್ತಿದ್ದು, ತಮ್ಮ ಭವಿಷ್ಯ ರೂಪಿಸಿಕೊಂಡಿದ್ದಾರೆ.

ಯುವಕರ ಕೌಶಲಾರ್ಹತೆಗೆ ತಕ್ಕಂತೆ ಉದ್ಯೋಗಗಳನ್ನು ನೀಡಲಾಗುತ್ತಿದೆ. ಅವರಿಗೆ ಇಲ್ಲಿಯೇ ತರಬೇತಿ, ವೀಸಾ ವ್ಯವಸ್ಥೆ, ಗೃಹ ಇಲಾಖೆಯಲ್ಲಿ ದಾಖಲಾತಿಗಳ ಪ್ರಮಾಣಪತ್ರ ಪರಿಶೀಲನೆ ಮಾತ್ರವಲ್ಲದೆ ಹೊರರಾಷ್ಟ್ರಗಳಿಗೆ ತೆರಳುವವರಿಗೆ ಊಟ, ವಸತಿ ವ್ಯವಸ್ಥೆ, ಸಂಬಂಧಪಟ್ಟವರ ಭೇಟಿಗೆ ಬೇಕಾದ ಇನ್ನಿತರ ಸೌಲಭ್ಯಗಳನ್ನು ಸಹ ಇಲಾಖೆಯ ಅಧಿಕಾರಿಗಳೇ ನಿಗಾವಹಿಸುತ್ತಾರೆ.

ಐಟಿಬಿಟಿ, ವಿಜ್ಞಾನ, ಕೈಗಾರಿಕೆ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕ ಇತರೆ ರಾಜ್ಯಗಳಿಗೆ ಹೋಲಿಸಿದರೆ ಸಾಕಷ್ಟು ಮುಂಚೂಣಿಯಲ್ಲಿದೆ. ಇದನ್ನು ಮನಗಂಡ ಸ್ಲೊವಾಕಿಯಾ ರಾಷ್ಟ್ರವು ಎರಡೂವರೆ ಸಾವಿರ ಅಸೆಂಬ್ಲಿ ಲೈನ್ ಆಪರೇಟರ್‌ಗಳನ್ನು ನೇಮಕಮಾಡಿಕೊಳ್ಳಲು ಮುಂದೆ ಬಂದಿತ್ತು. ತಕ್ಷಣವೇ ಕಾರ್ಯ ಪ್ರವೃತ್ತರಾ ಡಾ.ಶರಣಪ್ರಕಾಶ ಪಾಟೀಲ ಅವರು ತಮ್ಮ ಅಧಿಕಾರಿಗಳ ತಂಡ ಸಿದ್ಧವಿರಿಸಿ ವಿದೇಶಾಂಗ ವ್ಯವಹಾರಗಳ ಇಲಾಖೆ ಜೊತೆ ಒಡಂಬಡಿಕೆ ಮಾಡಿಕೊಂಡರು.

ಸ್ಲೊವಾಕಿಯಾ ರಾಷ್ಟ್ರವು 2500 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಇಲಾಖೆ ಯಿಂದ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಲಾಯಿತು. ಇದರ ಮೊದಲ ಭಾಗವಾಗಿ 94 ಅಭ್ಯರ್ಥಿಗಳಿಗೆ 54 ಮಂದಿ ಐಟಿಐ, 31 ಮಂದಿ ಡಿಪ್ಲೊಮೊ ತರಬೇತಿ ಪಡೆದವರನ್ನು ಆ ದೇಶಕ್ಕೆ ಬೀಳ್ಕೊಡಲಾಗಿದೆ.

ಉಚಿತ ತರಬೇತಿ

ಆಯ್ಕೆಯಾದ ಅಭ್ಯರ್ಥಿಗಳಿಗೆ ಬಿಡದಿ ಸಮೀಪ ಇರುವ ಟೊಯೋಟಾ ಕೀರ್ಲೋಸ್ಕರ್‌ನಲ್ಲಿ ತರಬೇತಿ ನೀಡಲಾಯಿತು. ಈ ಮೊದಲು ಇಲ್ಲಿ ತರಬೇತಿ ಪಡೆಯಲು 35,000 ರೂ. ಖರ್ಚು- ವೆಚ್ಚವಾಗುತ್ತಿತ್ತು. ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳೇ ಇಲ್ಲಿ ತರಬೇತಿ ಪಡೆಯುತ್ತಾರೆ ಎಂಬುದನ್ನು ಮನಗಂಡ ಸಚಿವ ಪಾಟೀಲರು, ಯಾವುದೇ ಒಬ್ಬ ಅಭ್ಯರ್ಥಿಯು ಒಂದೇ ಒಂದು ಪೈಸೆ ಕಟ್ಟುವುದು ಬೇಡ. ಎಲ್ಲ ಹಣವನ್ನು ಇಲಾಖೆಯಿಂದಲೇ ಭರಿಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿಮಾನವೀಯತೆ ಮೆರೆದರು.

86 ಸಾವಿರ ರೂ. ವೇತನ

ತರಬೇತಿ ಪಡೆದ ನಂತರ ಸ್ಲೊವಾಕಿಯಾದಲ್ಲಿ ಇವರಿಗೆ ತಿಂಗಳಿಗೆ 970 ಯೂರೋ (86 ಸಾವಿರ ರೂ.) ವೇತನ ನೀಡಲಾಗುತ್ತಿದೆ. ಜೂನ್ 5ರಂದು ಮೊದಲ ತಂಡ ಹಾಗೂ ಜೂ.20ರಂದು 2ನೇ ತಂಡವನ್ನು ಬೀಳ್ಕೊಡಲಾಗಿದೆ. ಜೂ.24 ಮತ್ತು ಜು.1 ರಂದು ಉಳಿದ ತಂಡಗಳು ಸ್ಲೋವಾಕಿಯಾಕ್ಕೆ ತೆರಳಲಿದೆ ಎಂದು ಸಚಿವ ಶರಣ ಪ್ರಕಾಶ ಪಾಟೀಲ ತಿಳಿಸಿದ್ದಾರೆ.

ಕೆಎಸ್‌ಡಿಸಿ ಇದೀಗ 37 ಚಾಲಕರನ್ನು ಹಂಗೇರಿಗೆ ದೇಶಕ್ಕೆ ಕಳುಹಿಸಿಕೊಟ್ಟಿದೆ. ಅಲ್ಲದೆ ಮಾರಿಷಸ್‌ಗೆ ವೆಲ್ಡರ್‌ಗಳು, ಬಾಯ್ಲರ್ ತಯಾರಕರು ಮತ್ತು ಇತರ ಬ್ಲೂ ಕಾಲರ್ ಕೆಲಸಗಳಿಗಾಗಿ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

ಹಲವು ದೇಶಗಳಿಂದ ದಾದಿಯರಿಗೆ ಬೇಡಿಕೆ

ಆಸ್ಟ್ರೇಲಿಯಾ, ಜಪಾನ್, ಫಿನ್‌ಲ್ಯಾಂಡ್, ಜರ್ಮನಿ, ನಾರ್ವೆ ದೇಶಗಳ ದಾದಿಯರ ಬೇಡಿಕೆಯನ್ನು ಪೂರೈಸಲು ಮುಂದಾಗಿದೆ. ಅಲ್ಲದೆ ಸ್ಲೊವಾಕಿಯಾ ಕೂಡ ಹೆಚ್ಚುವರಿಯಾಗಿ

ದೊಡ್ಡ ಸಂಖ್ಯೆಯ ಆಪರೇಟರ್‌ಗಳನ್ನು ಕೇಳಿಕೊಂಡಿದೆ. ಜತೆಗೆ ಗಲ್ಫ ಮತ್ತು ಯುರೋಪ್ ರಾಷ್ಟ್ರಗಳಿಂದಲೂ ಬೇಡಿಕೆಗಳು ಬಂದಿದ್ದು, ಇದನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತಿದ್ದೇವೆ ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಂ.ಕನಗವಲ್ಲಿ ಹೇಳಿದ್ದಾರೆ.

ಉದ್ಯೋಗಾಕಾಂಕ್ಷಿಗಳಿಗೆ ಇಂಗ್ಲಿಷ್ ತರಬೇತಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಭಾಷೆ ಅಗತ್ಯ ಇರುವುದನ್ನು ಮನಗಂಡಿರುವ ಕೌಶಲ್ಯಾಭಿವೃದ್ಧಿ ನಿಗಮ ಆಯ್ಕೆಯಾಗುವ ಉದ್ಯೋಗಾಕಾಂಕ್ಷಿಗಳಿಗೆ ಉಚಿತವಾಗಿ ಇಂಗ್ಲಿಷ್ ಭಾಷೆ ತರಬೇತಿ ನೀಡಲು ಮುಂದಾಗಿದೆ. ಇದಕ್ಕಾಗಿಯೇ ಇಂಗ್ಲಿಷ್ ಭಾಷೆಯಲ್ಲಿ ಪರಿಣಿತಿ ಹೊಂದಿರುವವರನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net