

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯುು) ವಿದ್ಯಾರ್ಥಿಗಳ ಮೇಲೆ ಕಳೆದ ಭಾನುವಾರ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷಿ ದೊರೆತಿದ್ದು, ಸದ್ಯದಲ್ಲೇ ಆರೋಪಿಗಳನ್ನು ಪತ್ತೆ ಮಾಡಲಾಗುವುದು ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ.
ಹಿಂಸಾಚಾರ ನಡೆಸಿದ ಕೆಲವರ ಗುರುತು ಪತ್ತೆ ಹಚ್ಚಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ ಇತರರನ್ನೂ ಪತ್ತೆ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮುಸುಕುಧಾರಿಗಳು ನಡೆಸಿದ ಹಲ್ಲೆಯಿಂದಾಗಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಸಹಿತ 36 ಜನರು ಗಾಯಗೊಂಡಿದ್ದರು.
ಜೆಎನ್ಯುು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಟ್ಟು 11 ದೂರುಗಳು ದಾಖಲಾಗಿವೆ. ವಿದ್ಯಾರ್ಥಿ ನಾಯಕಿ ಐಷೆ ಘೋಷ್, ಅಲ್ಲಿನ ಪ್ರಾಧ್ಯಾಪಕರು ಘಟನೆ ಸಂಬಂಧ ದೂರುಗಳನ್ನು ನೀಡಿದ್ದಾರೆ. ಇದನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರ ಮಾಡಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ‘ವಿವಿ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಪರಿಸ್ಥಿತಿ ಈಗ ಸಂಪೂರ್ಣ ನಿಯಂತ್ರಣದಲ್ಲಿದೆ. ವಿವಿಯ ಒಳಗಡೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ವಿವಿ ಹೊರಗಡೆಯೂ ಬಿಗಿ ಕಾವಲು ಹಾಕಲಾಗಿದೆ. ಅಪರಾಧ ವಿಭಾಗದ ತಜ್ಞರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷಗಳನ್ನು ಸಂಗ್ರಹಿಸಿದ್ದಾರೆ. ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನೂ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಾಯವಾಗಿದ್ದು ನಾಟಕ ಎಂದ ಬಿಜೆಪಿ ನಾಯಕ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ (ಜೆಎನ್ಯುುಎಸ್ಯುು) ಅಧ್ಯಕ್ಷೆ ಐಷೆ ಘೋಷ್ ಅವರಿಗೆ ಹಲ್ಲೆಯಿಂದ ಗಾಯವಾಗಿದ್ದು ನಿಜವೇ ಅಥವಾ ಹಾಗೆ ತೋರಿಸಿಕೊಳ್ಳಲು ಮುಖಕ್ಕೆ ಪೇಂಟ್ ಬಳಿದುಕೊಂಡು ನಾಟಕವಾಡಿದ್ದರೇ ಎನ್ನುವುದನ್ನು ತಿಳಿಯಲು ತನಿಖೆ ನಡೆಸಬೇಕೆಂದು ಬಿಜೆಪಿ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ. ಜೆಎನ್ಯುು ಕ್ಯಾಂಪಸ್ಗೆ ಭಾನುವಾರ ರಾತ್ರಿ ನುಗ್ಗಿದ್ದ ಕೆಲವು ಮುಸುಕುಧಾರಿ ದುಷ್ಕರ್ವಿುಗಳು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಮೇಲೆ ಹಲ್ಲೆ ಮಾಡಿದ್ದರು. ಐಷೆಗೆ ತೀವ್ರ ಗಾಯವಾಗಿ ರಕ್ತಸ್ರಾವ ಆಗಿತ್ತು. ಅವರು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗಿ ಮರುದಿನ ಬಿಡುಗಡೆ ಗೊಂಡಿದ್ದರು.
ಕೊಲೆಯೇ ನಡೆಯುತ್ತಿತ್ತು!: ಹಿಂಸಾಚಾರದ ವೇಳೆ ತಮ್ಮನ್ನು ಕೊಲೆ ಮಾಡಲು ಯತ್ನಿಸಲಾಗಿತ್ತು ಎಂದು ಐಷೆ ಘೋಷ್ ಬುಧವಾರ ಸಲ್ಲಿಸಿರುವ ದೂರಿನಲ್ಲಿ ಹೇಳಿದ್ದಾರೆ. ಈಗಾಗಲೇ ಸಲ್ಲಿಸಿರುವ ದೂರಿನ ಸಂಬಂಧ ಪೊಲೀಸರು ತಮ್ಮಿಂದ ಯಾವುದೇ ಹೇಳಿಕೆ ದಾಖಲಿಸಿಕೊಂಡಿಲ್ಲ. ಹೀಗಾಗಿ ಹೊಸ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಒಂದು ಕಾರಿನ ಹಿಂದೆ ಎಳೆದುಕೊಂಡು ಹೋಗಿ ಥಳಿಸಲಾಯಿತು. 20ರಿಂದ 30 ಜನರು ಸುತ್ತುವರಿದು ಕಬ್ಬಿಣದ ಸರಳುಗಳಿಂದ ಹಲವು ಬಾರಿ ಹಲ್ಲೆ ಮಾಡಿದರು. ‘ನನ್ನನ್ನು ಕೊಲ್ಲುವುದಾಗಿ ಅವರು ಬೆದರಿಕೆ ಹಾಕಿದರು’ ಎಂದಿದ್ದಾರೆ. ಲೈಂಗಿಕ ಕಿರುಕುಳ ನೀಡಿ, ನಿಂದಿಸಿದರು ಎಂದೂ ಆಪಾದಿಸಿದ್ದಾರೆ.
ಮುಚ್ಚಲು ಶಿಫಾರಸಿಲ್ಲ: ವಿವಿಯನ್ನು ತಾತ್ಕಾಲಿಕವಾಗಿ ಮುಚ್ಚಲು ಶಿಫಾರಸು ಮಾಡಿಲ್ಲ ಎಂದು ಜೆಎನ್ಯುು ಕುಲಪತಿ ಎಂ. ಜಗದೀಶ್ ಕುಮಾರ್ ಹೇಳಿದ್ದಾರೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿ ಗಳನ್ನು ಬುಧವಾರ ಭೇಟಿ ಮಾಡಿದ್ದ ಕುಮಾರ್ ಇದನ್ನು ಸ್ಪಷ್ಟಪಡಿಸಿದರು.