ಜ್ಞಾನವಾಪಿಯಲ್ಲಿ ದೇಗುಲ: ಹಿಂದುಗಳ ವಾದಕ್ಕೆ ಪುಷ್ಟಿ ನೀಡುವ ಮತ್ತಷ್ಟು ಅಂಶಗಳು ಬಹಿರಂಗ

gnanavapi
Published on

ನವದೆಹಲಿ: ವಾರಾಣಸಿಯ ಜ್ಞಾನವಾಪಿ ಮಸೀದಿ ವಿಡಿಯೋಗ್ರಫಿ ವರದಿಯನ್ನು ಗುರುವಾರದಂದು ವಾರಾಣಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ವಿಡಿಯೋಗ್ರಫಿಯಲ್ಲಿ ಕಂಡುಕೊಂಡ ಕೆಲ ಅಂಶಗಳು ಬಹಿರಂಗಗೊಂಡಿವೆ. ಹಿಂದು ಶ್ರದ್ಧಾಳುಗಳ ಪ್ರತಿಪಾದನೆಗೆ ಪುಷ್ಟಿ ನೀಡುವ ಅಂಶಗಳು ಬೆಳಕಿಗೆ ಬಂದಿರುವುದು ಮಹತ್ವ ಪಡೆದುಕೊಂಡಿದೆ.

ವೀಡಿಯೊ ಸಮೀೆಯಲ್ಲಿ ತ್ರಿಶೂಲ, ಕಮಲದ ಕೆತ್ತನೆಗಳು ಮತ್ತು ಪ್ರಾಚಿನ ಹಿಂದು ಕೆತ್ತನೆಗಳ ಚಿಹ್ನೆಗಳು ಕಂಡುಬಂದಿವೆ ಎಂದು ಗೊತ್ತಾಗಿದೆ. ವರದಿಯಲ್ಲಿನ ಅಂಶಗಳನ್ನು ಬಹಿರಂಗಪಡಿಸಬೇಡಿ ಎಂದು ಕೋರ್ಟ್​ ಸೂಚನೆಯಿದ್ದರೂ, ಈ ಮಹತ್ವದ ಅಂಶಗಳು ಸೋರಿಕೆಯಾಗಿರುವುದರಿಂದ ಇದು ಸಾಕಷ್ಟು ವಿವಾದ ಮಾತ್ರವಲ್ಲ ಕೋರ್ಟ್​ ಆಕ್ರೋಶಕ್ಕೂ ಗುರಿಯಾಗುವ ಸಾಧ್ಯತೆಯಿದೆ. ಮಸೀದಿ ಸಂಕೀರ್ಣವನ್ನು ಚಿತ್ರೀಕರಿಸಿದ ತಂಡವು ಮೂರು ಫೋಲ್ಡರ್​ಗಳಲ್ಲಿರುವ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿತ್ತು. ಚಿತ್ರೀಕರಣದ ವೀಡಿಯೊಗಳು ಮತ್ತು ಛಾಯಾಚಿತ್ರಗಳೊಂದಿಗೆ ವರದಿಯನ್ನು ಹಸ್ತಾಂತರಿಸಲಾಗಿದೆ ಎಂದು ನ್ಯಾಯಾಲಯದಿಂದ ನೇಮಕಗೊಂಡ ಕೋರ್ಟ್​ ಕಮಿಷನರ್​ ವಿಶಾಲ್​ ಸಿಂಗ್​ ಹೇಳಿದ್ದಾರೆ.

ಜ್ಞಾನವಾಪಿ ಸಂಕೀರ್ಣದ ಚಿತ್ರೀಕರಣವನ್ನು ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿರುವ ಅಜಿರ್ಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್​, ಪ್ರಕರಣದ ಕುರಿತು ಸದ್ಯಕ್ಕೆ ಯಾವುದೇ ಆದೇಶಗಳನ್ನು ನೀಡಬೇಡಿ ಎಂದು ವಾರಾಣಸಿ ನ್ಯಾಯಾಲಯಕ್ಕೆ ಸೂಚಿಸಿದೆ. ಹಿಂದೂ ಅಜಿರ್ದಾರರ ಪರ ವಕೀಲರು ವಿಚಾರಣೆ ಮುಂದೂಡುವಂತೆ ಕೋರಿದ ಹಿನ್ನೆಲೆಯಲ್ಲಿ ಶುಕ್ರವಾರದಂದು ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್​ ಹೇಳಿದೆ. ಚಿತ್ರೀಕರಣದ ನೇತೃತ್ವ ವಹಿಸಿದ್ದ ಉನ್ನತಾಧಿಕಾರಿ, ಅಡ್ವೊಕೇಟ್​ ಕಮಿಷನರ್​ ಅಜಯ್​ ಪ್ರತಾಪ್​ ಸಿಂಗ್​ ಮಾತನಾಡಿ, ಮಸೀದಿಯ ಒಳಗಿನ ವೀಡಿಯೊಗಳು ಮತ್ತು ಚಿತ್ರಗಳನ್ನು ಒಳಗೊಂಡಂತೆ ವರದಿಯನ್ನು ತಯಾರಿಸಲು ರಾತ್ರಿಯಿಡೀ ಕೆಲಸ ಮಾಡಿದ್ದೇವೆ. ನ್ಯಾಯಾಲಯವು ನಮಗೆ ದೊಡ್ಡ ಜವಾಬ್ದಾರಿಯನ್ನು ನೀಡಿದೆ. ನಾವು ನೆಲಮಾಳಿಗೆಯಲ್ಲಿ ಸಾಕಷ್ಟು ಕೊಳಕು ಇತ್ತಾದರೂ, ಸಮೀೆಯನ್ನು ಪ್ರಾಮಾಣಿಕವಾಗಿ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಕಾಶಿ ವಿಶ್ವನಾಥ ದೇಗುಲದ ನಂದಿ ವಿಗ್ರಹಕ್ಕೆ ಎದುರಾಗಿರುವ ಮಸೀದಿ ಗೋಡೆಗೆ ಎದುರಿಗಿರುವ ಅವಶೇಷಗಳನ್ನು ತೆಗೆದು, ದೇವಾಲಯದ ಭಾಗಗಳೆಂದು ತಾವು ನಂಬಿರುವ ಪ್ರದೇಶಗಳನ್ನು ಪ್ರವೇಶಿಸಲು ಕೋರಿರುವ ಅರ್ಜಿ ವಿಚಾರಣೆಯನ್ನು ಕೋರ್ಟ್​ ನಡೆಸಲಿದೆ.

ವರದಿಯಲ್ಲಿ ಬೆಳಕಿಗೆ ಬಂದ ಅಂಶಗಳು

- ಮಸೀದಿಯ ನೆಲಮಾಳಿಗೆಯಲ್ಲಿರುವ ಕಂಬಗಳಲ್ಲಿ ಹೂವುಗಳ ಕೆತ್ತನೆಗಳು ಮತ್ತು ಕಲಶ(ಹೂಜಿ)ವಿದೆ.

- ನೆಲಮಾಳಿಗೆಯ ಒಂದು ಕಂಬದ ಮೇಲೆ ಪ್ರಾಚಿನ ಹಿಂದಿ ಭಾಷೆಯ ಕೆತ್ತನೆಗಳು ಕಂಡುಬಂದಿವೆ.

- ನೆಲಮಾಳಿಗೆಯ ಗೋಡೆಯ ಮೇಲೆ ತ್ರಿಶೂಲದ ಚಿಹ್ನೆಯಿದೆ

- ಎರಡು ದೊಡ್ಡ ಕಂಬಗಳು ಮತ್ತು ಮಸೀದಿಯ ಪಶ್ಚಿಮ ದಿಕ್ಕಿನ ಗೋಡೆಯಲ್ಲಿ ಚಾಚಿಕೊಂಡಿರುವ ಕಮಾನುಗಳು ಕಂಡುಬಂದಿವೆ. ಅಜಿರ್ದಾರರ ಪ್ರಕಾರ ಅವುಗಳು ದೇವಾಲಯಗಳ ಅವಶೇಷಗಳು. ಆದರೆ
ಮಸೀದಿ ಸಮಿತಿ ಅದನ್ನು ವಿರೋಧಿಸಿದೆ.

- ಮಸೀದಿಯ ಕೇಂದ್ರ ಗುಮ್ಮಟದ ಕೆಳಗೆ ಶಂಕುವಿನಾಕಾರದ ರಚನೆ ಕಂಡುಬಂದಿದೆ

- ಮಸೀದಿಯ 3ನೇ ಗುಮ್ಮಟದ ಕೆಳಗಿನ ಒಂದು ಕಲ್ಲಿನಲ್ಲಿ ಕಮಲದ ಕೆತ್ತನೆಗಳಿವೆ

- ವಜೂ (ನಮಾಜ್​ನ ಮೊದಲು ಶುದ್ಧೀಕರಣ ಆಚರಣೆ) ಗಾಗಿ ಬಳಸಲಾಗುವ ಮಸೀದಿ ಸಂಕೀರ್ಣದಲ್ಲಿರುವ ಕೊಳದಲ್ಲಿ 2.5 ಅಡಿ ಎತ್ತರದ ಸುತ್ತಿನ ರಚನೆಯನ್ನು ಗಮನಿಸಲಾಗಿದೆ. ಅರ್ಜಿದಾರರು ಇದನ್ನು ಶಿವಲಿಂಗ ಎಂದು ಕರೆದರೆ, ಮಸೀದಿ ಸಮಿತಿಯು ಇದನ್ನು ಕಾರಂಜಿ ಎಂದು ವಾದಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net