ಮಸ್ಕ್ ಜತೆ ಜಿಯೋ ಇಂಟರ್ನೆಟ್ ಡೀಲ್

5-67d1c9486af51
Published on

ನವದೆಹಲಿ: ಸ್ಟಾರ್​ಲಿಂಕ್​ನ ಬ್ರಾಡ್​ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ಭಾರತಕ್ಕೆ ತರುವ ಉದ್ದೇಶದಿಂದ ಎಲಾನ್ ಮಸ್ಕ್ ಒಡೆತನದ ಸ್ಪೇಸ್​ಎಕ್ಸ್ ಜತೆ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಒಪ್ಪಂದ ಮಾಡಿಕೊಂಡಿದೆ. ಮಸ್ಕ್ ಕಂಪನಿಗೆ ಸ್ಪೆಕ್ಟ್ರಂ ಹಕ್ಕುಗಳನ್ನು ನೀಡುವುದು ಹೇಗೆ ಎಂಬ ಬಗ್ಗೆ ತಿಂಗಳುಗಳಿಂದ ನಡೆಯುತ್ತಿದ್ದ ಕಲಹದ ಬೆನ್ನಲ್ಲೇ ಈ ಅಚ್ಚರಿಯ ಒಪ್ಪಂದ ಏರ್ಪಟ್ಟಿದೆ.

ಸ್ಪೇಸ್​ಎಕ್ಸ್ ಜತೆ ಸುನಿಲ್ ಭಾರತಿ ಮಿತ್ತಲ್ ಒಡೆತನದ ಭಾರ್ತಿ ಏರ್​ಟೆಲ್ ಇಂಥ ಒಪ್ಪಂದ ಮಾಡಿಕೊಂಡ ಮರುದಿನವೇ ಜಿಯೋ ಕೂಡ ಸ್ಪೇಸ್​ಎಕ್ಸ್ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತದಲ್ಲಿ ಸ್ಟಾರ್​ಲಿಂಕ್ ಸಂಪರ್ಕಗಳನ್ನು ನೀಡಲು ಕೇಂದ್ರ ಸರ್ಕಾರ ಸ್ಪೇಸ್​ಎಕ್ಸ್​ಗೆ ಒಪ್ಪಿಗೆ ನೀಡಿದರೆ ಮಾತ್ರ ಈ ಒಪ್ಪಂದಗಳು ಜಾರಿಗೆ ಬರಲಿವೆ ಎಂದು ಜಿಯೋ ಮತ್ತು ಏರ್​ಟೆಲ್ ಸ್ಪಷ್ಟಪಡಿಸಿವೆ. ಮಸ್ಕ್ ಕಂಪನಿಗೆ ಕೇಂದ್ರ ಸರ್ಕಾರ ಕಡಿಮೆ ಬೆಲೆಯಲ್ಲಿ ಸ್ಪೆಕ್ಟ್ರಂ ನೀಡಿಬಿಡಬಹುದು ಎಂಬ ಭೀತಿ ಹಿನ್ನೆಲೆಯಲ್ಲಿ, ಪ್ರತಿಸ್ಪರ್ಧಿಗಳಾದ ಜಿಯೋ ಮತ್ತು ಏರ್​ಟೆಲ್ ಒಗ್ಗೂಡಿ ಸ್ಪೆಕ್ಟ್ರಂ ಹಂಚಿಕೆಗೆ ಮುಕ್ತ ಹರಾಜು ಏರ್ಪಡಿಸಬೇಕೆಂದು ಕೆಲವು ತಿಂಗಳುಗಳಿಂದ ಒತ್ತಾಯಿಸುತ್ತಿವೆ.

ಒಪ್ಪಂದದನ್ವಯ, ಸ್ಟಾರ್​ಲಿಂಕ್ ಉಪಕರಣಗಳನ್ನು ಜಿಯೋ ತನ್ನ ರಿಟೇಲ್ ಮಳಿಗೆಗಳಲ್ಲಿ ಇಟ್ಟು ಮಾರಾಟ ಮಾಡಲಿದೆ. ಗ್ರಾಹಕರ ಮನೆ, ಕಚೇರಿಗಳಲ್ಲಿ ಇನ್​ಸ್ಟಾಲೇಷನ್ ಮತ್ತು ಆಕ್ಟಿವೇಷನ್​ಗೂ ಸಹಾಯ ಮಾಡಲಿದೆ. ಪರಸ್ಪರರ ಉತ್ಪನ್ನಗಳ ಪ್ರಚಾರಕ್ಕೂ ಇದರಲ್ಲಿ ಅವಕಾಶವಿದೆ. ಕವರೇಜ್ ಇಲ್ಲದ ಪ್ರದೇಶಗಳಿಗೆ ತಲುಪಲು ಜಿಯೋ ಮತ್ತು ಏರ್​ಟೆಲ್​ಗೆ ಸ್ಟಾರ್​ಲಿಂಕ್ ಸಹಾಯ ಮಾಡಲಿದೆ.

ಪ್ರಧಾನಿ ಭೇಟಿ ಫಲಶ್ರುತಿ?

ಇತ್ತೀಚೆಗೆ ವಾಷಿಂಗ್ಟನ್​ನಲ್ಲಿ ಪ್ರಧಾನಿ ಮೋದಿ ಅವರನ್ನು ಮಸ್ಕ್ ಭೇಟಿ ಮಾಡಿ ರ್ಚಚಿಸಿದ ಬೆನ್ನಲ್ಲೇ ಏರ್​ಟೆಲ್ ಮತ್ತು ಜಿಯೋ ಜತೆಗಿನ ಈ ಒಪ್ಪಂದಗಳು ಏರ್ಪಟ್ಟಿರುವುದು ಗಮನಾರ್ಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net