ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೆನ್‌ ಬಿಜೆಪಿ ಸೇರ್ಪಡೆ ಸಾಧ್ಯತೆ!

soren
Published on

ರಾಂಚಿ:  ಜಾರ್ಖಂಡ್ ಮಾಜಿ ಮುಖ್ಯಮಂತ್ರಿ, ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಚಂಪೈ ಸೊರೆನ್‌ ಅವರು ಶೀಘ್ರವೇ ಬಿಜೆಪಿ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ.

ಇನ್ನೆರಡು ದಿನದಲ್ಲಿ ದೆಹಲಿಯಲ್ಲಿ ಬಿಜೆಪಿಯ ಗಿರಿಯ ನಾಯಕರನ್ನು ಭೇಟಿ ಮಾಡಿದ ನಂತರವೇ ಚಂಪೈ ಸೊರೆನ್ ಭಾರತೀಯ ಜನತಾ ಪಕ್ಷವನ್ನು ಸೇರುವ ಸಾಧ್ಯತೆಯಿದೆ ಮೂಲಗಳು ತಿಳಿಸಿವೆ.

ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೂರೇನ್ ಭೂ ಹಗರಣದಲ್ಲಿ ಜೈಲಿಗೆ ಹೋದಾಗ ಚಂಪೈ ಸೋರೆನ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಸುಮಾರು 5 ತಿಂಗಳ ಕಾಲ ಜೈಲಿನಲ್ಲಿದ್ದ ಸಿಎಂ ಹೇಮಂತ್ ಸೊರೇನ್ ಜೂನ್ 28ರಂದು ಬಿಡುಗಡೆಯಾಗಿದ್ದರು. ಇದಾದ ನಂತರ ಚಂಪೈ ಸೊರೆನ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ರಾಜ್ಯದ ಅಧಿಕಾರವನ್ನು ಮರಳಿ ವಹಿಸಿಕೊಂಡರು. ಅಧಿಕಾರದಿಂದ ಕೆಳಗಡೆ ಇಳಿಸಿದ ಬಳಿಕ ಚಂಪೈ ಸೊರೆನ್‌ ಅವರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ಹೇಮಂತ್ ಸೋರೆನ್ ನೇತೃತ್ವದ ಜಾರ್ಖಂಡ್ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಚಂಪೈ ಸೋರೆನ್ ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮಾಜಿ ಶಾಸಕ ಲೋಬಿನ್ ಹೆಂಬ್ರೋಮ್ ಕೂಡ ಸೋರೆನ್ ಅವರೊಂದಿಗೆ ಬಿಜೆಪಿ ಸೇರಬಹುದು ಎಂಬ ಊಹಾಪೋಹಗಳು ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿವೆ.

ಚಂಪೈ ಸೊರೆನ್ ಅವರು ಫೆಬ್ರವರಿ 2 ರಿಂದ ಜುಲೈ 3 ರವರೆಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದರು. ಜೆಎಂಎಂನ ಹಿರಿಯ ನಾಯಕರಾಗಿರುವ ಚಂಪೈ ಸೊರೆನ್ ಏಳು ಬಾರಿ ಶಾಸಕರಾಗಿದ್ದಾರೆ.

ಈ ವರ್ಷದ ಕೊನೆಯಲ್ಲಿ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆ ಘೋಷಣೆಗೂ ಮುನ್ನವೇ ರಾಜಕೀಯ ಪಕ್ಷಗಳು ರಾಜಕೀಯ ಜೋರಾಗಿದೆ. ರಾಜ್ಯದಲ್ಲಿ ಒಟ್ಟು 82 ವಿಧಾನಸಭಾ ಸ್ಥಾನಗಳಿದ್ದು, ಈ ಪೈಕಿ ಒಂದು ನಾಮನಿರ್ದೇಶನ ಸ್ಥಾನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net