ಅಮೆರಿಕದಲ್ಲೂ ಪ್ರತಿಮೆಗಳ ತಲೆ ಉರುಳಿಸುವ ಕೆಲಸ ಮಾಡ್ತಾರೆ!

Jesus statue beheaded at Catholic church in South Florida
Published on

ಮಿಯಾಮಿ: ಅಮೆರಿಕದಲ್ಲೂ ಪ್ರತಿಮೆಗಳ ತಲೆ ಉರುಳಿಸುವ ಕೆಲಸ ಮಾಡ್ತಾರೆ. ಸೌತ್ ಫ್ಲೋರಿಡಾದಲ್ಲಿ ಜೀಸ್​ಸ್ ಕ್ರಿಸ್ಟ್​ನ ತಲೆಯನ್ನು ಉರುಳಿಸಿದ ಘಟನೆ ಇತ್ತೀಚೆಗೆ ನಡೆದಿದ್ದು, ಅದರ ತನಿಖೆ ನಡೆಸುತ್ತಿರುವುದಾಗಿ ಮಿಯಾಮಿ-ಡೇಡ್ ಪೊಲೀಸ್ ಮತ್ತು ಡಿಪಾರ್ಟ್​ಮೆಂಟ್​ ಆಫ್​ ಹೋಮ್​ಲ್ಯಾಂಡ್ ಸೆಕ್ಯುರಿಟಿ ಹೇಳಿದೆ.

ವೆಸ್ಟ್​ ಕೆಂಡಾಲ್​ನ ಗುಡ್​ ಶೆಫರ್ಡ್​ ಕ್ಯಾಥೋಲಿಕ್ ಚರ್ಚ್​ನ ಆವರಣದಲ್ಲಿದ್ದ ಜೀಸಸ್​ ಪ್ರತಿಮೆಗೆ ಹಾನಿ ಎಸಗಿರುವ ಕೃತ್ಯ ಮಂಗಳವಾರ ರಾತ್ರಿ ಅಥವಾ ಬುಧವಾರ ನಸುಕಿನ ವೇಳೆ ನಡೆದಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಮಿಯಾಮಿಯ ಆರ್ಚಿಡಿಯೋಸಿಸ್​ನ ವಕ್ತಾರ ಮೆರಿ ರೋಸ್ ಅಗಸ್ಟಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇದು ಚರ್ಚ್ ಮೇಲೆ ನಡೆದ ದಾಳಿಯಾಗಿದೆ. ಇದು ಖಾಸಗಿ ಆಸ್ತಿಯಷ್ಟೇ ಅಲ್ಲ, ಶ್ರದ್ಧಾ ಕೇಂದ್ರದ ಆಸ್ತಿ. ಬುಧವಾರ ಬೆಳಗ್ಗೆ 8 ಗಂಟೆಗೆ ಜೀಸಸ್​ ಪ್ರತಿಮೆಯ ತಲೆ ನೆಲದ ಮೇಲೆ ಉರುಳಿ ಬಿದ್ದುಕೊಂಡಿರುವುದು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

"ಓಹ್ ಸಾರಿ.. ಎಂದು ಹೇಳಿದ ಮಾತ್ರಕ್ಕೆ ಬಿಟ್ಟುಬಿಡಬಹುದಾದ ವಿಚಾರವಲ್ಲ ಇದು. ಯಾರೋ ಇದನ್ನು ಉದ್ದೇಶ ಪೂರ್ವಕವಾಗಿಯೇ ಮಾಡಿದ್ದಾರೆ. ನಾವು ವಿಡಿಯೋ ದೃಶ್ಯಾವಳಿಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದೇವೆ ಎಂದು ಆಕೆ ಹೇಳಿದ್ದಾರೆ.

ಇಂತಹ ಸನ್ನಿವೇಶದಲ್ಲೂ ಜನ ಈ ರೀತಿ ಕೃತ್ಯಗಳಿಗೆ ಸಮಯ ಕಂಡುಕೊಳ್ಳುತ್ತಿರುವುದೇ ಸೋಜಿಗ. ಜನರಿಗೆ ಸುರಕ್ಷಿತ ಭಾವನೆ ಮೂಡಿಸುವ ಪ್ರಯತ್ನದಲ್ಲಿ ನಾವಿದ್ದೇವೆ. ಈ ಕೃತ್ಯವೆಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್ ವಕ್ತಾರ ಅರ್ಜೆಮಿಸ್​ ಕೊಲೊಮ್ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net