ಬೆಂಗಳೂರು: ಮಾಸ್ಕ್ ಧರಿಸದಿರುವುದು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳದಿರುವುದು ಸೇರಿ ಕೋವಿಡ್- 19 ಮಾರ್ಗಸೂಚಿಗಳನ್ನು (ಎಸ್ಒಪಿ) ಉಲ್ಲಂಘಿಸಿದ ಜನಪ್ರತಿನಿಧಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಲೆಟ್ಜ್ ಕಿಟ್ ಫೌಂಡೇಷನ್ ಹಾಗೂ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಅರ್ಜಿಗಳನ್ನು ಶುಕ್ರವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿತು. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಬಳ್ಳಾರಿಯಲ್ಲಿ ನಡೆದ ಶಾಸಕ ಪಿ.ಟಿ. ಪರಮೇಶ್ವರ್ ನಾಯಕ್ ಪುತ್ರನ ಮದುವೆ ಸಮಾರಂಭದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಸೇರಿ ಹಲವರು ಮಾಸ್ಕ್ ಧರಿಸಿರಲಿಲ್ಲ. ವ್ಯಕ್ತಿಗತ ಅಂತರವನ್ನೂ ಕಾಯ್ದುಕೊಂಡಿರಲಿಲ್ಲ. ಇದಲ್ಲದೆ, ರಾಜಕೀಯ ಪಕ್ಷಗಳ ರ್ಯಾಲಿಯಲ್ಲಿ ಹಾಗೂ ಇತ್ತೀಚೆಗೆ ನಡೆದ ನಾಡಪ್ರಭು ಕೆಂಪೇಗೌಡ ಪುತ್ಥಳಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲೂ ರಾಜಕಾರಣಿಗಳು ಎಸ್ಒಪಿ ಉಲ್ಲಂಘಿಸಿದ್ದಾರೆ. ಆದರೂ ಅವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದನ್ನೂ ಓದಿ: ಮಕ್ಕಳಲ್ಲಿ ನಾಯಕತ್ವ ಲಕ್ಷಣಗಳನ್ನು ಬೆಳೆಸುವ ಬಗೆ
ಆಗ ನ್ಯಾಯಪೀಠ, ಎಸ್ಒಪಿ ಉಲ್ಲಂಘಿಸಿದ ರಾಜಕಾರಣಿಗಳ ವಿರುದಟಛಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಏಕೆ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿತಲ್ಲದೆ, ರಾಜಕಾರಣಿಗಳು ಅಥವಾ ವಿಐಪಿಗಳು ಎಂದ ಮಾತ್ರಕ್ಕೆ ಅವರ ವಿರುದಟಛಿ ಕಠಿಣ ಕಾನೂನು ಕ್ರಮ ಜರುಗಿಸದೆ ಸರ್ಕಾರ ಕೈಕಟ್ಟಿ ಕೂರಬಾರದು.
ಜನಸಾಮಾನ್ಯರು, ಜನಪ್ರತಿನಿಧಿಗಳು ಎಂದು ತಾರತಮ್ಯ ಮಾಡುವುದು ಸರಿಯಲ್ಲ. ಎಷ್ಟೇ ಪ್ರಭಾವಿಯಾದರೂ ಎಸ್ಒಪಿ ಉಲ್ಲಂಘಿಸಿದರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಸೂಚಿಸಿತು.
ಎಸ್ಒಪಿ ಉಲ್ಲಂಘಿಸಿದ ರಾಜಕಾರಣಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಏಕೆ ಕ್ರಮ ಜರುಗಿಸಿಲ್ಲ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ವಿವರಣೆ ನೀಡುವಂತೆ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿತು.
ಸಿಎಂ ಯೋಗಿ ಕಚೇರಿ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆತ್ನಿಸಿದ ಅಮೇಠಿಯ ತಾಯಿ-ಮಗಳು!