ದುಃಖಿಗಳು ಭಾಗ್ಯವಂತರು ಎಂದ ಯೇಸು

3-vij-4a-yesu prathime teravu
Published on

ಯೇಸು ಕ್ರಿಸ್ತನ ಸಕಲ ಬೋಧನೆಗಳಲ್ಲಿ ಆತನ ಪರ್ವತ ಪ್ರಸಂಗವು ಜಗತ್ತಿನ ಅನೇಕ ಅನುಭಾವಿಗಳು, ದಾರ್ಶನಿಕರು ಹಾಗೂ ಮುತ್ಸದ್ದಿಗಳನ್ನು ಪ್ರಭಾವಿಸಿದೆ. ಅನೇಕ ವಿದ್ವಾಂಸರು ಹಾಗೂ ಸಾಹಿತಿಗಳು ತಮ್ಮ ಲೇಖನಗಳಲ್ಲಿ ಅದನ್ನು ಉಲ್ಲೇಖಿಸುತ್ತ ಶ್ಲಾಘಿಸಿದ್ದಾರೆ. ಆ ಶ್ಲಾಘನೆಗಳಲ್ಲಿ ‘ದುಃಖಿಗಳು ಭಾಗ್ಯವಂತರು’ ಎಂಬ ಮಾತೂ ಸೇರಿದೆ. ಸುಖ ಮತ್ತು ದುಖದ ನಡುವೆ ಗಾವುದ ಗಾವುದ ದೂರದ ಅಂತರವೇನೂ ಇಲ್ಲ. ಏಕೆಂದರೆ ಅವೆರಡೂ ಒಂದನ್ನೊಂದು ಕತ್ತಲೆ ಬೆಳಕಿನಂತೆ ಹಿಂಬಾಲಿಸುತ್ತಲೇ ಇರುತ್ತವೆ. ಅದರ ಪ್ರಮಾಣಗಳಲ್ಲಿ ಮಾತ್ರ ಏರಿಳಿತಗಳು ಇರಬಹುದು.

ಜಗತ್ತಿನ ಅನೇಕ ಮಹಾಕಾವ್ಯಗಳು ಹಾಗೂ ಸಾಹಿತ್ಯ ಕೃತಿಗಳು ಸಾವು-ನೋವು, ಸಂಕಟ ಬಿಕ್ಕಟ್ಟುಗಳನ್ನು ಕುರಿತಾಗಿ ಇರುತ್ತವೆಯೇ ಹೊರತು ಸುಖ-ಸಂಪತ್ತುಗಳ ಮೇಲೆ ತೇಲಾಡುವ ಘಟನೆಗಳಿಂದಲ್ಲ. ಇಂತಹ ಸಂದರ್ಭದಲ್ಲಿ ದುಃಖಿಗಳು ಭಾಗ್ಯವಂತರು ಎಂಬ ವಾಕ್ಯ ನೀಡುವ ಹೊಳಹು ಬಹು ಅರ್ಥಪೂರ್ಣವಾಗಿದೆ. ದುಃಖಿತರಿಗೆ ಜಗದ ಜನ ನೀಡುವ ಸಾಂತ್ವನ ತಾತ್ಕಾಲಿಕ. ಆದರೆ, ದೇವರನ್ನು ಕೋರಿದಾಗ ದೊರಕುವುದು ಅಪಾರ ಪ್ರಮಾಣದ ಪರಿಹಾರ.

ಪಾರ್ಶ್ವವಾಯುವಿನಿಂದ ನರಳುವವನಿಗೆ ಯೇಸುಕ್ರಿಸ್ತ ಆರೋಗ್ಯ ಭಾಗ್ಯಕರುಣಿಸಿದಾಗ, ಕುಷ್ಟ ರೋಗಿಯನ್ನು ಗುಣಪಡಿಸಿದಾಗ, ದೃಷ್ಟಿಯನ್ನೇ ಕಳಕೊಂಡಿದ್ದವನಿಗೆ ಕಣ್ಣಿಂದ ನೋಡುವ ಭಾಗ್ಯ ದೊರಕಿಸಿ ದಾಗ, ಸತ್ತು ಹೋಗಿದ್ದ ತನ್ನ ಗೆಳೆಯ ಲಾಜರನನ್ನು ಬದುಕಿಸಿದಾಗಿನ ಘಟನೆಗಳೆಲ್ಲ ದುಃಖವನ್ನು ದೂರ ಮಾಡಿದ ಸಂತೋಷದ ಪ್ರಸಂಗಗಳು. ಅವರೆಲ್ಲ ದೇವಪುತ್ರ ಕ್ರಿಸ್ತನಲ್ಲಿ ಹೊಂದಿದ್ದ ಗಾಢ ವಿಶ್ವಾಸದ ಕಾರಣ ತಾವು ಧನ್ಯರೆಂದು ಗುಣಮುಖರಾದರು. ನಮ್ಮ ಕಾಲದಲ್ಲಿ ಮದರ್ ತೆರೇಸಾ ಅಂತಹವರು ಸಮಾಜದ ಅತಿ ನಿಕೃಷ್ಟರನ್ನು, ಪರಿತ್ಯಕ್ತರನ್ನು ಹಾಗೂ ಅಂಚಿಗೆ ದೂಡಲ್ಪಟ್ಟವರ ಅಪಾರ ದುಖವನ್ನು ನಿವಾರಿಸಿದ್ದು ಅಮೋಘ, ಆದರ್ಶಮಯ. ಆ ಕಾರಣದಿಂದಲೇ ಯೇಸು ಬದುಕಿನ ನಿಜಾರ್ಥವನ್ನು ದುಖದ ಮೂಲಕ ಅರಿಯಬಹುದು ಎಂದು ತನ್ನ ತ್ಯಾಗ ಬಲಿದಾನಗಳಿಂದ ಜಗತ್ತಿಗೆ ತೋರ್ಪಡಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net