ಧನ್ವಂತರಿಯಾಗಿದ್ದ ಯೇಸು ಕ್ರಿಸ್ತ

6-684dbbaf6884c
Published on
ಯೇಸು ಕ್ರಿಸ್ತನ ಕಾಲಘಟ್ಟದಲ್ಲಿ ಕುಷ್ಠರೋಗ ಅತ್ಯಂತ ಭಯಂಕರ ಪಿಡುಗಾಗಿದ್ದು ಅದರಿಂದ ನರಳುವವರನ್ನು ದೇವರ ಶಾಪಕ್ಕೊಳಗಾದ ಬಹಿಷ್ಕೃತರೆಂದು ಪರಿಗಣಿಸಿ ನಾಗರಿಕ ಪ್ರಪಂಚದ ಹೊರಗೆ ದೂಡಿಬಿಡುತ್ತಿದ್ದರು.

ಅಂತಹ ಅದೃಷ್ಟ ಹೀನರ ಆ ಭಯಂಕರ ರೋಗವನ್ನು ಗುಣ ಪಡಿಸುವ ಧನ್ವಂತರಿ ಎನಿಸಿಕೊಂಡ ಕ್ರಿಸ್ತ, ಅವರೆಲ್ಲರ ಆರಾಧ್ಯ ದೈವವಾದ. ಅಲ್ಲದೆ, ಕುರುಡರನ್ನೂ, ಹೆಳವರನ್ನು, ಭಯಂಕರ ರಕ್ತಸ್ರಾವವಾಗುವ ಕುಸುಮ ರೋಗವನ್ನು ಇತ್ಯಾದಿಗಳನ್ನೆಲ್ಲ ತಾರತಮ್ಯ ತೋರದೆ ಗುಣಪಡಿಸುತ್ತಿದ್ದ. ಅಂತಹ ವೇಳೆಯೊಳೆಲ್ಲ ಯೇಸುವಿಗೆ ವಿಶ್ವಾಸವೇ ಜೀವದ್ರವ್ಯವಾಗಿತ್ತು. ಆತ ಎಂದೂ ನಾನು ಗುಣಪಡಿಸಿದೆ ಎಂದು ಕೊಚ್ಚಿಕೊಳ್ಲಲಿಲ್ಲ. ಬದಲಿಗೆ, ದೇವರಲ್ಲಿಯ ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥ ಮಾಡಿತು ಎನ್ನುತ್ತಿದ್ದ. ಒಮ್ಮೆ ರೋಮನ್ ಸೈನ್ಯದ ಶತಾಧಿಪತಿಯ ಮಗನ ಕಾಯಿಲೆಯನ್ನು ಗುಣಪಡಿಸುವ ಸಂದರ್ಭದಲ್ಲಿ, ಅನ್ಯ ಮತೀಯ ಈ ಶತಾಧಿಪತಿಯ ನಂಬಿಕೆಯನ್ನು ನಾನು ಇಸ್ರಯೇಲ್ ಜನರಲ್ಲೂ ಕಾಣಲಿಲ್ಲ ಎಂದಿದ್ದ.

ನಂಬಿಕೆ, ವಿಶ್ವಾಸದ ಮೂಲಕ ಗುಣಪಡಿಸುವ ಕ್ರಿಯೆ ನಂಬಿಕೆಯನ್ನೇ ಮಹಿಮೆ ಪಡಿಸುತ್ತದೆ. ನಂಬಿಕೆಯಲ್ಲಿ ಕೊರತೆ ಉಂಟಾದಲ್ಲಿ ಅದರ ಫಲಿತಾಂಶ ಶೂನ್ಯವಾಗುತ್ತದೆ. ನಂಬಿಕೆಯ ಬಗ್ಗೆ ಯೇಸು ತನ್ನ ಜನ ಮತ್ತು ಶಿಷ್ಯರನ್ನು ಆಗಾಗ ಎಚ್ಚರಿಸುತ್ತಲೇ ಹೀಗೆನ್ನುತ್ತಿದ್ದ: ‘.... ಸಾಸಿವೆ ಕಾಳಿನಷ್ಟು ನಂಬಿಕೆ ನಿಮ್ಮಲ್ಲಿರುವುದಾದರೆ ನೀವು ಬೆಟ್ಟಕ್ಕೆ, ಇಲ್ಲಿಂದ ಅಲ್ಲಿಗೆ ಹೋಗು ಎಂದು ಹೇಳಿದರೂ ಅದು ಹೋಗುವುದು’. ಸಬ್ಬತ್ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಯೇಸು ಬಡವರನ್ನು, ಅಂಗಹೀನರನ್ನು, ಪರಿತ್ಯಕ್ತರನ್ನು ಅವರವರ ಅಗತ್ಯಕ್ಕೆ ತಕ್ಕಂತೆ ಗುಣಪಡಿಸುತ್ತ, ಅಂದಿನ ಯಹೂದಿ ಮುಖ್ಯಸ್ಥರಿಗೆ ಸವಾಲೆಸೆಯುತ್ತಿದ್ದ.

ಇತರರ ಸಂಕಷ್ಟ, ನೋವುಗಳನ್ನು ಯೇಸು ತನ್ನದೇ ಎಂದು ಬಗೆದು ಪರಿಹಾರ ನೀಡುತ್ತಿದ್ದ. ಯಾರ ನಿಟ್ಟುಸಿರನ್ನೂ ಕಡೆಗಾಣಿಸಲಿಲ್ಲ. ಅವರೆಲ್ಲ ಪಿತ ದೇವನ ಸುತನಾದ ತನ್ನಲ್ಲಿ ಇಟ್ಟಿದ್ದ ಅಚಲ ನಂಬಿಕೆಗೆ ಚ್ಯುತಿಯಾಗದಂತೆ ತನ್ನ ದೈವೀ ಕಾರ್ಯಗಳನ್ನು ಜರುಗಿಸುತ್ತ ದೇವ ಮಾನವನಾಗಿ ಈ ಭೂ ಲೋಕದಲ್ಲಿ ಕರುಣಾ ಸಾಗರ ಎನಿಸಿಕೊಂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net