"ಮಿಸ್ ಫೆಸ್ಟಿವಲ್ ಆಫ್ ನೇಷನ್ಸ್"ನಲ್ಲಿ ಫಸ್ಟ್ ರನ್ನರ್ ಅಪ್ ಪ್ರಶಸ್ತಿ ಗೆದ್ದ ಹೆಮ್ಮೆಯ ಕನ್ನಡತಿ ಜೀವಿಕಾ ಬೆಂಕಿ! Jeevika Benki

Jeevika Benki
Published on

Jeevika Benki: ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿ ಇದೇ ಅಕ್ಟೋಬರ್ 27ರ ಭಾನುವಾರದಂದು ನಡೆದ ಸುಮಾರು 30 ದೇಶಗಳು ಭಾಗವಹಿಸಿದ್ದ "ಮಿಸ್ ಫೆಸ್ಟಿವಲ್ ಆಫ್ ನೇಷನ್ಸ್" ಸ್ಪರ್ಧೆಯಲ್ಲಿ "ಮಿಸ್ ಇಂಡಿಯಾ" ಜೀವಿಕಾ ಬೆಂಕಿ ಫಸ್ಟ್ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. "ಮಿಸ್ ಬೋಸ್ನಿಯಾ" ಆಜ್ರಾ ಕ್ಲಾಫಿಜಾ ಮಿಸ್ ಫೆಸ್ಟಿವಲ್ ಆಫ್ ನೇಶನ್ಸ್- 2024 ಕಿರೀಟವನ್ನು ಗೆದ್ದಿದ್ದಾರೆ.

53 ವರ್ಷಗಳ ಇತಿಹಾಸವಿರುವ ಫೆಸ್ಟಿವಲ್ ಆಫ್ ನೇಷನ್ಸ್​ನಲ್ಲಿ ಇಷ್ಟು ದೊಡ್ಡ ಸಾಧನೆ ಮಾಡಿದ ಮೊದಲ ಹೆಮ್ಮೆಯ ಕನ್ನಡಿಗ ಹುಡುಗಿಯಾಗಿದ್ದಾಳೆ 16 ವರ್ಷದ ಜೀವಿಕ ಬೆಂಕಿ.

ಮೊದಲು "ಮಿಸ್ ಇಂಡಿಯಾ" ಸ್ಪರ್ಧೆಯನ್ನು ಗೆದ್ದು ನಂತರ ಒಂದು ರೀತಿಯ ಸಣ್ಣ ಪ್ರಮಾಣದ "ಮಿಸ್ ಯುನಿವರ್ಸ್" ವಿಶ್ವ ಸುಂದರಿ ಸ್ಪರ್ಧೆಯ ತರಹದ ಮಿಸ್ ಫೆಸ್ಟಿವಲ್ ಆಫ್ ನೇಷನ್ಸ್​ನಲ್ಲಿ ಟಾಪ್ ಫೈವ್ ಫೈನಲ್ ಲಿಸ್ಟ್​ಗೆ ಬಂದು, ಮತ್ತೆ ಕೊನೇ ಹಂತದ ರೋಚಕ ಸ್ಪರ್ಧೆಯಲ್ಲಿ ಅತಿ ಸ್ವಲ್ಪ ಅಂತರದಲ್ಲಿ ಮೊದಲ ಸ್ಥಾನವನ್ನು ತಪ್ಪಿಸಿಕೊಂಡು ಫಸ್ಟ್ ರನ್ನರ್ ಸ್ಥಾನವನ್ನು ಪಡೆದಿದ್ದಾಳೆ.

Jeevika Benki

ಇದಕ್ಕೂ ಮೊದಲು ನಡೆದ ಎಲ್ಲ ದೇಶಗಳ ಮೆರವಣಿಗೆಯಲ್ಲಿ ಮಿಸ್ ಇಂಡಿಯಾ ಜೀವಿಕಾ ಬೆಂಕಿ ಭಾರತ ತಂಡದ ನೇತೃತ್ವವನ್ನು ವಹಿಸಿದ್ದಳು. ಮಿನಿ ವಿಶ್ವಸಂಸ್ಥೆಯ ತರಹ ಕಂಡುಬಂದ ಇಂದಿನ ಅದ್ದೂರಿ ಕಾರ್ಯಕ್ರಮದಲ್ಲಿ ಅಂದಾಜು 30 ದೇಶಗಳ ಸುಮಾರು 3000 ಜನರು ಭಾಗವಹಿಸಿದ್ದರು. ಇದರಲ್ಲಿ ಎಲ್ಲ ದೇಶಗಳ ವಿವಿಧ ಭಕ್ಷ್ಯಗಳ ಆಹಾರಗಳ ಅಂಗಡಿಗಳನ್ನು ಹಾಕಲಾಗಿತ್ತು.

ಗ ನಿಸ್ಕಯೂನ ಹೈಸ್ಕೂಲ್​ನಲ್ಲಿ 11ನೇ ಕ್ಲಾಸ್ ಓದುತ್ತಿರುವ ಜೀವಿಕಾ ಬೆಂಕಿ, ವೀಕೆಂಡ್​ಗಳಲ್ಲಿ ಫ್ಲೈಟ್ ಸ್ಕೂಲ್​ನಲ್ಲಿ ವಿಮಾನ ಹಾರಾಟದ ಪೈಲೆಟ್ ತರಬೇತಿ ಪಡೆಯುತ್ತಿದ್ದಾಳೆ. ಟೆನ್ನಿಸ್ ಮತ್ತು ಲಕ್ರಾಸ್ ತಂಡಗಳ ಕ್ಯಾಪ್ಟನ್ ಆಗಿದ್ದಾಳೆ. ಆಲ್ಬನಿ ಕನ್ನಡ ಸಂಘದ ಯೂಥ್ ವಿಂಗ್​ನ ಸೆಕ್ರೆಟರಿ ಆಗಿ ಸೇವೆ ಸಲ್ಲಿಸುತ್ತಿದ್ದಾಳೆ.

ಮಿಸ್ ಫೆಸ್ಟಿವಲ್ ಆಪ್ ನೇಷನ್ಸ್ ಫಸ್ಟ್ ರನ್ನರ್ ಅಪ್ ಪ್ರಶಸ್ತಿ ಗೆದ್ದು ಮಾತನಾಡಿದ ಜೀವಿಕಾ, "ನನ್ನ ಈ ಪ್ರಶಸ್ತಿಯನ್ನು ಕೆಲ ದಿನಗಳ ಹಿಂದೆಯಷ್ಟೇ ನಿಧನರಾದ ನನ್ನ ತಾತನಿಗೆ (ತಾಯಿಯ ತಂದೆ) ಅರ್ಪಿಸುತ್ತಿದ್ದೇನೆ. ನಿಧನದ ವಿಷಯ ತಿಳಿದ ತಕ್ಷಣ ನನ್ನ ತಾಯಿ ಉಮಾ ಇಂಡಿಯಾಕ್ಕೆ ಧಾವಿಸಿ ಹೋಗಿದ್ದಾರೆ. ಇವತ್ತು ನನ್ನ ತಾಯಿಯನ್ನು ತುಂಬಾ ಮಿಸ್ ಮಾಡಿಕೊಂಡೆ. ನನ್ನ ತಂದೆ ಬೆಂಕಿ ಬಸಣ್ಣ ನನಗೆ ಎಲ್ಲಾ ರೀತಿಯ ಪ್ರೋತ್ಸಾಹಗಳನ್ನು ಕೊಟ್ಟಿದ್ದಾರೆ. ಜೊತೆಗೆ ಇಲ್ಲಿಯ ಕನ್ನಡ ಕಲಿ ಶಾಲೆಯ ಗುರುಗಳಾದ ಲತಾ ಮೇಡಂ ನನಗೆ ಮಾರ್ಗದರ್ಶನ ಮಾಡಿದ್ದಾರೆ. ನನ್ನ ತಾಯಿ ಇಲ್ಲಿ ಇಲ್ಲದ ಕಾರಣ ಕವಿತಾ ಆಂಟಿ ನನ್ನ ಮೇಕಪ್ ಮಾಡಿದ್ದು, ಜೊತೆಗೆ ನನ್ನಿಷ್ಟದ ರುಚಿಯಾದ ಅಡುಗೆಯನ್ನು ಮಾಡಿ ಪ್ರೀತಿಯಿಂದ ಉಣಬಡಿಸಿದ್ದಾರೆ. ಜೊತೆಗೆ ಆಲ್ಬನಿ ಕನ್ನಡ ಸಂಘದ ಬಹಳಷ್ಟು ಜನರು ಫೆಸ್ಟಿವಲ್ ಆಫ್ ನೇಶನ್ಸ್​ಗೆ ಬಂದು ಮೆರವಣಿಗೆಯಲ್ಲಿ ಭಾಗವಹಿಸಿ ನನಗೆ ಧೈರ್ಯ, ಸಹಕಾರ, ಪ್ರೋತ್ಸಾಹ ಮತ್ತು ಬೆಂಬಲವನ್ನು ಕೊಟ್ಟಿದ್ದಾರೆ. ಅವರೆಲ್ಲರಿಗೂ ನಾನು ಚಿರಋಣಿಯಾಗಿದ್ದೇನೆ. ಸ್ವಲ್ಪದರಲ್ಲಿ ಮಿಸ್ ಫೆಸ್ಟಿವಲ್ ಆಫ್ ನೇಶನ್ಸ್ ಕಿರೀಟ ತಪ್ಪಿದ್ದಕ್ಕೆ ಕೊಂಚ ಬೇಜಾರಾಗಿದೆ. ಆದರೆ, ಇದನ್ನು ನಾನು ಸ್ಪೋಟಿವ್ ಆಗಿ ತೆಗೆದುಕೊಳ್ಳುತ್ತೇನೆ. ಪ್ರಶಸ್ತಿ ಗೆದ್ದ "ಮಿಸ್ ಬೋಸ್ನಿಯಾ"ಗೆ ನನ್ನ ತುಂಬು ಹೃದಯದ ಅಭಿನಂದನೆಗಳನ್ನು ಹೇಳುತ್ತೇನೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅನುಭವವೇ ಒಂದು ರೋಚಕ ಹಾಗೂ ಗೌರವದ ವಿಷಯವಾಗಿದೆ. ಇದು ನನ್ನ ಜೀವನದ ಒಂದು ಪ್ರಮುಖ ಮೈಲುಗಲ್ಲಾಗಿದೆ. ನಾನು ಜೀವನದಲ್ಲಿ ಇನ್ನೂ ಬಹಳಷ್ಟು ಸಾಧನೆ ಮಾಡುವುದು ಇದೆ" ಎಂದು ತಿಳಿಸಿದಳು.

ಈ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ಸಂಗೀತ, ಕಲೆ ಹಾಗೂ ನೃತ್ಯಗಳನ್ನು ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net