

ನವದೆಹಲಿ: ರಾಷ್ಟ್ರೀಯ ಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ನಡೆಯುವ ಜೆಇಇ ಮೇನ್ಸ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, 23 ಅಭ್ಯರ್ಥಿಗಳು ಪೂರ್ಣಾಂಕ ಪಡೆದಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಿಳಿಸಿದೆ.
ಕರ್ನಾಟಕದ ಅಮೋಘ್ ಅಗರ್ವಾಲ್ ಸೇರಿದಂತೆ 23 ಅಭ್ಯರ್ಥಿಗಳು 100ಕ್ಕೆ 100 ಗಳಿಸಿದ್ದು, ರಾಜ್ಯದ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನುಳಿದಂತೆ ತೆಲಂಗಾಣ (07), ಆಂಧ್ರಪ್ರದೇಶ (03), ರಾಜಸ್ಥಾನ (03), ಮಹಾರಾಷ್ಟ್ರ (03), ದೆಹಲಿ (02), ಹರಿಯಾಣ (02), ಗುಜರಾತ್, ಕರ್ನಾಟಕ ಹಾಗೂ ತಮಿಳುನಾಡಿನಿಂದ ಓರ್ವ ಅಭ್ಯರ್ಥಿ ಪೂರ್ಣಾಂಕ ಪಡೆದಿದ್ದಾರೆ.
ಒಟ್ಟು 11.70 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದ ಈ ಪರೀಕ್ಷೆಯನ್ನು 291 ನಗರಗಳಲ್ಲಿ (21 ವಿದೇಶಿ ನಗರ ಒಳಗೊಂಡಂತೆ) ಅಸ್ಸಾಮಿ , ಬಂಗಾಳಿ , ಇಂಗ್ಲಿಷ್ ,ಗುಜರಾತಿ , ಹಿಂದಿ, ಕನ್ನಡ , ಮರಾಠಿ, ಒಡಿಯಾ , ಪಂಜಾಬಿ , ತಮಿಳು,ತೆಲುಗು , ಉರ್ದು ಭಾಷೆಯಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು.
ಈ ಪರೀಕ್ಷೆಯು ದೇಶದ 23 ಪ್ರಮುಖ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ ( ಐಐಟಿ) ಪ್ರವೇಶ ಪಡೆಯಲು ಇರುವ ಒಂದು ಮಾನದಂಡವಾಗಿದ್ದು, ಪರೀಕ್ಷೆಯನ್ನು ಸಿಸಿಟಿವಿ ಕಣ್ಗಾವಲಿನ ಭದ್ರತೆಯಲ್ಲಿ ನಡೆಸಲಾಗಿತ್ತು. ಜೆಇಇ ಮೇನ್ ಪರೀಕ್ಷೆಯ ಮೊದಲ ಆವೃತ್ತಿಯು ಜನವರಿ– ಫೆಬ್ರುವರಿಯಲ್ಲಿ ನಡೆದಿತ್ತು. ಎರಡನೇ ಆವೃತ್ತಿಯನ್ನು ಏಪ್ರಿಲ್‌ನಲ್ಲಿ ನಡೆಸಲಾಗುತ್ತದೆ. ಎರಡೂ ಆವೃತ್ತಿಗಳ ಫಲಿತಾಂಶ ಆಧರಿಸಿ, ಜೆಇಇ– ಅಡ್ವಾನ್ಸ್ಡ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.