ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಲು ಮುಂದಾದ ಜೆಡಿಎಸ್​ ಶಾಸಕರು: ಕಾರಣವೇನು?

jdsssssssssss
Published on

ಬೆಂಗಳೂರು: ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ತಮ್ಮ‌ ಕ್ಷೇತ್ರಗಳಿಗೆ ಬಿಡುಗಡೆ ಮಾಡಲಾದ ಅನುದಾನ ಕಡಿತ ವಿರೋಧಿಸಿ ಜೆಡಿಎಸ್ ಶಾಸಕರು ಗುರುವಾರ ವಿಧಾನಸಭೆಯಲ್ಲಿ ಕಲಾಪ ಮುಗಿದ ಬಳಿಕವೂ ಸ್ಪೀಕರ್ ಪೀಠದ ಮುಂಭಾಗ ಧರಣಿ ನಡೆಸಿದರು.

ಅನುದಾನ‌ಕಡಿತ ವಿಚಾರದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ನೀಡಿದ ಉತ್ತರಕ್ಕೆ ತೃಪ್ತರಾಗದ ಜೆಡಿಎಸ್ ಶಾಸಕರು, ಸಿಎಂ ಸೂಕ್ತ ಉತ್ತರ ನೀಡದಿದ್ದರೆ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಜೆಡಿಎಸ್ ಶಾಸಕರು ಪೀಠದ ಮುಂದೆ ಧರಣಿ ನಡೆಸುತ್ತಿದ್ದ ಸಂದರ್ಭದಲ್ಲೇ ಸ್ಪೀಕರ್ ವಿಧೇಯಕವೊಂದಕ್ಕೆ ಅನುಮೋದನೆ ಪಡೆದುಕೊಂಡರು. ನಂತರ ಬಾಕಿ ಉಳಿದ ಪ್ರಕ್ರಿಯೆಯನ್ನು ಶುಕ್ರವಾರ ಕೈಗೆತ್ತಿಕೊಳ್ಳುವುದಾಗಿ ಕಲಾಪ ಮುಂದೂಡಿದರು.

ಈ ವೇಳೆ ಧರಣಿ ನಿರತ ಶಾಸಕರು ತಮ್ಮ ಹಠಬಿಡಲಿಲ್ಲ. ನಾವು ಅಹೋರಾತ್ರಿ ಧರಣಿ ನಡೆಸುತ್ತೇವೆ, ಯಾವುದೇ ಕಾರಣಕ್ಕೂ ಪಟ್ಟು ಸಡಿಲಿಸಲ್ಲ ಎಂದು ಎಚ್.ಡಿ. ರೇವಣ್ಣ ಘೋಷಿಸಿದರು.

ಸ್ಪೀಕರ್ ಅವರು‌ ಎಚ್.ಡಿ.ರೇವಣ್ಣರನ್ನು ತಮ್ಮ‌ಕೊಠಡಿಗೆ ಕರೆಸಿಕೊಂಡು ಮನವೊಲಿಕೆ ಪ್ರಯತ್ನಿಸಿದರು. ಆದರೆ ಜೆಡಿಎಸ್‌ನವರು ನಿಲುವು ಸಡಿಲಿಸಲಿಲ್ಲ. ಹೀಗಾಗಿ ರಾತ್ರಿ ಮಲಗಲು ಹಾಸಿಗೆ, ದಿಂಬು, ಊಟದ ವ್ಯವಸ್ಥೆ ಮಾಡಲು ತಮ್ಮ ಕಾರ್ಯದರ್ಶಿಗೆ ಸೂಚಿಸಿದರು. ಇನ್ನೊಂದೆಡೆ ಪುನಃ ಧರಣಿ ಸ್ಥಳಕ್ಕೆ ಬಂದ ಸ್ಪೀಕರ್, ಪುನಃ ಧರಣಿ ನಿರತರೊಂದಿಗೆ ಚರ್ಚೆ ನಡೆಸಿ ಮನವೊಲಿಸಲು ಪ್ರಯತ್ನಿಸಿದರು. ಆದರೆ ಸಂಜೆ ಖುದ್ದು ಸಿಎಂ ಯಡಿಯೂರಪ್ಪ ವಿಧಾನಸಭೆಗೆ ತೆರಳಿ ಜೆಡಿಎಸ್ ಸದಸ್ಯರ ಮನವೊಲಿಸಲು ಪ್ರಯತ್ನಿಸಿದರು.

ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಹಲವು ಯೋಜನೆಗಳಿಗೆ ಗುದ್ದಲಿ ಪೂಜೆ ಹಾಕಿದ್ದೇವೆ, ಆದ್ರೆ ಈ ಸರ್ಕಾರ ಮೀಸಲಿಟ್ಟ ಹಣವನ್ನ ತಡೆ ಹಿಡಿದಿದೆ. ಲೋಕೋಪಯೋಗಿ ಇಲಾಖೆ ಹೊರತುಪಡಿಸಿ ಎಲ್ಲ ಇಲಾಖೆಗಳಲ್ಲೂ ತಡೆ ಹಿಡಿಯಲಾಗಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲ್ಲ ಎಂದು ಹೇಳಿದ್ದರು, ಆದ್ರೆ ಈಗ ವಿರೋಧ ಪಕ್ಷಗಳ ಶಾಸಕರ ಅನುದಾನ ಬಿಡುಗಡೆ ಮಾಡ್ತಿಲ್ಲ. ಹೀಗಾಗಿ ನಾವು ಅಹೋರಾತ್ರಿ ಧರಣಿ ಮಾಡ್ತಿದ್ದೇವೆ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net