

ಬೆಂಗಳೂರು: ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿದ ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಭಾರೀ ಪ್ರತಿಭನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಕಚೇರಿ ಮುಂಭಾಗದಲ್ಲಿ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಟಿ.ಎ.ಶರವಣ, ಜವರಾಯಿ ಗೌಡ, ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ ಸೇರಿದಂತೆ ಅನೇಕ ನಾಯಕರು, ನೂರಾರು ಕಾರ್ಯಕರ್ತರು ಭಾಗವಹಿಸಿ ಅಧಿಕಾರಿ ವಿರುದ್ಧ ಆಕ್ರೋಶ ಹೊರ ಹಾಕಿದರು. .
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಗೌಡ, ಒಬ್ಬ ಅಧಿಕಾರಿಯಾಗಿ ಚಂದ್ರಶೇಖರ್ ಅವರು ಕೇಂದ್ರ ಸಚಿವರ ಬಗ್ಗೆ ಬಳಕೆ ಮಾಡಿರುವ ಭಾಷೆ ಸರಿ ಇಲ್ಲ. ಅದಕ್ಕೆ ಕ್ಷಮೆ ಕೇಳಬೇಕು ಹಾಗೂ ಅವರ ವಿರುದ್ಧ ಶಿಸ್ತು ಜರುಗಿಸಬೇಕು ಎಂದು ಒತ್ತಾಯ ಮಾಡಿದರು.
ಚಂದ್ರಶೇಖರ್ ಹೇಳಿಕೆಯಿಂದ ಕುಮಾರಸ್ವಾಮಿ ಅವರ ಅಭಿಮಾನಿಗಳು ಹಾಗೂ ಅಸಂಖ್ಯಾತ ಜೆಡಿಎಸ್ ಕಾರ್ಯಕರ್ತರ ಭಾವನೆಗಳಿಗೆ ಘಾಸಿ ಉಂಟಾಗಿದೆ. ಕಾಂಗ್ರೆಸ್ ಸರ್ಕಾರ ನಮ್ಮ ನಾಯಕರ ವಿರುದ್ಧ ಅಧಿಕಾರಿಗಳನ್ನು ಎತ್ತಿ ಕಟ್ಟುತ್ತಿದೆ ಎಂದು ಹೇಳಿದರು.
ಹಿರಿಯ ಶಾಸಕರಾದ ತಿಪ್ಪೇಸ್ವಾಮಿ, ಶರವಣ ಅವರು ಕೂಡ ಎಡಿಜಿಪಿ ಹೇಳಿಕೆಯನ್ನು ಉಗ್ರ ಶಬ್ದಗಳಲ್ಲಿ ಖಂಡಿಸಿದರು.
ಕಾರ್ಯಕರ್ತರು ಪಕ್ಷದ ಕಚೇರಿಯಿಂದ ಮುಖ್ಯ ರಸ್ತೆವರೆಗೆ ಮೆರವಣಿಗೆ ನಡೆಸಿ ಅಧಿಕಾರಿ ಚಂದ್ರಶೇಖರ್ ವಿರುದ್ಧ ಧಿಕ್ಕಾರ ಕೂಗಿದರು. ಕೂಡಲೇ ಕೇಂದ್ರ ಸಚಿವರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ಕ್ಷಮೆ ಕೇಳದಿದ್ದರೆ ನಗರದ ಎಲ್ಲೆಡೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಹಾಗೂ ಮುಂದೆ ಆಗಬಹುದಾದ ಪರಿಣಾಮಗಳಿಗೆ ಸರ್ಕಾರವೇ ಹೊಣೆ ಆಗಬೇಕಾಗುತ್ತದೆ ಎಚ್ಚರಿಕೆ ಕೊಟ್ಟರು.
ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಶೈಲಜಾ ರಾವ್, ಬೆಂಗಳೂರು ಮಹಾನಗರದ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ತುಳಸೀ ರಾಮ್, ಪಾಲಿಕೆಯ ಮಾಜಿ ಸದಸ್ಯ ತಿಮ್ಮೇಗೌಡ, ವಕ್ತಾರರಾದ ದೇವರಾಜು, ಪೂರ್ಣಿಮ ಗೌಡ, ಬೆಂಗಳೂರು ಘಟಕದ ವಿವಿಧ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.