ನಿಖಿಲ್​-ಪ್ರಜ್ವಲ್ ಒಟ್ಟಾಗಿ ಯುದ್ಧಕ್ಕೆ ಹೋಗಲಿ..! ಚಿಕ್ಕಪ್ಪ-ದೊಡ್ಡಪ್ಪನ ಎದುರಲ್ಲೇ ಸವಾಲು

prajwal devegowda nikhil
Published on

ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಜೆಡಿಎಸ್​ ಪಕ್ಷದ ಎರಡು ಕಣ್ಣು ಇದ್ದ ಹಾಗೆ, ಇವರಿಬ್ಬರು ಒಟ್ಟಾಗಿ ಯುದ್ಧಕ್ಕೆ ಹೋದ್ರೆ ಜೆಡಿಎಸ್ ಏಕೆ ಅಧಿಕಾರಕ್ಕೆ ಬರಲ್ಲ ನೋಡೆ ಬಿಡೋಣ...

ಇದು ಜೆಡಿಎಸ್​ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜೆಡಿಎಸ್​ ನಾಯಕರ ಸಭೆಯಲ್ಲಿ ಹೊಮ್ಮಿದ ಧ್ವನಿ. ರಾಜ್ಯಾದ್ಯಂತ ತಳಮಟ್ಟದಿಂದ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಎಚ್​.ಡಿ.ಕುಮಾರಸ್ವಾಮಿ ಮತ್ತು ರೇವಣ್ಣ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷ ಸಂಘಟನೆಗೆ ಸ್ಥಳೀಯ ಮಟ್ಟದಲ್ಲಿರುವ ಸಮಸ್ಯೆ, ಆಂತರಿಕ ಭಿನ್ನಾಭಿಪ್ರಾಯದ ಬಗ್ಗೆ ಪ್ರಸ್ತಾಪಿಸಿದ ಜಿಲ್ಲಾ ಮುಖಂಡರು, ಗ್ರಾಮ ಮಟ್ಟದಿಂದಲೇ ಪಕ್ಷವನ್ನು ಪುನರ್ ರಚನೆ ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಧ್ವನಿಗೂಡಿಸಿದ ಮಾಜಿ ಶಾಸಕ ಕೋನರೆಡ್ಡಿ, ನಮ್ಮ ಪಕ್ಷವನ್ನು ಸಂಘಟನೆ ಮಾಡಬೇಕಾದರೆ ನಾಲ್ಕು ದಿಕ್ಕಿನಲ್ಲೂ ನಾವು ಹೋರಾಟ ಮಾಡಬೇಕು. ಕುಮಾರಸ್ವಾಮಿ, ರೇವಣ್ಣ, ನಿಖಿಲ್ ಮತ್ತು ಪ್ರಜ್ವಲ್ ರೇವಣ್ಣ ಈ ನಾಲ್ವರು ಒಂದೊಂದು ದಿಕ್ಕಿನಿಂದ ರಾಜ್ಯ ಪ್ರವಾಸ ಮಾಡಬೇಕು. ಆಗ ಪಕ್ಷವನ್ನು ಸಮರ್ಥವಾಗಿ ಕಟ್ಟಬಹುದು. ಯಾರು ಏನೇ ಹೇಳಿದರೂ ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗ್ತಾರೆ ಎಂದರು.

ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಜೆಡಿಎಸ್​ ಪಕ್ಷದ ಎರಡು ಕಣ್ಣು ಇದ್ದ ಹಾಗೆ, ಇವರಿಬ್ಬರು ಒಟ್ಟಾಗಿ ಯುದ್ಧಕ್ಕೆ ಹೋದ್ರೆ ಜೆಡಿಎಸ್ ಏಕೆ ಅಧಿಕಾರಕ್ಕೆ ಬರಲ್ಲ ನೋಡೇ ಬಿಡೋಣ ಎಂದು ಸವಾಲು ಹಾಕಿದ ಕೋನರೆಡ್ಡಿ, ಶಿರಾ ಮತ್ತು ಆರ್​ ಆರ್​ ನಗರ ಉಪ ಚುನಾವಣೆ ಹಾಗೂ ಪರಿಷತ್ ಚುನಾವಣೆಯಲ್ಲಿ ನಾವು ಮೂರು ಸ್ಥಾನ ಗೆಲ್ಲಬೇಕಿತ್ತು. ಆದರೆ ಫೈನಾನ್ಸ್ ಪಕ್ಷಗಳು ಹಣ ಚೆಲ್ಲಿದವು. ಜನರೂ ಅಂತಹವರನ್ನೇ ಆಯ್ಕೆ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾದೇಶಿಕ ಪಕ್ಷ ಉಳಿಸಿಕೊಳ್ಳುವುದೇ ಇಂದು ದೊಡ್ಡ ಸವಾಲು. ನಮ್ಮ ಪಕ್ಷದಲ್ಲಿ ಒಳ ಬೇಗುದಿಯನ್ನು ಮರೆಯಬೇಕು. ಅವರು ಸರಿಯಿಲ್ಲ, ಇವರು ಸರಿಯಲ್ಲ ಎಂದು ಆರೋಪಿಸುತ್ತ ಕೂರುವುದನ್ನ ಬಿಡಬೇಕು. ಆಗ ಮಾತ್ರ ಮುಂದಿನ ಬಾರಿ ಕುಮಾರಸ್ವಾಮಿ ಅವರನ್ನು ಮತ್ತೆ ಸಿಎಂ ಮಾಡಬಹುದು. ಬೇರೆ ಪಕ್ಷದ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತ ಹೋದರೆ ಪಕ್ಷ ಬೆಳೆಯಲ್ಲ ಎಂದು ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net