ಜೆಡಿಎಸ್​ ಸಂಘಟನಾ ಶಕ್ತಿ ಕಳೆದುಕೊಂಡಿಲ್ಲ

samruddi manjunath
ಸಮೃದ್ಧಿ ಮಂಜುನಾಥ್​
Published on

ಕೋಲಾರ: ಮುಂದಿನ ದಿನಗಳಲ್ಲಿ ಜೆಡಿಎಸ್​ ಸರ್ವನಾಶ ಮಾಡಬೇಕು, ಮಾರಾಟ ಮಾಡಬೇಕು ಎಂದಾಗ ಅವರವರ ದಾರಿಯನ್ನು ಅವರು ನೋಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ನಮ್ಮನ್ನು ನಂಬಿಕೊಂಡು ಲಾಂತರ ಮಂದಿಯಿದ್ದಾರೆ. ನಮಗೂ ಭವಿಷ್ಯವಿದೆ, ಆದರೆ ಇದುವರೆಗೂ ಆತರಹದ ಲಕ್ಷಣ ಕಂಡು ಬಂದಿಲ್ಲ ಎಂದು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್​ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಟಿ.ದೇವೇಗೌಡ ಯಾವ ಉದ್ದೇಶದಿಂದ ಮಾರ್ಮಿಕವಾಗಿ ಪಕ್ಷದ ಬಗ್ಗೆ ಮಾತನಾಡಿದ್ದಾರೋ ಗೊತ್ತಿಲ್ಲ. ಮುಂದಿನ ನಿರ್ಧಾರದ ಬಗ್ಗೆ ಕಾದು ನೋಡಬೇಕು ಎಂದರು.

ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋತ ಮಾತ್ರಕ್ಕೆ ಜೆಡಿಎಸ್​ ಸಂಟನಾ ಶಕ್ತಿ ಕಳೆದುಕೊಂಡಿಲ್ಲ, ಬಹಳಷ್ಟು ಬಲಿಷ್ಠವಾಗಿದೆ ಎಂದರು.

ಇಬ್ರಾಹಿಂ ಬಗ್ಗೆ ಮಾತನಾಡುವುದಿಲ್ಲ, ಯಾಕೆಂದರೆ ಅವರು ಆಗಾಗ ಖಾಲಿ ಗುಂಡು ಹಾರಿಸುತ್ತಿರುತ್ತಾರೆ. ಹಿಂದೆ ಜೆಡಿಎಸ್​&ಬಿಜೆಪಿ ಮೈತ್ರಿ ಆಗುವ ಬಗ್ಗೆ ಚರ್ಚೆ ಮಾಡುತ್ತಿದ್ದಾಗ ಇಬ್ರಾಹಿಂ ಅವರು ಏನು ಆರ್​ ಕೇಳಿದ್ದರು ಎಂಬುದು ಹೇಳಿ ಅಂದರೆ ಹೇಳುತ್ತೇನೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ, ಡಾ.ಮಂಜುನಾಥ್​ ಗೆದ್ದಾಗ ಜೆಡಿಎಸ್​ ಸ್ಟ್ರಾಂಗ್​ ಆಯಿತು ಅಂತ ಚಪ್ಪಾಳೆ ತಟ್ಟಿದರು. ಸೋತ ಕಾರಣಕ್ಕೆ ವೀಕ್​ ಅಂತ ಮುದಲಿಸುತ್ತಾರೆ. ಒಂದು ಬಾರಿ ಸೋತ ಮಾತ್ರಕ್ಕೆ ಶಕ್ತಿ ಕಳೆದುಕೊಳ್ಳಲು ಸಾಧ್ಯವಿಲ್ಲ. ಈಗ ಸೋತಿರಬಹುದು, ಮುಂದಿನ ದಿನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದರು.

ಸೋಲನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದೇವೆ, ನಿಖಿಲ್​ ಕುಮಾರಸ್ವಾಮಿ ಅವರಿಗೇನು ವಯಸ್ಸಾಗಿಲ್ಲ. ಮುಂದಿನ ದಿನಗಳಲ್ಲಿ ಭವಿಷ್ಯವಿದೆ ಎಂದು ತಿಳಿಸಿದರು.

ಈ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್​ ಶಾಸಕರಿಗೆ ಅನುದಾನ ಸಿಗುತ್ತಿದೆ. ಆದರೆ ನಮಗೆ ಸಿಗುತ್ತಿಲ್ಲ, ಈ ಬಗ್ಗೆ ಹೈ ಕಮಾಂಡ್​ಗೂ ತಿಳಿಸಿದ್ದೇನೆ ಎಂದರು.

ಸರ್ಕಾರದಿಂದ ಅನುದಾನ ಸಿಗುತ್ತಿಲ್ಲ, ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಇದರ ಬಗ್ಗೆ ಧ್ವನಿ ಎತ್ತುತ್ತೆವೆ. ಚನ್ನಪಟ್ಟಣ ಸೋಲೋದಕ್ಕೆ ಗ್ಯಾರಂಟಿ ಯೋಜನೆಗಳು ಕಾರಣ. ಗೃಹಲಕ್ಷ್ಮಿ ಯೋಜನೆ ಹಣವನ್ನು ಒಂದೆ ಬಾರಿ ಬಿಡುಗಡೆ ಮಾಡಿ ಮತಗಳನ್ನು ಖರೀದಿ ಮಾಡಿಕೊಂಡರು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net