

ನಾಗಮಂಗಲ: ಜೆಡಿಎಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೊಂದಣಿ ಕಾರ್ಯಕ್ರಮವನ್ನು ಪಟ್ಟಣದ ಎಂಆರ್‌ಪಿ ಸಮುದಾಯ ಭವನದಲ್ಲಿ ಜೂ.30 ರಂದು ಮಧ್ಯಾಹ್ನ 12 ಗಂಟೆಗೆ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಹೇಳಿದರು.
ಈಗಾಗಲೇ ರಾಜ್ಯದಲ್ಲಿ ಅತಿ ಹೆಚ್ಚು ಸದಸ್ಯತ್ವ ನೋಂದಣಿಯಾಗಿರುವುದು ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ. ಜೂ.30 ರಂದು ಮಧ್ಯಾಹ್ನ 12 ಗಂಟೆಗೆ ನಿಖಿಲ್‌ಕುಮಾರಸ್ವಾಮಿ ಅವರು ಸದಸ್ಯತ್ವ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಿದ್ದು, 5 ಸಾವಿರ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ರಾಜ್ಯದಲ್ಲಿ ಸುಮಾರು 50 ಲಕ್ಷ ಸದಸ್ಯತ್ವ ನೋಂದಣಿ ಮಾಡಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಇತರ ಪಕ್ಷಗಳು ಕೂಡ ಡಿಜಿಟಲ್ ನೋಂದಣಿ ಮಾಡಿದ್ದು, ಇತರ ಪಕ್ಷಗಳಿಗಿಂತ ಮತದಾರರು ನಮ್ಮ ಪಕ್ಷದ ನೋಂದಣಿಗೆ ಹೆಚ್ಚಿನ ಆಸಕ್ತಿಯಿಂದ ಸ್ವಯಂಪ್ರೇರಿತರಾಗಿ ಈಗಾಗಲೇ ನೋಂದಣಿ ಮಾಡಿಸುತ್ತಿದ್ದಾರೆ. ರಾಜ್ಯದಲ್ಲಿರುವ ಲೂಟಿ ಸರ್ಕಾರದ ವಿರುದ್ಧ ಜನರು ಬೇಸತ್ತು ಜೆಡಿಎಸ್ ಪಕ್ಷಕ್ಕೆ ಮನ್ನಣೆ ನೀಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ತಪ್ಪು ತಿದ್ದುಕೊಳ್ಳದ ಸರ್ಕಾರ: ಜಿಲ್ಲೆಯ ರೈತರ ವಿರೋಧದ ನಡುವೆಯೂ ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ಕಾವೇರಿ ಆರತಿ ಮಾಡೇ ತೀರುತ್ತೇನೆ ಎಂದು ಹಠಕ್ಕೆ ಬಿದ್ದಿರುವ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಉಪಮುಖ್ಯಮಂತ್ರಿ ನಡೆ ನಿಜಕ್ಕೂ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಾಗೂ ಅನುದಾನದ ವಿಷಯದಲ್ಲಿ ಪಾರದರ್ಶಕವಾಗಿ ಮಾಡಿದರೆ ನಮ್ಮದೇನು ತಕರಾರಿಲ್ಲ. 99 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಆರತಿ ಮಾಡುತ್ತಿರುವುದು ದುಡ್ಡು ಹೊಡೆಯಲು ಮಾತ್ರವಾಗಿದೆ. ಸಾರ್ವಜನಿಕರ ಮುಂದೆ ತಮ್ಮ ಪಕ್ಷದ ಶಾಸಕರೇ ಬಹಿರಂಗವಾಗಿ ಸರ್ಕಾರದ ಕೆಲವು ನಡೆಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೂ ಕಾಂಗ್ರೆಸ್ ತಮ್ಮ ತಪ್ಪುಗಳನ್ನು ತಿದ್ದುಕೊಳ್ಳುವ ಕೆಲಸ ಮಾಡಿಲ್ಲ. ಜನರು ಅಧಿಕಾರ ಕೊಟ್ಟಿರುವುದೇ ಲೂಟಿ ಮಾಡುವುದಕ್ಕೆ ಎಂಬ ಮನಸ್ಥಿತಿಯಲ್ಲಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.