

ಬೆಂಗಳೂರು:
ಪಕ್ಷದೊಳಗಿರುವ ಅಸಮಾಧಾನಗಳನ್ನು ಮಾತುಕತೆಯ ಮೂಲಕ ಸರಿಪಡಿಸಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಖುದ್ದು ಆಸಕ್ತಿ ವಹಿಸಿದ್ದಾರೆ.
ವಿಧಾನಸಭೆ ಉಪ ಚುನಾವಣೆ ಮುಗಿದ ಬೆನ್ನಲ್ಲಿಯೇ ಕೇಂದ್ರದ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ ಕೆಲ ಶಾಸಕರು ಮತ್ತು ಮುಖಂಡರು, ಚನ್ನಪಟ್ಟಣದ ಸೋಲು ನಮ್ಮ ಪಕ್ಷಕ್ಕಾದ ಹಿನ್ನೆಡೆ. ಆದ್ದರಿಂದ ಈಗಲಾದರೂ ಪರಸ್ಪರ ಮುಖ ಮುನಿಸು ಬಿಟ್ಟು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಬೇಕು ಎಂದು ಪ್ರಸ್ತಾಪಿಸಿ ಗಂಭೀರವಾಗಿ ಮಾತನಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಸಿಕ್ಕ ಮನ್ನಣೆ, ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಕೊಚ್ಚಿ ಹೋಯ್ತು ಎಂದು ಬೇಸರದಲ್ಲಿ ಮಾತನಾಡಿದ ಎಚ್‌ಡಿಕೆ, ನಾನು ಪಕ್ಷಕ್ಕೆ ಯಾರನ್ನೂ ಬೇಡ ಎಂದಿಲ್ಲ. ಅವರು ಜವಬ್ದಾರಿ ಹೊತ್ತು ಕೆಲಸ ಮಾಡಲು ಮುಂದೆ ಬರಬೇಕಲ್ಲವೇ? ಸುಮ್ಮನೆ ನಮ್ಮ ಪಕ್ಷವನ್ನೆ ಟೀಕೆ ಟಿಪ್ಪಣಿ ಮಾಡಿದರೆ ಹೇಗೆ? ಈ ಬಗ್ಗೆ ನೀವು ಅವರಿಗೆ ತಿಳಿ ಹೇಳಬೇಕಲ್ಲವೇ? ಎಂದು ಗರಂ ಆಗಿದ್ದಾರೆ. ದೊಡ್ಡವರ ಬಳಿ ಮಾತನಾಡಿ, ನನ್ನದೇನು ಅಭ್ಯಂತರವಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ ಎಂದು ಆಪ್ತ ಮೂಲಗಳು ಖಚಿತಪಡಿಸಿವೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಕೊಡಲಿಲ್ಲ ಎಂದು ಬೇಸರಿಸಿಕೊಂಡಿರುವ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರನ್ನು ಮತ್ತೆ ಮಾತನಾಡಿಸಿ, ಅವರಿಗೆ ಜವಬ್ದಾರಿ ನೀಡುವ ಬಗ್ಗೆಯೂ ಪಕ್ಷದೊಳಗೆ ಚರ್ಚೆಗಳು ನಡೆದಿವೆ. ದೇವೇಗೌಡರು, ಈ ವಿಷಯ ನನಗೆ ಬಿಡಿ. ಇನ್ನುಳಿದದ್ದನ್ನು ಮಾತನಾಡಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಅಸಮಾಧಾನಗಳು ಸರಿಯಾಗುವುದಾದರೆ, ಅಡಾಕ್ ಕಮಿಟಿಯನ್ನು ಪುನಾರಚಿಸಲು ಗೌಡರು ಯೋಜಿಸಿದ್ದಾರೆ. ಆದರೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಬಗ್ಗೆ ಏನು ನಿರ್ಣಯ ಮಾಡಬೇಕು ಎನ್ನುವ ಸಮಸ್ಯೆಯ ಸವಾಲೂ ಇದೆ. ಗೌಡರು ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೋ ಕಾದು ನೋಡಬೇಕು.