

ತುಮಕೂರು: ಬಿಜೆಪಿ, ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳ ಬಗ್ಗೆ ರಾಜ್ಯದ ಜನತೆ ಬೇಸತ್ತಿದ್ದು, ಮುಂದಿನ ದಿನಗಳಲ್ಲಿ ಸ್ವತಂತ್ರವಾಗಿ ಜೆಡಿಎಸ್ ಅಧಿಕಾರಕ್ಕೆ ಬರಲು ಆಶೀರ್ವದಿಸಿ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಮನವಿ ಮಾಡಿದರು.
ನಗರದ ಜೆಡಿಎಸ್ ಜಿಲ್ಲಾ ಕಾರ್ಯಾಲಯದ ಆವರಣದಲ್ಲಿ ಭಾನುವಾರ ಸಂಜೆ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಜನಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾರ ಹಂಗಿಲ್ಲದೆ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು. ಕಾರ್ಯಕರ್ತರು ಹಗಲಿರುಳು ಶ್ರಮಿಸಿ ಪಕ್ಷದ ಗೆಲುವಿಗೆ ಸಂಕಲ್ಪ ತೊಡಬೇಕು. ಪಕ್ಷವು ನಿಮ್ಮನ್ನು ಗುರುತಿಸಿ ಸೂಕ್ತಮಾನ ಕೊಡಲಿದೆ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ರಾಜ್ಯದ ಎಲ್ಲ ತಾಯಂದಿರು ವಿಶ್ವಾಸವಿಟ್ಟಿದ್ದು, ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಕಾರ್ಯಕ್ರಮಗಳನ್ನು ಜಾರಿಗೆ ತರಲು 1.25 ಲಕ್ಷ ಕೋಟಿ ರೂ., ಬೇಕಿದ್ದು ಇದು ಸಾಧ್ಯವಿದೆ.
ಆರ್ಥಿಕವಾಗಿ ನಮ್ಮ ರಾಜ್ಯ ಶಕ್ತಿ ಹೊಂದಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಜನರ ಆಶೀರ್ವಾದದಿಂದ ಜೆಡಿಎಸ್ ಅಧಿಕಾರಕ್ಕೆ ಬಂದರೆ ತುಮಕೂರು ನಗರದಲ್ಲಿ 5 ಹೈಟೆಕ್ ಆಸ್ಪತ್ರೆ, 7 ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಿಗುವ ಶಾಲೆಗಳನ್ನು ನಿರ್ಮಿಸಲಾಗುವುದು. ಪಂಚರತ್ನ ಯಾತ್ರೆಯಲ್ಲಿ ಕೊಟ್ಟಿರುವ ಭರವಸೆಗಳನ್ನು ಕುಮಾರಸ್ವಾಮಿ ಈಡೇರಿಸಲಿದ್ದು, ನುಡಿದಂತೆ ನಡೆಯುವ ವ್ಯಕ್ತಿ ಅವರು ಎಂದು ನಗರ ಜೆಡಿಎಸ್ ೋಷಿತ ಅಭ್ಯರ್ಥಿ ಎನ್.ಗೋವಿಂದರಾಜು ಹೇಳಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ ಅಧ್ಯಕ್ಷತೆ ವಹಿಸಿದ್ದರು.
ಜನರ ಬದುಕಿಗೆ ಕಂಟಕವಾಗಿರುವ ಆನ್‌ಲೈನ್ ಗೇಮ್‌ಗಳಿಗೆ ಕಡಿವಾಣ ಹಾಕಬೇಕು. ಆದರೆ, ಎರಡೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ಗೆ ಅದು ಬೇಡ. ಬೇರೆಯವರ ಮನೆ ಹಾಳಾದರೂ ಪರವಾಗಿಲ್ಲ. ಅವರ ಮನೆ ಚೆನ್ನಾಗಿರಬೇಕು, ಅಧಿಕಾರ ಬೇಕಷ್ಟೇ. |ನಿಖಿಲ್ ಕುಮಾರಸ್ವಾಮಿ, ಅಧ್ಯಕ್ಷ, ಜೆಡಿಎಸ್ ರಾಜ್ಯ ಯುವ ಘಟಕ