ಜೆಡಿಎಸ್-ಬಿಜೆಪಿ; ಎರಡು ದಿನದಲ್ಲಿ ಮೈತ್ರಿ ಖಚಿತ, ಸೀಟು ಹಂಚಿಕೆ ನಿಶ್ಚಿತ

JDS Cartoon
Published on

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿರುವ ಜೆಡಿಎಸ್-ಬಿಜೆಪಿ ಮೈತ್ರಿಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತು ಬಿಜೆಪಿ ಹೈಕಮಾಂಡ್ ಜತೆ ಚರ್ಚಿಸಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗುರುವಾರ ನವದೆಹಲಿಗೆ ತೆರಳಲಿದ್ದಾರೆ.

ಮೈತ್ರಿ ಬಗ್ಗೆ ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬಿಜೆಪಿ ಹೈಕಮಾಂಡ್ ಜತೆ ಚರ್ಚಿಸಿ ಅಂತಿಮ ಮುದ್ರೆ ಒತ್ತಿದ್ದಾರೆ. ಈಗ ಸೀಟು ಹಂಚಿಕೆ ವಿಚಾರವಾಗಿ ಚೌಕಾಶಿಗೆ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜತೆ ಸಮಾಲೋಚನೆ ನಡೆಸಲಿದ್ದಾರೆ. ಎರಡು ದಿನ ನವದೆಹಲಿಯಲ್ಲೇ ಬೀಡು ಬಿಡುವ ಕುಮಾರಸ್ವಾಮಿ ಸೀಟು ಹಂಚಿಕೆಯನ್ನು ಅಖೈರುಗೊಳಿಸಿಕೊಂಡೇ ಬೆಂಗಳೂರಿಗೆ ಹಿಂದಿರುಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಜತೆ ಜತೆ ಹೆಜ್ಜೆ ಹಾಕಿದ ಎಚ್‌ಡಿಕೆ

ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ಅಧಿಕೃತ ಪ್ರತಿಪಕ್ಷ ಬಿಜೆಪಿ ಜತೆ ಜತೆಯೇ ಕುಮಾರಸ್ವಾಮಿ ಹೆಜ್ಜೆ ಹಾಕಿದ್ದರು. ಸರ್ಕಾರದ ವಿರುದ್ಧ ನಡೆದ ಎಲ್ಲ ಪ್ರತಿಭಟನೆಗೆ ಬಿಜೆಪಿ ಜತೆ ಕೈಜೋಡಿಸಿದ್ದರು. ಇಲ್ಲವೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದ್ದರು. ಈ ಬೆಳವಣಿಗೆಗಳು ಮೈತ್ರಿಯ ಮುನ್ಸೂಚನೆಯಾಗಿ ಕಂಡಿದ್ದವು.


ಅದಕ್ಕೆ ಸ್ಪಷ್ಟ ರೂಪವೆಂಬಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿ ಮೈತ್ರಿಗೆ ಗ್ರೀನ್ ಸಿಗ್ನಲ್ ಕೊಟ್ಟು ಬಂದಿದ್ದರು. ಅಲ್ಲದೇ ಪ್ರಾದೇಶಿಕ ಪಕ್ಷದ ಉಳಿವಿಗೆ ಮೈತ್ರಿ ಅನಿವಾರ್ಯ ಎಂಬ ಮಾತನ್ನೂ ಅರಮನೆ ಮೈದಾನದಲ್ಲಿ ಇತ್ತೀಚೆಗೆ ನಡೆದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಮಾವೇಶದಲ್ಲಿ ಸ್ಪಷ್ಟ ಸಂದೇಶ ರವಾನಿಸಿದ್ದರು.
ಈಗ ಕುಮಾರಸ್ವಾಮಿ ಮೈತ್ರಿಯ ಸ್ವರೂಪ ಅಂತಿಮಗೊಳಿಸಲಿದ್ದಾರೆ. ಆ ಮೂಲಕ ಜೆಡಿಎಸ್ ಎನ್‌ಡಿಎ ಮೈತ್ರಿಕೂಟವನ್ನು ಅಧಿಕೃತವಾಗಿ ಸೇರಲಿದೆ.

ಕೊಡುಕೊಳ್ಳುವಿಕೆ ನೆಲೆಯಲ್ಲಿ ಮೈತ್ರಿ

ಒಕ್ಕಲಿಗ ಮತ್ತು ಜೆಡಿಎಸ್ ಪ್ರಾಬಲ್ಯವಿರುವ ಕಡೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬಿಜೆಪಿ ಬೆಂಬಲಿಸುವುದು ಹಾಗೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಇರುವ ಕಡೆ ಜೆಡಿಎಸ್ ಕೊಡುಕೊಳ್ಳುವಿಕೆ ನಡೆಸಲಿವೆ.
ಲೋಕಸಭೆ ಚುನಾವಣೆಯಲ್ಲಿ ಆಡಳಿತ ಕಾಂಗ್ರೆಸ್ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಿನಿಂದ ಹೋರಾಟ ನಡಸಲಿವೆ.
ಮೈತ್ರಿ ಅಂತಿಮಗೊಂಡರೆ ಶುಕ್ರವಾರ ಅಥವಾ ಶನಿವಾರ ಉಭಯ ಪಕ್ಷಗಳ ನಾಯಕರು ಜಂಟಿಯಾಗಿ ಮೈತ್ರಿಯನ್ನು ನವದೆಹಲಿಯಲ್ಲಿಯೇ ಪ್ರಕಟಿಸಲಿದ್ದಾರೆ. ಸಂಸತ್ತಿನ ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ನವದೆಹಲಿಯಲ್ಲೇ ಬೀಡು ಬಿಟ್ಟಿರುವ ದೇವೇಗೌಡರು ಮೈತ್ರಿಯ ಸಾರಥ್ಯ ವಹಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.

ಲೋಕಸಭಾ ಚುನಾವಣಾ ಪೂರ್ವ ಹೊಂದಾಣಿಕೆ ವಿಚಾರ ಯಶಸ್ವಿಯಾದರೆ, ಮುಂಬರುವ ಜಿ.ಪಂ.,ತಾ.ಪಂ., ನಗರ ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆ ಚುನಾವಣೆಗಳಲ್ಲೂ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಉತ್ಸುಕವಾಗಿದೆ. ಎರಡೂ ಪಕ್ಷಗಳ ನೇರ ಗುರಿ ಕಾಂಗ್ರೆಸ್ ವಿರುದ್ಧದ ಹೋರಾಟವೇ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net