ಜಯಮಂಗಲಿ ನದಿಗೆ ಜೀವಕಳೆ

Jayamangali_River
Published on

ತುಮಕೂರು: ಕೊರಟಗೆರೆ ತಾಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಭರ್ಜರಿ ಮಳೆಯಿಂದಾಗಿ ಜಯಮಂಗಲಿ ರಭಸದಿಂದ ಹರಿಯುತ್ತಿರುವ ದೃಶ್ಯ ನೋಡಲು ಜನಸಾಗರ ಹರಿದುಬರುತ್ತಿದೆ.

ಇನ್ನೂ ಕೊರಟಗೆರೆ ಪಟ್ಟಣದಲ್ಲಿ ಮುಖ್ಯರಸ್ತೆ ಜಲಾವೃತಗೊಂಡಿದ್ದು ರಸ್ತೆ ವಿಭಜಕವನ್ನು ತೆರವುಗೊಳಿಸಿ ರಸ್ತೆ ಮೇಲೆ ನೀರು ನಿಲ್ಲದಂತೆ ಕೆಳಭಾಗಕ್ಕೆ ಹರಿಯಲು ಜನರೇ ರಾತ್ರಿ ನಿಂತು ಕಾರ್ಯಾಚಾರಣೆ ನಡೆಸಿದ್ದು ವಿಶೇಷವಾಗಿತ್ತು. ಇನ್ನೂ ತಗ್ಗಿನಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿ ರಾತ್ರಿಯಿಡೀ ಜನ ಜಾಗರಣೆ ಮಾಡುವಂತಾಯಿತು.

ಜಯಮಂಗಲಿ ನದಿಗೆ ಜೀವಕಳೆ: 2 ವರ್ಷಗಳ ನಂತರ ಮತ್ತೆ ಜಯಮಂಗಲಿ ನದಿಗೆ ಮತ್ತೆ ಜೀವಕಳೆ ಬಂದಿದೆ. ಚನ್ನಸಾಗರ, ಹಂದ್ರಾಳು, ಪುರವರ, ಇಮ್ಮಡಗೊಂಡನಹಳ್ಳಿ, ವೀರಾಪುರ, ಕಾಳೇನಹಳ್ಳಿ, ಹೊಸಹಳ್ಳಿ, ರೆಡ್ಡಿಹಳ್ಳಿ, ಕೊಡಿಗೇನಹಳ್ಳಿ, ತೆರಿಯೂರು, ಮುದ್ದೇನಹಳ್ಳಿ ಮಾರ್ಗವಾಗಿ ಹರಿಯುವ ಜಯಮಂಗಲಿ ನೆರೆಯ ಆಂಧ್ರ ಸೇರುತ್ತದೆ. ಸದ್ಯ ರೆಡ್ಡಿಹಳ್ಳಿ ಗ್ರಾಮದ ಬಳಿ ಹರಿಯುತ್ತಿರುವ ನದಿ ನೀರಿನ ರಭಸವನ್ನು ಕಣ್ತುಂಬಿಕೊಳ್ಳಲು ಜನ ಸೇತುವೆ ಮೇಲೆ ಮುಗಿಬೀಳುತ್ತಿದ್ದಾರೆ.

ಕೊರಟಗೆರೆಯಲ್ಲೇ ರಾತ್ರಿ ಭರ್ಜರಿ ಮಳೆ ಸುರಿದಿದ್ದು 140.2 ಮಿ.ಮೀ., ಮಳೆ ಪ್ರಮಾಣ ದಾಖಲಾಗಿದೆ. ತುಂಬಾಡಿ&125 ಮಿ.ಮೀ., ಹೊಳವನಹಳ್ಳಿ& 154.2 ಮಿ.ಮೀ., ಮಾವತ್ತೂರು&102.4 ಮಿ.ಮೀ., ತೋವಿನಕೆರೆ& 54.2 ಮಿ.ಮೀ., ಇರಕಸಂದ್ರ ಕಾಲನಿ& 46.2 ಮಿ.ಮೀ., ಕೋಳಾಲ&7.2 ಮಿ.ಮೀ., ಮಳೆ ದಾಖಲಾಗಿದೆ.

ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು ತಾಲೂಕುಗಳಲ್ಲಿ ಮಳೆ ಆರ್ಭಟಿಸಿದ್ದು ಸಾಕಷ್ಟು ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ಜಿಲ್ಲಾಕೇಂದ್ರ ತುಮಕೂರಿನಲ್ಲು ಮಳೆ ಅಬ್ಬರ ಮುಂದುವರೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net