ಜಯಚಾಮರಾಜೇಂದ್ರ ಒಡೆಯರ್ ಪಂಚವಾರ್ಷಿಕ ಯೋಜನೆಗಳ ಜನಕ

Jayachamarajendra Wodeyar jayanthi
Published on

ಮೈಸೂರು: ಮೈಸೂರು ಸಂಸ್ಥಾನದ ಜಯಚಾಮರಾಜೇಂದ್ರ ಒಡೆಯರ್ ಪಂಚವಾರ್ಷಿಕ ಯೋಜನೆಗಳ ಜನಕ. ಭಾರತದ ಏಕೀಕರಣಕ್ಕೆ ಇವರು ಮರೆಯಲಾಗದ ಕೊಡುಗೆ ನೀಡಿದ್ದಾರೆ ಎಂದು ‘ಲಯನ್ಸ್ ಕ್ಲಬ್ ಮೈಸೂರು ನಾಲ್ವಡಿ’ ಸಂಸ್ಥೆಯ ಅಧ್ಯಕ್ಷ ಎನ್. ಬೆಟ್ಟೆಗೌಡ ಹೇಳಿದರು.

‘ಲಯನ್ಸ್ ಕ್ಲಬ್ ಮೈಸೂರು ನಾಲ್ವಡಿ’ ಸಂಸ್ಥೆ ವತಿಯಿಂದ ಗುರುವಾರ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಜಯಚಾಮರಾಜೇಂದ್ರ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ವನ್ಯ ಮೃಗಗಳ ಬಗ್ಗೆ ಒಡೆಯರ್‌ಗೆ ವಿಶೇಷ ಆಸಕ್ತಿ ಇತ್ತು. ಭಾರತೀಯ ಮೃಗಗಳ ಮಂಡಳಿಯ ಅಧ್ಯಕ್ಷರಾಗಿದ್ದಲ್ಲದೆ ನಗರದಲ್ಲಿರುವ ಮೃಗಾಲಯವನ್ನು ಸರ್ಕಾರದ ಅಧೀನಕ್ಕೆ ವಹಿಸಿಕೊಟ್ಟು ಅದರ ಅಭಿವೃದ್ಧಿಗೆ ಕಾರಣರಾದರು. ಜಯಚಾಮರಾಜೇಂದ್ರ ಒಡೆಯರ್ ಸಾಹಿತ್ಯ ಕ್ಷೇತ್ರದಲ್ಲಿಯೂ ಕೂಡ ನಿಪುಣರಾಗಿದ್ದರು. ಸಂಸ್ಕೃತ ಭಾಷೆ, ತತ್ವ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮಾತನಾಡಿ, ಜಯಚಾಮರಾಜ ಒಡೆಯರ್ ದಕ್ಷ ಆಡಳಿತಗಾರ, ತತ್ವಜ್ಞಾನಿ, ರಾಜ ನೀತಿಜ್ಞರಾಗಿದ್ದರು. ಈ ನೆಲದ ಸಂಸ್ಕೃತಿ ಉದ್ದೀಪನಗೊಳಿಸಿದರು. ಸಂಸ್ಕೃತದ ಹಲವು ಮೌಲಿಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸ್ವತಃ ಸಂಗೀತದ ಅಮರ ಪ್ರೇಮಿಯಾಗಿದ್ದ ಅವರು ತಮ್ಮ ಸಂಸ್ಥಾನದಲ್ಲಿ ನೂರಾರು ಸಂಗೀತ ಕಲಾವಿದರಿಗೆ ಆಶ್ರಯ ನೀಡಿದ್ದರು. ಮೈಸೂರಿಗೆ ಸಾಂಸ್ಕೃತಿಕ ನಗರವೆಂಬ ಹೆಸರು ಬರುವಲ್ಲಿ ಅವರ ಒತ್ತಾಸೆಯು ಇತ್ತು ಎಂಬುದನ್ನು ಸ್ಮರಿಸಬೇಕು ಎಂದು ಹೇಳಿದರು.

ಲಯನ್ಸ್ ಕ್ಲಬ್ ಆಫ್ ಇಂಟರ್‌ನ್ಯಾಷನಲ್ ನಿರ್ದೇಶಕ ಡಾ.ನಾಗರಾಜ್ ವಿ. ಬೈರಿ ಮಾತನಾಡಿ, ಜಯಚಾಮರಾಜೇಂದ್ರ ಒಡೆಯರ್ ರಾಜವಂಶಸ್ಥರ ಮಗನಾಗಿದ್ದರು ಸಹ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿ ಎಲ್ಲರ ನಡುವೆ ಉನ್ನತ ಶಿಕ್ಷಣ ಪಡೆದರು. ಆಳ್ವಿಕೆಯಲ್ಲಿ ಪ್ರಜೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದರು ಎಂದು ಹೇಳಿದರು.

ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಸಮಾಜಸೇವಕ ವಿಕ್ರಂ ಅಯ್ಯಂಗಾರ್, ಲಯನ್ಸ್ ಜಿಲ್ಲಾ ರಾಜ್ಯಪಾಲ ಸಿರಿ ಬಾಲು, ಕರ್ನಾಟಕ ಸುಗಮ ಸಂಗೀತ ಪರಿಷತ್ ಮಂಡ್ಯ ಅಧ್ಯಕ್ಷ ಡೇವಿಡ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net