

ಮುಂಬೈ: ಬಾಲಿವುಡ್ನ ಜನಪ್ರಿಯ ಜೋಡಿಗಳಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಕೂಡಾ ಒಬ್ಬರು. ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಇವರಿಬ್ಬರು ವಿಚ್ಛೇದನ ಪಡೆಯತ್ತಿದ್ದಾರೆ ಎನ್ನುವ ಸುದ್ದಿ ಬಾರಿ ಚರ್ಚೆಯಾಗುತ್ತಿದೆ. ಈ ಕುರಿತಾಗಿ ಈ ಜೋಡಿ ಎಲ್ಲೂ ಮಾತನಾಡಿಲ್ಲ. ಈ ಸುದ್ದಿ ಬೆನ್ನಲ್ಲೇ ಸೊಸೆ ಐಶ್ವರ್ಯಳನ್ನು ಕುರಿತು ಜಯ ಬಚ್ಚನ್ ಮಾತನಾಡಿರುವ ಹಳೆ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ವಿಚ್ಛೇದನಕ್ಕೆ ರೇಖಾ ಕಾರಣ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಈ ಸುದ್ದಿ ಬೆನ್ನಲ್ಲೇ ಈ ಹಿಂದೆ ಕಾಫಿ ವಿತ್ ಕರಣ್ ಶೋ ದಲ್ಲಿ ಜಯ ಬಚ್ಚನ್ ಭಾಗಿಯಾಗಿದ್ದ ವೇಳೆ ಜಯಾ, ಐಶ್ವರ್ಯ ರೈ ಬಗ್ಗೆ ಆಡಿರುವ ಮಾತುಗಳ ಹಳೆಯ ತುಣುಕು ವೈರಲ್ ಆಗುತ್ತಿದೆ.
ಜಯಾ ಬಚ್ಚನ್ ಮಾತನಾಡಿ, ಐಶ್ವರ್ಯ ನಮ್ಮ ಕುಟುಂಬದಲ್ಲಿ ಮಗಳ ಹಾಗೆ ಹೊಂದಿಕೊಂಡಿದ್ದಾಳೆ. ಆಮಿತಾಬ್ ಬಚ್ಚನ್ ಮಗಳು ಶ್ವೇತಾಳ ಮದುವೆಯ ನಂತರ ಸೊಸೆಯಲ್ಲಿ ಮಗಳನ್ನು ಕಾಣುತ್ತಿದ್ದಾರೆ. ಮಗಳ ಮದುವೆಯ ನಂತರ ಮನೆಯಲ್ಲಿ ನಿರ್ಮಾಣವಾಗಿದ್ದ ಖಾಲಿತನವನ್ನು ಐಶ್ವರ್ಯ ನೀಗಿಸಿದ್ದಾಳೆ. ತಾನು ಕೂಡ ಒಬ್ಬಳು ಸ್ಟಾರ್ ಆಗಿದ್ದರೂ ನಮ್ಮೊಂದಿಗೆ ಪ್ರೀತಿಯಿಂದ ಹೊಂದಿಕೊಂಡಿರುವ ಅವಳನ್ನು ನಾನು ತುಂಬಾ ಪ್ರೀತಿಸುತ್ತೇನೆ ಎಂದು ಜಯಾ ಹೇಳುತ್ತಾ ಸೊಸೆ ಕುರಿತಾಗಿ ಹೊಗಳಿಕೆ ಸುರಿಮಳೆ ಗೈದಿದ್ದಾರೆ.
ಸೊಸೆ ಐಶ್ವರ್ಯ ರೈ ಗುಣಗಾನ ಮಾಡಿರುವ ಜಯ ಬಚ್ಚನ್ ಐಶ್ವರ್ಯಾಳಿಗೆ ತನ್ನ ಹಿತಬಯಸುವ ನಿಜವಾದ ಮತ್ತು ಒಳ್ಳೆಯ ಗೆಳೆಯರು ಯಾರು ಎನ್ನುವುದು ತಿಳಿದಿದೆ ಎಂದಿದ್ದಾರೆ.
ಜಯ ಬಚ್ಚನ್ ಸಂದರ್ಭ ಸಿಕ್ಕಾಗೆಲ್ಲ ಐಶ್ವರ್ಯ ರೈ ಅನ್ನು ಹೊಗಳುವ ಅವಕಾಶವನ್ನು ಕೈ ಬಿಟ್ಟಿಲ್ಲ. ಇನ್ನೊಂದು ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಅವರು ನಾವಿಬ್ಬರು ಅತ್ತೆ-ಸೊಸೆ ರೀತಿ ಬೆನ್ನ ಹಿಂದೆ ಆಡಿಕೊಳ್ಳುವುದಿಲ್ಲ. ಗೆಳತಿಯರಂತಿರುವ ನಾವು ನಮ್ಮ ನಡುವೆ ಏನಾದರೂ ಬಿನ್ನಾಭಿಪ್ರಾಯ ಬಂದರೆ ನೇರವಾಗಿ ಹೇಳಿಕೊಳ್ಳುತ್ತೇವೆ. ಐಶ್ವರ್ಯ ಸ್ವಲ್ಪ ಡ್ರಾಮಾಟಿಕ್ ಆದರೆ ಗೌರವಯತವಾಗಿ ನಡೆದುಕೊಳ್ಳುತ್ತಾಳೆ ಎಂದು ಹೇಳುತ್ತಾ ಸೊಸೆ ಮೇಲೆ ಪ್ರೀತಿಯ ಮಳೆ ಸುರಿಸಿದ್ದಾರೆ.
ಅನಂತ್ ಅಂಬಾನಿ ಮದುವೆಯಲ್ಲಿ ನಟಿ ರೇಖಾ ಐಶ್ವರ್ಯ ರೈ ಅನ್ನು ಆಲಿಂಗಿಸಿದ ವೀಡಿಯೋ ವೈರಲ್ ಆಗಿತ್ತು. ಆದಾದ ನಂತರ ಐಶ್ವರ್ಯ ಮತ್ತು ಅಭಿಷೇಕ್ ವಿಚ್ಛೇದನಕ್ಕೆ ರೇಖಾ ಕಾರಣ ಎಂದು ಗುಸುಗುಸು ಕೇಳಿ ಬಂದಿತ್ತು. ಈ ಸಂದರ್ಭದಲ್ಲಿ ಜಯ ಬಚ್ಚನ್ ಐಶ್ವರ್ಯ ರೈಗೆ ತನ್ನ ನಿಜವಾದ ಗೆಳತಿಯರು ಯಾರು ಎಂದು ತಿಳಿದಿದೆ ಎಂದಿರುವ ವಿಡಿಯೋ ಹರಿದಾಡಿ ಅದು ಜಯ ಬಚ್ಚನ್ ನಟಿ ರೇಖಾಳ ವಿರುದ್ಧ ಆಡಿರುವ ಮಾತು ಎಂದು ಚರ್ಚೆಯಾಗುತ್ತಿದೆ.
ರೇಖಾ, ಜಯ ಬಚ್ಚನ್ ಮತ್ತು ಅಮಿತಾಬ್ ಬಚ್ಚನ್ ಸಿಲ್ಸಿಲಾ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಅಮಿತಾಬ್ ಬಚ್ಚನ್ ಮತ್ತು ರೇಖಾ ನಡುವೆ ಇದ್ದ ಪ್ರೇಮ ಸಂಬಂಧ ಎಲ್ಲರಿಗೂ ತಿಳಿದಿರುವುದಾಗಿದೆ.