

ನವದೆಹಲಿ: ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಅವರು ಶುಕ್ರವಾರ(ಆಗಸ್ಟ್ 3) ಸದನದಲ್ಲಿ ನಾನು ಜಯಾ ಅಮಿತಾಭ್ ಬಚ್ಚನ್ ಎಂದು ಹೇಳಿಕೊಂಡಾಗ ಇಡೀ ರಾಜ್ಯಸಭೆಯಲ್ಲಿ ಸಂತಸದ ವಾತಾವರಣವಿತ್ತು. ಜಯಾ ಬಚ್ಚನ್ ಅವರು ಪರಿಚಯಿಸಿಕೊಂಡಿದ್ದನ್ನು ಕೇಳಿ ಸಭಾಪತಿ ಜಗದೀಪ್ ಧನಕರ್ ಅವರೇ ಜೋರಾಗಿ ನಕ್ಕರು. ಸದನದಲ್ಲಿ ಕುಳಿತಿದ್ದ ಕಾಂಗ್ರೆಸ್‌ನ ಜೈರಾಮ್ ರಮೇಶ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಘವ್ ಚಡ್ಡಾ ಸೇರಿದಂತೆ ಪ್ರತಿಯೊಬ್ಬರು ನಕ್ಕರು.
ಸರ್, ನಿಮಗೆ ಊಟದ ವಿರಾಮ ಸಿಗಲಿಲ್ಲವೇ? ಅದಕ್ಕೇ ಮತ್ತೆ ಮತ್ತೆ ಜೈರಾಮ್ ರಮೇಶ್ ಅವರ ಹೆಸರನ್ನು ಹೇಳುತ್ತಿದ್ದೀರಿ. ಅವರನ್ನು ಉಲ್ಲೇಖಿಸದೆ ಊಟವು ಜೀರ್ಣವಾಗುವುದಿಲ್ಲವೆಂದು ಭಾವಿಸುತ್ತೇನೆ ಎಂದು ಜಯಾ ಬಚ್ಚನ್ ಸಭಾಪತಿಗಳನ್ನು ಕೇಳಿದರು. ಅದಕ್ಕೆ ಹಾಸ್ಯವಾಗಿ ಉತ್ತರಿಸಿದ ಜಗದೀಪ್ ಧನಕರ್ ಅವರು, ನನಗೆ ಊಟದ ವಿರಾಮ ಸಿಗಲಿಲ್ಲ ಆದರೆ ನಾನು ಜೈರಾಮ್ ರಮೇಶ್ ಅವರೊಂದಿಗೆ ಊಟ ಮಾಡಿದೆ ಎಂದು ಹೇಳಿದರು.
ಬಳಿಕ ಅವರು, ನಾನು ಅಮಿತಾಭ್ ಜಿ ಮತ್ತು ನಿಮ್ಮಿಬ್ಬರ ಅಭಿಮಾನಿ ಎಂದು ಹೇಳುತ್ತಿರುವುದು ಇದೇ ಮೊದಲು. ನಿಮ್ಮಿಬ್ಬರಂತೆ ನಾನು ಬೇರೆ ಯಾವುದೇ ಜೋಡಿಯನ್ನು ಭೇಟಿ ಮಾಡಿಲ್ಲ ಎಂದು ಹೇಳಿದರು.
ಕೆಲ ದಿನಗಳ ಹಿಂದೆ ರಾಜ್ಯಸಭೆಯಲ್ಲಿ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು ಜಯಾ ಅಮಿತಾಭ್ ಬಚ್ಚನ್ ಎಂದು ಕರೆದಿದ್ದಕ್ಕೆ ಜಯಾ ಬಚ್ಚನ್ ಅಸಮಾಧಾನ ವ್ಯಕ್ತಪಡಿಸಿದ್ದರು. ನನ್ನನ್ನು ಜಯಾ ಬಚ್ಚನ್ ಎಂದು ಕರೆದರೆ ಸಾಕು, ಅಮಿತಾಭ್ ಬಚ್ಚನ್ ಎಂದು ಕರೆಯುವ ಅಗತ್ಯವಿಲ್ಲ ಎಂದಿದ್ದರು.
ಮಹಿಳೆಯರು ತಮ್ಮ ಗಂಡನ ಹೆಸರಿನಿಂದ ಗುರುತಿಸಲ್ಪಡಬೇಕು ಎಂಬ ಕೆಲವು ಹೊಸ ಮಾರ್ಗಗಳು ಬರುತ್ತಿವೆ. ಗಂಡನ ಹೆಸರಿನಿಂದ ಮಾತ್ರ ಮಹಿಳೆಯರು ಗುರುತಿಸಿಕೊಳ್ಳುತ್ತಾರೆಯೇ.. ಅವರು ಯಾವುದೇ ಸಾಧನೆ ಮಾಡಿಲ್ಲವೆ. ಅವರಿಗೆ ಸ್ವಂತ ಅಸ್ತಿತ್ವ ಇಲ್ಲವೇ ಎಂದು ಪ್ರಶ್ನಿಸಿದರು. ಅದೂ ಅಲ್ಲದೆ ತಾನು ಯಾವುದೇ ಯಶಸ್ಸು ಸಾಧಿಸಿಲ್ಲವೇ ಎಂದು ಜಯಾ ಬಚ್ಚನ್ ಸಿಡಿಮಿಡಿಗೊಂಸಿದ್ದರು.(ಏಜೆನ್ಸೀಸ್)