

ಟೋಕಿಯೊ: ಮೋಟರ್ ಬೈಕ್ನಷ್ಟು ದೊಡ್ಡ ಗಾತ್ರ ಹಾಗೂ ತೂಕದಷ್ಟಿರುವ ಒಂದು ಟ್ಯೂನಾ ಮೀನು ಜಪಾನ್ನ ಪ್ರಮುಖ ಫಿಶ್ ಮಾರ್ಕೆಟ್ನಲ್ಲಿ ಭಾನುವಾರ ನಡೆದ ಹೊಸ ವರ್ಷದ ಹರಾಜಿನಲ್ಲಿ 207 ದಶಲಕ್ಷ ಯೆನ್ಗೆ (11 ಕೋಟಿ ರೂಪಾಯಿ) ಬಿಕರಿಯಾಗಿದೆ. 276 ಕೆ.ಜಿ., ಅಂದರೆ 608 ಪೌಂಡ್ ತೂಕದ ಈ ಬೃಹತ್ ಮೀನನ್ನು ಟೋಕಿಯೋ ಮೀನು ಮಾರುಕಟ್ಟೆಯ ಬಿಡ್ಡಿಂಗ್ನಲ್ಲಿ 1.3 ದಶಲಕ್ಷ ಡಾಲರ್ಗೆ ತಾನು ಕೊಂಡಿದ್ದಾಗಿ ಒನೊಡೆರಾ ರೆಸ್ಟೋರೆಂಟ್ಗಳ ಸಮೂಹ ಪ್ರಕಟಿಸಿದೆ. ಇದು ಟೋಕಿಯೋದ ಪ್ರಮುಖ ಮೀನು ಮಾರ್ಕೆಟ್ನಲ್ಲಿ ವರ್ಷಾರಂಭದ ಹರಾಜಿನಲ್ಲಿ ಮೀನೊಂದು ಪಡೆದ ಎರಡನೇ ಅತಿ ಹೆಚ್ಚು ಮೊತ್ತವಾಗಿದೆ. ಒನೊಡೆರಾ ಸಮೂಹ ಕಳೆದ ವರ್ಷದ ಬಿಡ್ಡಿಂಗ್ನಲ್ಲಿ 114 ದಶಲಕ್ಷ ಯೆನ್ಗೆ ಟ್ಯೂನಾ ಖರೀದಿಸಿತ್ತು ಎಂದು ಅದರ ಅಧಿಕಾರಿ ಷಿಂಜಿ ನಗಾವೋ ತಿಳಿಸಿದ್ದಾರೆ.
2019ರಲ್ಲಿ 278 ಕೆಜಿ ತೂಕದ ಟ್ಯೂನಾಕ್ಕೆ 336.6 ದಶಲಕ್ಷ ಯೆನ್ ಹಣ ನೀಡಿದ್ದೇ ಇದುವರೆಗೆ ಟ್ಯೂನಾ ಪಡೆದ ಅತಿ ಹೆಚ್ಚಿನ ಬಿಡ್ ದರವಾಗಿದೆ. ಮೊದಲ ಟ್ಯೂನಾದಿಂದ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆಯೇ ಬಿಡ್ನಲ್ಲಿ ಹೆಚ್ಚು ಹಣಕೊಟ್ಟು ಅದನ್ನು ಕೊಳ್ಳಲು ಮೇಲಾಟ ನಡೆಯಲು ಕಾರಣವಾಗಿದೆ.