

ಸೊರಬ: ಮನುಷ್ಯ ಜನ್ಮ ದೊರಕುವುದು ಪೂರ್ವಜನ್ಮದ ಪುಣ್ಯದ ಫಲದಿಂದಾಗಿ. ಅಂತಹ ಜನ್ಮವನ್ನು ದೇವರ ಹಾಗೂ ಸತ್ಕಾರ್ಯ ಮಾಡುವ ಮೂಲಕ ಸಾರ್ಥಕವಾಗಿಸಿಕೊಳ್ಳಬೇಕು ಎಂದು ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಕುದುರೆಗಣಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಪ್ರವೇಶೋತ್ಸವ, ನೂತನ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಮಹೋತ್ಸವದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ದುಶ್ಚಟ ಮಾಡುವ ಮೂಲಕ ಮಾನವ ಆರೋಗ್ಯ ಹಾಳುಮಾಡಿಕೊಳ್ಳದೆ ಸನ್ನಡತೆಯಲ್ಲಿ ಬದುಕಬೇಕು ಎಂದರು.
ಭಾರತೀಯ ಪರಂಪರೆಯಲ್ಲಿ ಮನುಷ್ಯ ಮಹಾದೇವನ ಒಂದು ಅಂಶ ಎಂದಿದ್ದಾರೆ. ಉಪನಿಷತ್ತುಗಳೂ ಇದನ್ನೇ ಉಲ್ಲೇಖಿಸಿವೆ. ಆತ್ಮವು ಪರಮಾತ್ಮನ ಒಂದು ಅಂಶ ಎಂದಿವೆ. ಇಂತಹ ಭಗವಂತ ವಾಸವಾಗಿರುವ ದೇಹದಲ್ಲಿ ಮನುಷ್ಯ ದುಶ್ಚಟ ಮಾಡಿದರೆ ಆ ದೇಹದಲ್ಲಿ ದೇವರು ವಾಸವಾಗುವನೇ? ಮನೆಯಲ್ಲಿ ಮಕ್ಕಳು ತಪ್ಪು ಮಾಡಿದರೆ ತಂದೆ-ತಾಯಿ ಬೈದು ಬಡಿದು ಸರಿದಾರಿಗೆ ತರುವಂತೆ ಇಂದು ತಪ್ಪು ಮಾಡುವವರನ್ನು ನಾವು ಸರಿ ದಾರಿಗೆ ತರಬೇಕಿದೆ ಎಂದು ಅಭಿಪ್ರಾಯಪಟ್ಟರು.
ದುಗ್ಲಿ ಹಾಗೂ ಕಡೇನಂದಿಹಳ್ಳಿ ಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರು ಮಾತನಾಡಿ, ದೇವರು ನಮ್ಮ ಭಕ್ತಿಯನ್ನು ನೋಡುತ್ತಾನೆ. ದೇವರನ್ನು ಒಲಿಸಿಕೊಳ್ಳಲು ಅನನ್ಯ ಭಕ್ತಿಯನ್ನು ತೋರಬೇಕಾಗುತ್ತದೆ. ಹಾಗೆ ಮಾಡಿದಾಗ ದೇವನೊಲುಮೆ ಸಾಧ್ಯ ಎಂದು ತಿಳಿಸಿದರು.
ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಮಹಾಂತ ಸ್ವಾಮೀಜಿ ದೇವರ ದರ್ಶನ ಪಡೆದರು. ಪ್ರವೇಶೋತ್ಸವದ ಅಂಗವಾಗಿ ಆಲಯ ಶುದ್ಧೀಕರಣ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬ್ರಾಹ್ಮೀ ಮುಹೂರ್ತದಲ್ಲಿ ದೇವಾಲಯದ ಪ್ರವೇಶೋತ್ಸವ, ಸಂಜೆ ಗ್ರಾಮದಲ್ಲಿ ವಿವಿಧ ಕಲಾ ಮೇಳಗಳೊಂದಿಗೆ ಶ್ರೀ ವೀರಭದ್ರೇಶ್ವರ ರಾಜಬೀದಿ ಉತ್ಸವ ನೆರವೇರಿತು.
ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅರಮನೆ ಮಠ ಇವರ ಪೌರೋಹಿತ್ಯದಲ್ಲಿ ಗಣಪತಿ ದೇವರು, ಶಕ್ತಿದೇವತೆ ಹಾಗೂ ವೀರಭದ್ರ ದೇವರ ಶಿಲಾ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಮಹಿಳೆಯರಿಂದ ಪೂರ್ಣಕುಂಭ ಮೇರವಣಿಗೆ, ಕಳಸಾರೋಹಣ ನೆರವೇರಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಆರ್.ಅಣ್ಣಪ್ಪ, ಗೌರಿ ಕೆರೆ ಮಠದ ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಯುವರಾಜ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಗುರುಕುಮಾರ ಪಾಟೀಲ್, ಪಿಎಸಿಎಸ್ ಅಧ್ಯಕ್ಷ ಕೆರಿಯಪ್ಪ, ಶ್ರೀಧರ ಹುಲ್ತಿಕೊಪ್ಪ, ಸೈಯದ್, ಹನುಮಂತಪ್ಪ, ಶಶಿಧರ ಗೌಡ, ಮಲ್ಲಿಕಾರ್ಜುನ ಗೌಡ, ರುದ್ರಗೌಡ, ಸತೀಶ್ ಗೌಡ, ಹೇಮಂತ, ಪರಶುರಾಮಪ್ಪ, ಬಾಲಚಂದ್ರ, ಗಣಪತಿ, ಪ್ರಶಾಂತ್, ಮಂಜಪ್ಪ ಇತರರಿದ್ದರು.