ಈ ಖುಷಿ ನನ್ನ ಕುಟುಂಬಕ್ಕೆ ಬೇಕಿತ್ತು; ಮಧ್ಯಂತರ ಜಾಮೀನಿನ ಬೆನ್ನಲ್ಲೇ ಪತ್ನಿ ಜತೆ ಸುತ್ತಾಡಿದ ಜಾನಿ | Jani Master

ವಿಜಯವಾಣಿ - 2024-11-15T211133.423
Published on

ತೆಲಂಗಾಣ: ತಮಿಳು, ತೆಲುಗು ಚಿತ್ರಮಂದಿರಗಳಲ್ಲಿ ತನ್ನದೇ ಹೆಸರು ಸ್ಥಾಪಿಸಿಕೊಂಡಿರುವ ಸ್ಟಾರ್​ ಡ್ಯಾನ್ಸ್ ಕೋರಿಯೋಗ್ರಾಫರ್​ ಜಾನಿ ಮಾಸ್ಟರ್ (Jani Master) ವಿರುದ್ಧ ಕೇಳಿಬಂದ ಅತ್ಯಾಚಾರ ಆರೋಪವು ಟಾಲಿವುಡ್​ ಅಂಗಳದಲ್ಲಿ ದೊಡ್ಡ ಗೊಂದಲವನ್ನೇ ಸೃಷ್ಟಿಸಿತ್ತು. ಸೆ.16ರಂದು ಶೈಖ್ ಜಾನಿ ಬಾಷಾ ಅಲಿಯಾಸ್​ ಜಾನಿ ಮಾಸ್ಟರ್​ ವಿರುದ್ಧ 21 ವರ್ಷದ ಅನಾಮಧೇಯ ಯುವತಿಯೊಬ್ಬಳು ತನ್ನ ಮೇಲೆ ಜಾನಿ ಮಾಸ್ಟರ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದರು. ಈ ಪ್ರಕರಣ ದಾಖಲಿಸಿಕೊಂಡ ನರಸಿಂಗಿ ಪೊಲೀಸರು ಜಾನಿಯನ್ನು ಗೋವಾದಲ್ಲಿ ಬಂಧಿಸಿ, ಹೈದರಾಬಾದ್​ಗೆ ಕರೆತಂದರು. ಒಂದಷ್ಟು ದಿನಗಳ ಕಾಲ ಕಸ್ಟಡಿಯಲ್ಲಿರಿಸಿ ತನಿಖೆ ನಡೆಸಿದ ಬಳಿಕ ಅ.24ರಂದು ತೆಲಂಗಾಣ ಕೋರ್ಟ್​ ಜಾನಿಗೆ ಮಧ್ಯಂತರ ಜಾಮೀನು ಘೋಷಿಸಿತು.

ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿರುವ ಕೋರ್ಟ್​, ಹಲವು ಕಠಿಣ ನಿಯಮಗಳನ್ನು ಜಾನಿಗೆ ವಿಧಿಸಿದೆ. ಈ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಜಾನಿ ಮಾಸ್ಟರ್​ಗೆ ಶಿಕ್ಷೆ ಮತ್ತಷ್ಟು ಕಠಿಣವಾಗಬಹುದು. ಪ್ರಸ್ತುತ ಹೊರಗಿರುವ ಡ್ಯಾನ್ಸ್​ ಕೋರಿಯೋಗ್ರಾಫರ್​, ತನ್ನ ಪತ್ನಿ ಅಯೇಷಾ ಮತ್ತು ಮಗುವಿನ ಜತೆ ಪ್ರವಾಸ ಕೈಗೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಒಂದಷ್ಟು ಫೋಟೋಗಳನ್ನು ತಮ್ಮ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಕುಟುಂಬದೊಂದಿಗೆ ಆನಂದದ ಕ್ಷಣಗಳನ್ನು ಕಳೆದಿರುವ ಜಾನಿ ಮಾಸ್ಟರ್​, ತಾನು ಯಾವ ಜಾಗಕ್ಕೆ ತೆರಳಿದ್ದೇನೆ ಎಂಬುದನ್ನು ತಿಳಿಸದೆ, ಕೇವಲ ಒಂದೆರೆಡು ಸಾಲುಗಳಲ್ಲಿ ತಮ್ಮ ಭಾವನೆಯನ್ನು ವಿವರಿಸಿದ್ದಾರೆ. ನಾವು ಏನೆಲ್ಲಾ ಎದುರಿಸಿದ್ದೀವಿ, ಅದಾದ ಮೇಲೆ ಈ ಖುಷಿ ನನ್ನ ಕುಟುಂಬಕ್ಕೆ ಬೇಕಿತ್ತು. ಈ ಸಂತಸಕ್ಕೆ ಅವರು ಅರ್ಹರು ಎಂದು ಬರೆದುಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net