ಸರ್ಕಾರಿ ನೌಕರರಿಗೊಂದು ಅಪ್ಡೇಟ್; ವಿಮೆ ಮಾಡಿಸಲು ಆರ್ಥಿಕ ಇಲಾಖೆ ಕೋರಿಕೆ

Vidhanasoudha
Published on

ಬೆಂಗಳೂರು: ರಾಜ್ಯ ಸರ್ಕಾರದ ಸೇವೆಯಲ್ಲಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ಪ್ರಧಾನ ಮಂತ್ರಿ ಜನಧನ ಯೋಜನೆಯಡಿ ವಿಮಾ ಪಾಲಿಸಿ ಮಾಡಿಸಲು ಪ್ರೇರೇಪಿಸುವಂತೆ ಆರ್ಥಿಕ ಇಲಾಖೆಯು ಸರ್ಕಾರಿ ನೌಕರರ ಸಂಘಕ್ಕೆ ಪತ್ರ ಬರೆದಿದೆ.

ಸರ್ಕಾರದ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿ ವರ್ಗದವರು ಅನಿರೀಕ್ಷಿತ ಸಂದರ್ಭಗಳಲ್ಲಿ ಅಥವಾ ಅಪಘಾತಕ್ಕೊಳಗಾದಲ್ಲಿ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಆರ್ಥಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಗಳಡಿ ವಿಮಾ ಪಾಲಿಸಿ ಮಾಡಿಸಲು ತಮ್ಮ ಸದಸ್ಯರಿಗೆ ಪ್ರೇರೇಪಿಸುವಂತೆ ಸೂಚಿಸಲಾಗಿದೆ.

ಲಾಭವೇನು?

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಗೆ ವಾರ್ಷಿಕ 436 ರೂ. ಪ್ರೀಮಿಯಂ ಅನ್ನು ವಿಮಾದಾರರ ಬ್ಯಾಂಕ್ ಖಾತೆ ಮೂಲಕ ಪಾವತಿಸಬೇಕಾಗುತ್ತದೆ. ಯಾವುದೇ ಕಾರಣದಿಂದ ವಿಮಾದಾರ ಮರಣ ಸಂಭವಿಸಿದರೆ ಅವಲಂಬಿತ ಕುಟುಂಬ ಸದಸ್ಯರಿಗೆ 2 ಲಕ್ಷ ರೂ. ವಿಮಾನ ನೆರವು ಸಿಗಲಿದೆ. ಈ ಯೋಜನೆ 50 ವರ್ಷದೊಳಗಿನವರಿಗೆ ಮಾತ್ರ ಲಭ್ಯವಿರುತ್ತದೆ.

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯು ಅಪಘಾತ ವಿಮಾ ಯೋಜನೆಯಾಗಿದ್ದು ವಾರ್ಷಿಕ 20 ರೂ. ಪ್ರೀಮಿಯಂ ಪಾವತಿಸುವುದು, ಒಂದು ವೇಳೆ ಅಪಘಾತವಾಗಿ ಮೃತಪಟ್ಟರೆ ಅಥವಾ ಶಾಶ್ವತವಾಗಿ ಅಂಗವೈಕಲ್ಯಕ್ಕೆ 1 ಲಕ್ಷ ರು. ವಿಮಾ ಮೊತ್ತದ ನೆರವು ಸಿಗಲಿದೆ.

ಸಂಪರ್ಕ ಹೇಗೆ?

ವಿಮಾ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಬಹುಮಹಡಿ ಕಟ್ಟಡದಲ್ಲಿರುವ ಆರ್ಥಿಕ ಇಲಾಖೆಯ ಸಲಹೆಗಾರರ (3ನೇ ಹಂತ)ನ್ನು ಸಂಪರ್ಕಿಸಬಹುದು. (ದೂರವಾಣಿ: 22032499). ಬೇರೆ ಯೋಜನೆಗಳಲ್ಲಿ ವಿಮಾ ಪಾಲಿಸಿ ಮಾಡಿಸಿದ್ದರೂ ಸಹ ಈ ಯೋಜನೆಗಳಡಿ ವಿಮಾ ಪಾಲಿಸಿ ಮಾಡಿಸುವಂತೆ ಸದಸ್ಯರನ್ನು ಮನವೊಲಿಸುವಂತೆ ಸರ್ಕಾರದ ಕಾರ್ಯದರ್ಶಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net