

ರಾಮನಗರ : ಜಾನಪದ ಲೋಕ ಜಿಲ್ಲೆಯ ಹೆಮ್ಮೆಯ ಕಲಾಕ್ಷೇತ್ರವಾಗಿದ್ದು, ಜಿಲ್ಲೆಯಲ್ಲಿ ಪ್ರವಾಸೋದ್ಯಮ ವರ್ತುಲ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.
ನಗರ ಹೊರವಲಯದ ಜಾನಪದ ಲೋಕದಲ್ಲಿ ಜಾನಪದ ಪರಿಷತ್, ರಾಜ್ಯ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಮೂರು ದಿನಗಳ ಪ್ರವಾಸಿ ಜಾನಪದ ಲೋಕೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಪ್ರವಾಸೋದ್ಯಮ ಇಲಾಖೆಯಲ್ಲಿ ಒಂದು ರಾಜ್ಯ ಹಲವು ಜಗತ್ತು ಎಂಬ ಘೋಷ ವಾಕ್ಯದಡಿ, ಇಡೀ ಜಗತ್ತನ್ನು ಸುತ್ತಿ ಪ್ರವಾಸಿ ತಾಣಗಳನ್ನು ನೋಡುವ ಬದಲಿಗೆ ಕರ್ನಾಟಕದಲ್ಲಿರುವ ವೈವಿಧ್ಯಮಯ ನೂರಾರು ತಾಣಗಳನ್ನು ವೀಕ್ಷಣೆ ಮಾಡಿದರೆ ಸಾಕು ಎಂಬುದಕ್ಕೆ ಸಾಕಷ್ಟು ಅವಕಾಶಗಳಿವೆ.
40 ವರ್ಷಗಳಿಂದ ಜಾನಪದ ಲೋಕದ ಅಭಿವೃದ್ಧಿ ಕುಂಟುತ್ತಾ ಸಾಗುತ್ತಿದೆ. ಸರ್ಕಾರ ಸಹ ಲೋಕದ ನಿರ್ವಹಣೆ ಮತ್ತು ಸಿಬ್ಬಂದಿ ವೇತನಕ್ಕೆ ಅನುದಾನ ನೀಡುತ್ತಿದೆ. ಅದಕ್ಕೆ ಪೂರಕವಾಗಿ ಬೆಂಗಳೂರು ನಗರದಂತಹ ಪ್ರದೇಶದಿಂದ ಬರುವ ಪ್ರವಾಸಿಗರು ಒಂದು ಬಾರಿ ನೋಡಲೇಬೇಕಾದ ವಾತಾವರಣ ಇಲ್ಲಿ ನಿರ್ಮಾಣವಾಗಬೇಕು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಾ ಕೇಂದ್ರವಾಗಿ ರೂಪಿಸಬೇಕೆಂಬ ಅಧ್ಯಕ್ಷರ ಯೋಜನೆ ಅರ್ಥಪೂರ್ಣವಾಗಿದ್ದು, ಜಾನಪದ ಲೋಕವನ್ನು ಪ್ರವಾಸೋದ್ಯಮ ಇಲಾಖೆಯಿಂದ ಉನ್ನತೀಕರಿಸುವ ಮೂಲಕ ಕಾಯಕಲ್ಪ ನೀಡುವುದಕ್ಕಾಗಿ ಯೋಜನೆ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ರಾಮನಗರ ಜಿಲ್ಲೆ ಪ್ರಾಕೃತಿಕ ಪ್ರವಾಸಿ ತಾಣಗಳನ್ನು ಹೊಂದಿರುವ ಪ್ರದೇಶವಾಗಿದೆ.
ಮಂಚನಬೆಲೆ, ಕಣ್ವ ಜಲಾಶಯಗಳು, ಇವುಗಳಿಗೆ ಹೊಂದಿಕೊಂಡಂತೆ ಬೆಟ್ಟಗುಡ್ಡಗಳ ಸಾಲಿದೆ. ಆದ್ದರಿಂದ ನಾಲ್ಕು ತಾಲೂಕುಗಳನ್ನು ಒಳಗೊಂಡಂತೆ ಪ್ರವಾಸಿಗರಿಗೆ ಯಾತ್ರಿ ನಿವಾಸ, ಹೋಟೆಲ್‌ಗಳನ್ನು ನಿರ್ಮಿಸಿ, ಮೂಲಸೌಕರ್ಯ ಕಲ್ಪಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ನೀಲಿನಕ್ಕೆ ಸಿದ್ಧಪಡಿಸಲಾಗಿದೆ. ಇದರ ಜತೆಗೆ ಮೂರು ದಿನ ನೋಡಬಹುದಾದ ಪ್ರವಾಸಿ ತಾಣಗಳನ್ನು ಜಿಲ್ಲೆ ಹೊಂದಿದೆ ಎಂದರು.