

ಬೆಂಗಳೂರು:
ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆಗೆ ತಕ್ಕ ಉತ್ತರ ನೀಡಲು ಜನಾಂದೋಲನ ನಡೆಸಲು ಕಾಂಗ್ರೆಸ್ ಮುಂದಾಗಿದ್ದರಿಂದ ಎಲ್ಲರ ಚಿತ್ತ ಪಾದಯಾತ್ರೆಯತ್ತಲೇ ಹೊರಳಿದ್ದರಿಂದ, ಶಕ್ತಿಸೌಧದಲ್ಲಿ ಸಚಿವರುಗಳು ಕಾಣಿಸಿಕೊಳ್ಳುತ್ತಿಲ್ಲ.
ಕೆಪಿಸಿಸಿ ಅಧ್ಯಕ್ಷರು ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಜನಾಂದೋಲನ ಸಭೆಗಳು ನಡೆಯುತ್ತಿರುವುದರಿಂದ ಆ ಸಭೆಗಳನ್ನು ಸಂಘಟನೆ ಮಾಡುವ ಮತ್ತು ಅದರಲ್ಲಿ ಕಡ್ಡಾಯವಾಗಿ ಭಾಗವಹಿಸುವ ಸೂಚನೆಯನ್ನು ಸಂಪುಟ ಸಚಿವರಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವರುಗಳು ತಂಡೋಪ ತಂಡವಾಗಿ ಜನಾಂದೋಲನ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಆ.9ರಂದು ಮೈಸೂರಿನಲ್ಲಿ ನಡೆಯಲಿರುವ ಜನಾಂದೋಲನ ಸಭೆಯಲ್ಲಿ ಎಲ್ಲಾ ಸಚಿವರ ಹಾಜರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ. ಅಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಭಾಗವಹಿಸಲಿದ್ದು, ಕಾಂಗ್ರೆಸ್‌ನ ಕೇಂದ್ರ ನಾಯಕರಿಗೂ ಆಹ್ವಾನಿಸಲಾಗಿದೆ. ಆ ಸಭೆಯ ಜನಶಕ್ತಿಯ ಮೂಲಕ ವಿರೋಧ ಪಕ್ಷಗಳಿಗೆ ತಕ್ಕ ಉತ್ತರ ನೀಡುವ ಮೂಲಕ ಅವರನ್ನು ಕಟ್ಟಿಹಾಕುವ ಪ್ರಯತ್ನವನ್ನು ಆಡಳಿತ ಪಕ್ಷ ಮಾಡಲು ಮುಂದಾಗಿದೆ. ಜನಶಕ್ತಿಯ ಮೂಲಕ ಅವರನ್ನು ಮಣಿಸಿ ಅವರು ಎತ್ತಿರುವ ಎಲ್ಲ ಆರೋಪಗಳಿಗೆ ಅದೇ ವೇದಿಕೆಯಲ್ಲಿ ಉತ್ತರ ನೀಡಲಾಗುವುದು ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರದಿಂದ ಸಚಿವರು ಬರಲಿದ್ದಾರೆ. ಅಲ್ಲಿಯ ತನಕ ಪಕ್ಷದ ಸೂಚನೆಯನ್ನು ಪಾಲನೆ ಮಾಡುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.