ಬೆಂಗಳೂರಿನಲ್ಲಿ ಜನಕ್ರಾಂತಿ ಸಮಾವೇಶ 8ಕ್ಕೆ

DSS
Gurumurthy
Published on

ಶಿವಮೊಗ್ಗ: ಕೋಮುವಾದ ಧಿಕ್ಕರಿಸಿ ಸಂವಿಧಾನ ರಕ್ಷಿಸಿ ಎಂಬ ಘೋಷವಾಕ್ಯದೊಂದಿಗೆ ಮೇ 8ರ ಬೆಳಗ್ಗೆ 11ಕ್ಕೆ ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಜನಕ್ರಾಂತಿ ಸಮಾವೇಶ ಮತ್ತು ಅಂಬೇಡ್ಕರ್ ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಹೇಳಿದರು.

ಸಂವಿಧಾನ ಬದಲಿಸಬೇಕೆಂಬ ಹುನ್ನಾರ ನಡೆಯುತ್ತಿದೆ. ಅಂಬೇಡ್ಕರ್ ಅವರನ್ನು ಕಡೆಗಾಣಿಸಲು ಸಾಧ್ಯವಿಲ್ಲ ಎಂಬುದು ಮನದಟ್ಟಾದ ಬಳಿಕ ಅವರನ್ನು ವೈಭವೀಕರಿಸುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹಮ್ಮಿಕೊಂಡಿರುವ ಸಮಾವೇಶದಲ್ಲಿ 750 ಕಾರ್ಯಕರ್ತರು ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಲಿತ ಮುಖಂಡ ಶಿವಬಸಪ್ಪ ಮಾತನಾಡಿ, ಸಮಾವೇಶದಲ್ಲಿ ಕೆಲವು ಹಕ್ಕತ್ತಾಯಗಳನ್ನು ಮಂಡಿಸಲಾಗುವುದು. ದಲಿತರಿಗೆ ಮೀಸಲಿಟ್ಟ ಹಣವನ್ನು ಬೇರೆ ಯಾವುದೇ ಉದ್ದೇಶಕ್ಕೂ ಬಳಸಬಾರದು. ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ದಲಿತರಿಗೆ ಹಕ್ಕುಪತ್ರ ನೀಡಬೇಕು. ಸಾಮಾಜಿಕ ಭದ್ರತಾ ಪಿಂಚಣಿ ಮೊತ್ತ ಹೆಚ್ಚಿಸಬೇಕು. ವಿಧವೆಯರಿಗೆ ಮತ್ತು ದೇವದಾಸಿಯರಿಗೆ ಜಮೀನು ಮಂಜೂರು ಮಾಡಬೇಕು. ಬಿ.ಕೃಷ್ಣಪ್ಪ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂಬುದು ನಮ್ಮ ಪ್ರಮುಖ ಆಗ್ರಹವಾಗಿದೆ ಎಂದರು.

ಪ್ರಮುಖರಾದ ಏಳುಕೋಟಿ, ರಮೇಶ್ ಚಿಕ್ಕಮರಡಿ, ಹನುಮಂತಪ್ಪ ಯಡವಾಲ, ನಾಗರಾಜ್, ರಾಜಶೇಖರ್, ಹರಿಗೆ ರವಿ, ಪರಶುರಾಮ, ಶ್ರೀನಿವಾಸ, ಬೊಮ್ಮನಕಟ್ಟೆ ಕೃಷ್ಣ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net