Bihar Election | ಜನ ಸುರಾಜ್ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟ; ಪ್ರಶಾಂತ್​ ಕಿಶೋರ್​ ನಡೆ ಇನ್ನೂ ನಿಗೂಢ !

Prashant Kishor
Published on

Bihar Election: ಬಿಹಾರ ವಿಧಾನಸಭಾ ಚುನಾವಣೆಗೆ ಜನ ಸುರಾಜ್ ಪಕ್ಷ ಸೋಮವಾರ ( ಅ 13) 66 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, Prashant Kishor ಆರ್​ಜೆಡಿಯ ಯಾದವ್ ಕುಟುಂಬದ ಭದ್ರಕೋಟೆ ರಾಘೋಪುರ್‌ನಿಂದ ಸ್ಪರ್ಧಿಸಲಿದ್ದಾರೋ, ಇಲ್ಲವೋ ಎಂಬ ಕುತೂಹಲ ಹಾಗೇ ಮುಂದುವರೆದಿದೆ.

ಪ್ರಶಾಂತ್ ಕಿಶೋರ್ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜನ್ ಸುರಾಜ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಸಿಂಗ್ ಪಟ್ಟಿ ಬಿಡುಗಡೆ ಮಾಡಿದರು.

ಟಿಕೆಟ್​ ಹಂಚಿಕೆಯಲ್ಲಿ 19 ಮೀಸಲು ಕ್ಷೇತ್ರಗಳಿಗೆ, 14 ಸ್ಥಾನಗಳು ಅತ್ಯಂತ ಹಿಂದುಳಿದ ವರ್ಗಗಳಿಗೆ ಸೇರಿವೆ, ಇದರಲ್ಲಿ 10 ಹಿಂದೂ ಮತ್ತು 4 ಮುಸ್ಲಿಂ ಅಭ್ಯರ್ಥಿಗಳು ಸೇರಿದ್ದಾರೆ. ಕಮಲೇಶ್ ಪಾಸ್ವಾನ್ ನಿತೀಶ್ ಕುಮಾರ್ ಅವರ ತವರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಈ ಪಟ್ಟಿಯಲ್ಲಿ ತೇಜಸ್ವಿ ಯಾದವ್​ ಪ್ರತಿನಿಧಿಸುವ ರಾಘೋಪುರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿಲ್ಲ. ತೇಜಸ್ವಿ ಇಲ್ಲಿಂದ ಹ್ಯಾಟ್ರಿಕ್ ಗೆಲುವು ಸಾಧಿಸುವ ಇರಾದೆಯಲ್ಲಿದ್ದಾರೆ. ಈಗಾಗಲೇ ಘೋಷಿಸಲಾದ ಹೆಸರುಗಳಲ್ಲಿ ಭೋಜ್‌ಪುರಿ ಗಾಯಕ ರಿತೇಶ್ ಪಾಂಡೆ, ಮಾಜಿ ಐಪಿಎಸ್ ಅಧಿಕಾರಿ ಆರ್‌ಕೆ ಮಿಶ್ರಾ ಮತ್ತು ಸಮಾಜವಾದಿ ಪಕ್ಷದ ಹಿರಿಯ ನಾಯಕರಾಗಿದ್ದ ಕರ್ಪೂರಿ ಠಾಕೂರ್ ಅವರ ಮೊಮ್ಮಗಳು ಜಾಗೃತಿ ಠಾಕೂರ್ ಸೇರಿದ್ದಾರೆ. ಈ ಪಟ್ಟಿಯಲ್ಲಿ ಶಿಕ್ಷಣ ತಜ್ಞರು, ವೈದ್ಯರು ಮತ್ತು ವಕೀಲರು ಕೂಡ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಘೋಪುರ ಕ್ಷೇತ್ರದ ಬಗ್ಗೆ ಸುಳಿವು ನೀಡಿದ್ದ ಪ್ರಶಾಂತ್​...

ರಾಘೋಪುರ ಕ್ಷೇತ್ರದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಕಿಶೋರ್, 2019 ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಥಿಯಲ್ಲಿ ಸೋತ ರೀತಿಯಲ್ಲೇ, ಯಾದವ್​ರನ್ನು ಸೋಲಿಸುವ ಉದ್ದೇಶ ಹೊಂದಿದ್ದೇನೆ. ಕಳೆದ ವರ್ಷದಿಂದ ಅವರ ಪಾದಯಾತ್ರೆ ಅಭಿಯಾನವು ಹಲವಾರು ಜಿಲ್ಲೆಗಳ ತಲುಪಿದ್ದು, ಈ ವೇಲೆ ಹೋದಲ್ಲೆಲ್ಲಾ ಆರ್​ಜೆಡಿ ಮತ್ತು ಬಿಜೆಪಿಯ ಆಡಳಿತ ವೈಫಲ್ಯಗಳನ್ನು ಪ್ರಮುಖ ವಿಷಯವನ್ನಾಗಿಟ್ಟುಕೊಂಡು ಪ್ರಚಾರ ಕಣಕ್ಕೆ ಧುಮುಕಿದ್ದಾರೆ.

ಕಳೆದ ಒಂದು ವರ್ಷದಿಂದ ಬಿಹಾರದ ಅನೇಕ ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸಿರುವ ಕಿಶೋರ್, ಪಾಟ್ನಾದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ವೈಶಾಲಿ ಜಿಲ್ಲೆಯ ರಾಘೋಪುರ ಕ್ಷೇತ್ರವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಅವರನ್ನು ಹೂಮಾಲೆ ಮತ್ತು ಡ್ರಮ್‌ಗಳೊಂದಿಗೆ ಸ್ವಾಗತಿಸಲಾಯಿತು. ತಮ್ಮ ಭೇಟಿಯ ವೇಳೆ ಜನರೊಂದಿಗೆ ಸಂವಾದ ನಡೆಸುತ್ತಿದ್ದಾಗ ಸ್ಥಲೀಯರು ಅಲ್ಲಿನ ಶಾಲೆಗಳಲ್ಲಿನ ಕೊರತೆ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ದೂರು ನೀಡುತಿದ್ದರು ಎಂದು ತಿಳಿದುಬಂದಿದೆ.

ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು , ನವೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net