

ಬೆಂಗಳೂರು: ಬಿಜೆಪಿಗೆ ಬಂದ ಶಾಸಕ ಎಸ್.ಟಿ.ಸೋಮಶೇಖರ್ ವಿಷ ಕುಡಿದಿದ್ದಾರಾ ?. ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದರೆ ಇದೇ ಮಾತು ಹೇಳುತ್ತಿದ್ದರೆ ? ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮರು ಪ್ರಶ್ನಿಸುವ ಮೂಲಕ ಜಾಮೂನ್ ನೀಡಿ ಪಕ್ಷಕ್ಕೆ ಸ್ವಾಗತಿಸಿದವರು ಅಧಿಕಾರ ಕಳೆದುಕೊಂಡ ಬಳಿಕ ವಿಷ ನೀಡುತ್ತಿದ್ದಾರೆ ಎಂಬ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಬುಧವಾರ ಸುದ್ದಿಗಾರರಿಗೆ ಈಶ್ವರಪ್ಪ ಉತ್ತರಿಸಿ, ಜಾಮೂನ್ ತಿಂದರು, ಪಕ್ಷ ಅಧಿಕಾರಕ್ಕೆ ಬಂತು. ಅವರೊಂದಿಗೆ ನಾವು ಮಂತ್ರಿಗಳಾದೆವು. ಕರೆದುಕೊಂಡು ಬಂದಾಗ, ಹೋಗುವಾಗ ಬಿಜೆಪಿಯವರು ಹೇಗಿರುತ್ತಾರೆ ಎಂದು ಜನರಿಗೆ ಚೆನ್ನಾಗಿ ಗೊತ್ತಿದೆ.
ಬಸವರಾಜ ಬೊಮ್ಮಾಯಿ ಬಂದ ಮೇಲೆ ಸಿಎಂ ಸ್ಥಾನ ಕೊಟ್ಟೆವು, ಅವರಿಗೆ ವಿಷ ಕೊಟ್ಟಿಲ್ಲ. ಹಾಗೆಯೇ 17 ಜನ ಶಾಸಕರು ಬಿಜೆಪಿ ಜತೆಯಲ್ಲೇ ಇದ್ದಾರೆ. ಅವರಲ್ಲಿ ಯಾರೊಬ್ಬರೂ ವಿಷ ಕೊಟ್ಟಿದ್ದಾರೆ ಎಂದು ಹೇಳಿಲ್ಲ. ಮಾಜಿ ಸಚಿವ ಮುನಿರತ್ನ ಅವರಂತೂ ಪ್ರಾಣ ಹೋದರೂ ಬಿಟ್ಟು ಹೋಗಲ್ಲ ಎಂದಿದ್ದಾರೆ.
ಪಕ್ಷದಲ್ಲಿದ್ದುಕೊಂಡು ಪಕ್ಷವನ್ನು ಟೀಕಿಸಬೇಡಿ. ಪಕ್ಷದಲ್ಲಿ ನಿಷ್ಠೆ, ನಂಬಿಕೆಯಿದ್ದರೆ ನಮ್ಮೊಂದಿಗೆ ಇರಿ ಎಂದಿರುವೆ. ಅಧಿಕಾರ ಇದ್ದರೆ ಮಾತ್ರ ಬರುತ್ತೇನೆ, ಇಲ್ಲದಿದ್ದರೆ ಹೋಗುತ್ತೇನೆ ಎಂದರೆ ಅದು ಅವರ ಇಷ್ಟ. ಅವರನ್ನು ಗೂಟು ಹೊಡೆದು ಇಟ್ಟುಕೊಳ್ಳಲು ಅಥವಾ ಹೋಗು ಎನ್ನಲು ನಾನ್ಯಾರು ? ಇದ್ದರೆ ಇರಬಹುದು, ಬಿಟ್ಟು ಹೋಗುವುದಿದ್ದರೆ ಹೋಗಬಹುದು. ಅವರಿಗೆ ಅವರದ್ದೇ ಆದ ಸ್ವಾತಂತ್ರ್ಯವಿದೆ ಎಂದು ಕೆ.ಎಸ್.ಈಶ್ವರಪ್ಪ ಅಸಹನೆ ಹೊರ ಹಾಕಿದರು.
ಎಚ್.ಕಾಂತರಾಜು ಆಯೋಗ ಸಲ್ಲಿಸಿದ ಜಾತಿ ಗಣತಿ ವರದಿ ನವೆಂಬರ್‌ನಲ್ಲಿ ಸ್ವೀಕರಿಸುವೆ ಎಂದು ಸಿಎಂ ಸಿದ್ದರಾಮಯ್ಯ ಸಾವಿರ ಬಾರಿ ಹೇಳಿದ್ದಾರೆ. ಅದೂ ಹಿಂದುಳಿದ, ದಲಿತ ಸ್ವಾಮೀಜಿಗಳ ಒಕ್ಕೂಟದ ಸಭೆಯಲ್ಲೇ ಈ ಮಾತು ಕೊಟ್ಟಿದ್ದಾರೆ.
ನವೆಂಬರ್ ಬಂದಾಗಿದೆ, ಆಯೋಗ ಕೊಟ್ಟ ತಕ್ಷಣ ವರದಿ ಸ್ವೀಕರಿಸಲಿ. ಸದಸ್ಯ ಕಾರ್ಯದರ್ಶಿ ಸಹಿ ಇಲ್ಲದ ಈ ವರದಿ ಹೇಗೆ ಮಾನ್ಯವಾಗುತ್ತದೋ ಗೊತ್ತಿಲ್ಲ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ವರದಿ ಸ್ವೀಕರಿಸುವುದನ್ನು ವಿರೋಧಿಸುತ್ತಿದ್ದಾರೆ. ವರದಿ ಸ್ವೀಕರಿಸದಿದ್ದರೆ ಸಿದ್ದರಾಮಯ್ಯ ಅವರಿಗೆ ಸಾಧು, ಸಂತರ ಶಾಪ ತಟ್ಟಲಿದೆ ಎಂದರು.
ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿರುತ್ತಾರೋ ತಿಳಿಯದು. ರೈತರ ಆಶೀರ್ವಾದ ಪಡೆಯಲು ಬೆಳೆ ನಷ್ಟ ಪರಿಹಾರ ವಿತರಿಸುವ ಕರ್ತವ್ಯ ನಿರ್ವಹಿಸಲಿ. ಜನರಿಗೆ ಗ್ಯಾರಂಟಿ ಟೋಪಿ ಹಾಕಿ, ಮಂತ್ರಿಗಳು ಲೂಟಿ ಹೊಡೆಯಲು ಪೈಪೋಟಿಗೆ ಇಳಿದಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ತಿವಿದರು.