

ನವದೆಹಲಿ: ಲಾಕ್ಡೌನ್ ನಡುವೆಯೂ ಭಾರತದ ಮೇಲೆ ದಾಳಿ ನಡೆಸಲು ಸಜ್ಜಾಗಿ ನಿಂತಿರುವ ಪಾಕಿಸ್ತಾನದ ಉಗ್ರರ ಹೆಣಗಳನ್ನು ಭಾರತೀಯ ಯೋಧರು ಉರುಳಿಸುತ್ತಲೇ ಇದ್ದಾರೆ. ಕಳೆದ ವಾರವಷ್ಟೇ ಕಾಶ್ಮೀರದ ಕುಲ್ಗಾಂವ್ ಜಿಲ್ಲೆಯಲ್ಲಿ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಬೆನ್ನಲ್ಲೇ ನಿನ್ನೆ ಸಂಜೆ ಮತ್ತೆ ಇಬ್ಬರು ಉಗ್ರರನ್ನು ಯೋಧರು ಎನ್ಕೌಂಟರ್ ಮಾಡಿದ್ದಾರೆ.
ಈ ಇಬ್ಬರು ಉಗ್ರರನ್ನು ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಸದಸ್ಯರು ಎಂದು ಗುರುತಿಸಲಾಗಿದೆ. ಕುಲ್ಗಾಮ್ ಜಿಲ್ಲೆಯ ವಾನ್‌ಪೊರಾ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ.
ವಾನ್‌ಪೊರಾ ಪ್ರಾಂತ್ಯದಲ್ಲಿ ಉಗ್ರರು ಅಡಗಿರುವ ಬಗ್ಗೆ ಭಾರತೀಯ ಯೋಧರಿಗೆ ಮಾಹಿತಿ ಸಿಕ್ಕಿತ್ತು. ಇದರ ಜಾಡು ಹಿಡಿದ ಯೋಧರು ಶುಕ್ರವಾರವೇ ಉಗ್ರರ ಅಡಗುತಾಣದ ಸಮೀಪ ಹೋಗಿದ್ದರು. ಆಗ ಸುಮಾರು ಮಧ್ಯರಾತ್ರಿ 2 ಗಂಟೆಯ ಸಮಯ. ಏಕಾಏಕಿ ದಾಳಿ ಮಾಡದ ಯೋಧರು ಮೊದಲಿಗೆ, ಶರಣಾಗುವಂತೆ ಉಗ್ರರಿಗೆ ತಿಳಿಸಿದರು. ಆದರೆ ಉಗ್ರರು ಈ ಮಾತನ್ನು ಕೇಳಲಿಲ್ಲ. ಬದಲಿಗೆ ಜೀವದಾನ ಮಾಡಲು ಬಂದ ಭಾರತೀಯ ಯೋಧರ ಮೇಲೆಯೇ ಗುಂಡಿನ ಚಕಮಕಿ ನಡೆಸಿದರು.
ಈ ಚಕಮಕಿಯು ನಸುಕಿನ 5 ಗಂಟೆವರೆಗೂ ಜಾರಿಯಲ್ಲಿತ್ತು. ಈ ಸಮಯದಲ್ಲಿ ಕೂಡ ಯೋಧರು ಉಗ್ರರನ್ನು ಹೊಡೆದುರುಳಿಸಲಿಲ್ಲ. ಬದಲಿಗೆ ಮೊದಲೇ ಮಾಡಿಕೊಂಡ ಯೋಜನೆಯಂತೆ ಈ ಉಗ್ರರ ಪಾಲಕರನ್ನು ಕರೆಯೊಯ್ದು ಶರಣಾಗುವಂತೆ ಮನವಿ ಮಾಡಿಕೊಳ್ಳಲಾಯಿತು. ಪಾಲಕರು ಶರಣಾಗುವಂತೆ ಹೇಳಿದರೂ ಉಗ್ರರು ಕೇಳಲಿಲ್ಲ. ಅವರ ಮನವೊಲಿಸಲು ಮಾಡಿದ ಪ್ರಯತ್ನಗಳು ವಿಫಲವಾದವು. ಅಷ್ಟೇ ಅಲ್ಲದೇ ಉಗ್ರರು ಪ್ರತಿ ದಾಳಿ ನಡೆಸಲು ಶುರು ಮಾಡಿದರು.
ಬೇರೆ ದಾರಿ ಕಾಣದ ಭಾರತೀಯ ಯೋಧರು ಎನ್ಕೌಂಟರ್ ಮಾಡಬೇಕಾಯಿತು. ಈ ಸಮಯದಲ್ಲಿ ಇಬ್ಬರು ಉಗ್ರರು ಹತರಾದರು ಎಂದು ಜಮ್ಮು ಮತ್ತು ಕಾಶ್ಮೀರದ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ಹೇಳಿದ್ದಾರೆ. (ಏಜೆನ್ಸೀಸ್)